IPL 2020 ಸದ್ದಿಲ್ಲದೇ ಮುಂಬೈ ಇಂಡಿಯನ್ಸ್ ಕೂಡಿಕೊಂಡ್ರಾ ಅರ್ಜುನ್ ತೆಂಡುಲ್ಕರ್..!
ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ 5ನೇ ಐಪಿಎಲ್ ಕಪ್ ಮೇಲೆ ಚಿತ್ತ ನೆಟ್ಟಿದೆ. ಹೀಗಿರುವಾಗಲೇ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ಮುಂಬೈ ಇಂಡಿಯನ್ಸ್ ಪಾಳಯದಲ್ಲಿ ಕಾಣಿಸಿಕೊಳ್ಳುವ ಮೂಲಕ ಸಂಚಲನ ಮೂಡಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ದುಬೈ(ಸೆ.15): ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ ಮತ್ತೊಂದು ಐಪಿಎಲ್ ಟ್ರೋಫಿಯ ಮೇಲೆ ಚಿತ್ತವನ್ನು ನೆಟ್ಟಿದೆ. 13ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಸಕಲ ರೀತಿಯಲ್ಲಿಯೂ ಸಜ್ಜಾಗುತ್ತಿರುವ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ 5ನೇ ಕಪ್ ಗೆಲ್ಲುವ ಕನವರಿಕೆಯಲ್ಲಿದೆ.
ಸೆಪ್ಟೆಂಬರ್ 19ರಿಂದ ಆರಂಭವಾಗಲಿರುವ ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಗೆ ಮುಂಬೈ ಇಂಡಿಯನ್ಸ್ ಸೇರಿದಂತೆ ಎಲ್ಲಾ 8 ತಂಡಗಳು ಮೈದಾನದಲ್ಲಿ ಅಭ್ಯಾಸ ನಡೆಸಲಾರಂಭಿಸಿವೆ. ಇದರಲ್ಲಿ ಹೊಸ ವಿಷ್ಯಾ ಏನಪ್ಪಾ ಅಂದ್ರೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ಇದೀಗ ಮುಂಬೈ ಇಂಡಿಯನ್ಸ್ ಪಾಳಯದಲ್ಲಿ ಕಾಣಿಸಿಕೊಳ್ಳುವ ಮೂಲಕ ಸಾಕಷ್ಟು ಸಂಚಲನ ಮೂಡಿಸಿದ್ದಾರೆ.
ಹೌದು, ಮುಂಬೈ ಇಂಡಿಯನ್ಸ್ ತಂಡದ ವೇಗಿಗಳಾದ ಟ್ರೆಂಟ್ ಬೌಲ್ಟ್ ಹಾಗೂ ಜೇಮ್ಸ್ ಪ್ಯಾಟಿನ್‌ಸನ್ ಅವರ ಜತೆ ಅರ್ಜುನ್ ತೆಂಡುಲ್ಕರ್ ಕಾಣಿಸಿಕೊಂಡಿದ್ದಾರೆ. ಸ್ವಿಮ್ಮಿಂಗ್ ಪೂಲ್‌ನಲ್ಲಿ ಬೌಲ್ಟ್, ಪ್ಯಾಟಿನ್‌ಸನ್ ಹಾಗೂ ರಾಹುಲ್ ಚಹರ್ ಜತೆ ಎಡಗೈ ವೇಗಿಯಾಗಿರುವ ಅರ್ಜುನ್ ತೆಂಡುಲ್ಕರ್ ಕಾಣಿಸಿಕೊಂಡಿದ್ದಾರೆ. 2020ರ ಐಪಿಎಲ್ ಆಟಗಾರರ ಹರಾಜಿನಲ್ಲಿ ಅರ್ಜುನ್ ತೆಂಡುಲ್ಕರ್ ಪಾಲ್ಗೊಂಡಿರಲಿಲ್ಲ. ಆದರೂ ಅರ್ಜುನ್ ಮುಂಬೈ ಇಂಡಿಯನ್ಸ್ ಪಾಳಯದಲ್ಲಿ ಕಾಣಿಸಿಕೊಂಡಿರುವುದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.
ಐಪಿಎಲ್ ಅಭಿಮಾನಿಗಳಿಗೆ ಸಿಕ್ತು ಮತ್ತೊಂದು ಗುಡ್ ನ್ಯೂಸ್..!
ಅರ್ಜುನ್ ತೆಂಡುಲ್ಕರ್ ಮುಂಬೈ ಇಂಡಿಯನ್ಸ್ ಕ್ಯಾಂಪ್‌ನಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಮುಂಬೈ ಫ್ರಾಂಚೈಸಿ ಕೂಡಾ ಅರ್ಜುನ್ ಜತೆ ಯಾವುದೇ ಒಪ್ಪಂದವನ್ನು ಮಾಡಿಕೊಂಡಿಲ್ಲ. ಮೂಲಗಳ ಪ್ರಕಾರ ಮುಂಬೈ ಇಂಡಿಯನ್ಸ್ ತಂಡ ಅರ್ಜುನ್ ಅವರನ್ನು ನೆಟ್ ಬೌಲರ್ ಆಗಿ ಆಯ್ದುಕೊಂಡು ಮುಂಬೈಗೆ ಕರೆದೊಯ್ದಿದೆ ಎನ್ನಲಾಗಿದೆ. ಅರಬ್ಬರ ನಾಡಿನಲ್ಲಿ ನೆಟ್ ಬೌಲರ್‌ಗಳ ಕೊರತೆ ಎದುರಿಸುತ್ತಿರುವುದರಿಂದ ಎಲ್ಲಾ 8 ಫ್ರಾಂಚೈಸಿಗಳು ತಮಗೆ ಬೇಕಾದ ನೆಟ್ ಬೌಲರ್‌ಗಳನ್ನು ಯುಎಇಗೆ ಕರೆದುಕೊಂಡು ಹೋಗಿವೆ.
ಅರ್ಜುನ್ ತೆಂಡುಲ್ಕರ್ ಕೇವಲ ಮುಂಬೈ ಇಂಡಿಯನ್ಸ್ ಮಾತ್ರವಲ್ಲ, ಟೀಂ ಇಂಡಿಯಾಗೂ ಕೆಲಕಾಲ ನೆಟ್ ಸೆಷನ್‌ನಲ್ಲಿ ಬೌಲಿಂಗ್ ಮಾಡಿ ಸೈ ಎನಿಸಿಕೊಂಡಿದ್ದಾರೆ. ಅರ್ಜುನ್ ತೆಂಡುಲ್ಕರ್ ಜತೆ ಮುಂಬೈ ಫ್ರಾಂಚೈಸಿ ಯಾವುದೇ ಒಪ್ಪಂದ ಮಾಡಿಕೊಳ್ಳದೇ ಇದ್ದರೂ ಅವರು ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಳ್ಳುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಟೂರ್ನಿ ಆರಂಭದ ಬಳಿಕ ಬದಲಿ ಆಟಗಾರನಾಗಿ ಅರ್ಜುನ್ ತಂಡ ಕೂಡಿಕೊಂಡರೂ ಅಚ್ಚರಿಯಿಲ್ಲ.