IPL 2020: CSK ನಿಟ್ಟುಸಿರು, ದೀಪಕ್ ಚಹಾರ್ ಕೊರೋನಾ ಟೆಸ್ಟ್ ನೆಗೆಟಿವ್..!
ಕೊರೋನಾ ಭೀತಿಯಿಂದಾಗಿ ನಲುಗಿ ಹೋಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಿಗೆ ಸಮಾಧಾನಕರವಾದಂತಹ ಸುದ್ದಿಯೊಂದು ಹೊರಬಿದ್ದಿದೆ. ದೀಪಕ್ ಚಹಾರ್ ಕೊರೋನಾ ಸೋಂಕಿನಿಂದ ಗುಣಮುಖರಾಗುವತ್ತ ದಿಟ್ಟ ಹೆಜ್ಜೆಯಿಟ್ಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ದುಬೈ(ಸೆ.10): ಕೊರೋನಾ ಸೋಂಕಿನಿಂದ ಬೆಚ್ಚಿಬಿದ್ದಿದ್ದ ಚೆನ್ನೈ ಸೂಪರ್ ಕಿಂಗ್ಸ್ ಪಾಳಯದಿಂದ ಕೊನೆಗೂ ನೆಮ್ಮದಿಯ ನಿಟ್ಟುಸಿರು ಬಿಡುವಂತಹ ಸುದ್ದಿ ಹೊರಬಿದ್ದಿದೆ. ಸಿಎಸ್‌ಕೆ ತಂಡದ ಸ್ವಿಂಗ್ ಬೌಲರ್ ದೀಪಕ್ ಚಹಾರ್ ಕೊರೋನಾ ಸೋಂಕಿನಿಂದ ಗುಣಮುಖರಾಗುವತ್ತ ದಿಟ್ಟ ಹೆಜ್ಜೆಯಿಟ್ಟಿದ್ದು, 2 ಕೋವಿಡ್ 19 ಟೆಸ್ಟ್‌ಗಳು ನೆಗೆಟಿವ್ ಬಂದಿದೆ.
ಚೆನ್ನೈ ಸೂಪರ್ ಕಿಂಗ್ಸ್ ವೇಗಿ ಬಿಸಿಸಿಐ ನಡೆಸುವ ಕಾರ್ಡಿಯೋವೆಸಾಲ್ಕರ್ ಟೆಸ್ಟ್ ಹಾಗೂ ಇನ್ನೊಂದು ಕೋವಿಡ್ ಟೆಸ್ಟ್‌ಗೆ ಒಳಗಾಗಲಿದ್ದಾರೆ. ಇದಕ್ಕೂ ಮುನ್ನವೇ ದೀಪಕ್ ನೆಟ್ಸ್‌ನಲ್ಲಿ ಅಭ್ಯಾಸ ನಡೆಸಲಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಸಿಇಒ ಕೆ.ಎಸ್. ವಿಶ್ವನಾಥನ್ ಹೇಳಿದ್ದಾರೆ.
ಮುಂದಿನ ಎರಡು-ಮೂರು ದಿನಗಳಲ್ಲಿ ದೀಪಕ್ ಚಹರ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಕೂಡಿಕೊಂಡು ಅಭ್ಯಾಸ ನಡೆಸಲಿದ್ದಾರೆ ಎನ್ನುವ ವಿಶ್ವಾಸವನ್ನು ಸಿಇಒ ವಿಶ್ವನಾಥನ್ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ದೀಪಕ್ ಚಹಾರ್ ಉದ್ಘಾಟನಾ ಪಂದ್ಯದಲ್ಲಿ ಆಡಲಿದ್ದಾರೆ ಎಂದು ಹೇಳಿದ್ದಾರೆ. ಸೆಪ್ಟೆಂಬರ್ 19ರಂದು ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ.
RCB ತಂಡದ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ನಾಯಕ ವಿರಾಟ್ ಕೊಹ್ಲಿ..!
ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನವೇ ಇಬ್ಬರು ಆಟಗಾರರು ಸೇರಿದಂತೆ ಚೆನ್ನೈ ಸೂಪರ್ ಕಿಂಗ್ಸ್‌ನ 13 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದರು. ಇದರ ಬೆನ್ನಲ್ಲೇ ಸಿಎಸ್‌ಕೆ ತಂಡದ ಅನುಭವಿ ಕ್ರಿಕೆಟಿಗರಾದ ಸುರೇಶ್ ರೈನಾ ಹಾಗೂ ಹರ್ಭಜನ್ ಸಿಂಗ್ ಟೂರ್ನಿಯಿಂದ ಹಿಂದೆ ಸರಿದಿದ್ದರು. ಇದು ಸಿಎಸ್‌ಕೆ ತಂಡದ ಪಾಲಿಗೆ ದೊಡ್ಡ ಹೊಡೆತ ಎಂದೇ ಬಣ್ಣಿಸಲಾಗುತಿತ್ತು. ಈ ಎಲ್ಲಾ ಸಂಕಷ್ಟದ ನಡುವೆಯೇ ಸಮಾಧಾನಕರ ಸುದ್ದಿಯೊಂದು ಹೊರಬಿದ್ದಂತಾಗಿದೆ.