ದುಬೈ(ಸೆ.20):  ಮೊಹಮ್ಮದ್ ಶಮಿ ದಾಳಿಗೆ ತತ್ತರಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಅಂತಿಮ ಹಂತದಲ್ಲಿ ಮಾರ್ಕಸ್ ಸ್ಟೊಯ್ನಿಸ್ ಬ್ಯಾಟಿಂಗ್ ನೆರವಿನಿಂದ ಸ್ಪರ್ಧಾತ್ಮಕ ಮೊತ್ತ ಪೇರಿಸಿತು.  ನಾಯಕ ಶ್ರೇಯಸ್ ಅಯ್ಯರ್ , ರಿಷಬ್ ಪಂತ್ ಹಾಗೂ ಸ್ಟೊಯ್ನಿಸ್ ಹೋರಾಟದಿಂದ ಡೆಲ್ಲಿ ಕ್ಯಾಪಿಟಲ್ಸ್ 8 ವಿಕೆಟ್ ಕಳೆದುಕೊಂಡು 157 ರನ್ ಸಿಡಿಸಿದೆ.  

ಟಾಸ್ ಸೋತು ಬ್ಯಾಟಿಂಗ್ ಇಳಿದ ಡೆಲ್ಲಿ ಕ್ಯಾಪಿಟಲ್ಸ್ ಆರಂಭದಲ್ಲಿ ತಮ್ಮ ಸ್ಫೋಟಕ ಬ್ಯಾಟ್ಸ್‌ಮನ್ ಕಳೆದುಕೊಂಡಿತು. ಪೃಥ್ವಿ ಶಾ ಹಾಗೂ ಶಿಖರ್ ಧವನ್ ಅಬ್ಬರಿಸಲಿಲ್ಲ. ಕೆರಿಬಿಯನ್ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದ ಶಿಮ್ರೊನ್ ಹೆಟ್ಮೆಯರ್ ಕೇವಲ 7 ರನ್ ಸಿಡಿಸಿ ನಿರ್ಗಮಿಸಿದರು. 

ನಾಯಕ ಶ್ರೇಯಸ್ ಅಯ್ಯರ್ ಹಾಗೂ ರಿಷಬ್ ಪಂತ್ ಜೊತೆಯಾಟದಿಂದ ಡೆಲ್ಲಿ ಕ್ಯಾಪಿಟಲ್ಸ್ ಚೇತರಿಸಿಕೊಂಡಿತು. ಪಂತ್ 31 ರನ್ ಸಿಡಿಸಿದರೆ, ಅಯ್ಯರ್ 39 ರನ್ ಸಿಡಿಸಿದರು.  ಮಾರ್ಕಸ್ ಸ್ಟೊಯ್ನಿಸ್ ಆಸರೆಯಾದರು. ಆದರೆ ಇತರರಿಂದ ಉತ್ತಮ ಸಾಥ್ ಸಿಗಲಿಲ್ಲ. ಅಕ್ಸರ್ ಪಟೇಲ್ ಕೇವಲ 2 ರನ್ ಸಿಡಿಸಿ ನಿರ್ಗಮಿಸಿದರು

ಮಾರ್ಕಸ್ ಸ್ಟೊಯ್ನಿಸ್ ಅಬ್ಬರದಿಂದ ಡೆಲ್ಲಿ ಮತ್ತೆ ಪುಟಿದು ನಿಂತಿತು. 21 ಎಸೆತದಲ್ಲಿ ಸ್ಟೊಯ್ನಿಸ್  53 ರನ್ ಸಿಡಿಸಿ ರನ್ ಔಟ್ ಆದರು. ಸ್ಟೊಯ್ನಿಸ್ ಆರ್ಭಟದಿಂದ ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ಡೆಲ್ಲಿ ತಂಡ 8  ವಿಕೆಟ್ ನಷ್ಟಕ್ಕೆ 157 ರನ್ ಸಿಡಿಸಿತು. ಮೊಹಮ್ಮದ್ ಶಮಿ 3 ಹಾಗೂ ಶೆಲ್ಡನ್ ಕಾಟ್ರೆಲ್ 2 ವಿಕೆಟ್ ಕಬಳಿಸಿದರು. ಆದರೆ ಕ್ರಿಸ್ ಜೋರ್ಡನ್ ದುಬಾರಿಯಾದರು.