ನವದೆಹಲಿ(ಸೆ.02): ಸುರೇಶ್ ರೈನಾ ಆಗಸ್ಟ್ 29ರಂದು ದಿಢೀರ್ ಎನ್ನುವಂತೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ತೊರೆದು ಭಾರತಕ್ಕೆ ಮರಳಿದ್ದು ಇಡೀ ಕ್ರಿಕೆಟ್ ಜಗತ್ತನ್ನೇ ಕೆಲ ಕಾಲ ದಂಗುಬಡಿಸಿತ್ತು. ಇದರ ಬೆನ್ನಲ್ಲೇ ಹಲವು ಗಾಳಿ ಸುದ್ದಿಗಳು ಸಾಕಷ್ಟು ವೈರಲ್ ಆಗಿದ್ದವು.

ಇದೀಗ ಸ್ವತಃ ಸುರೇಶ್ ರೈನಾ ಆಂಗ್ಲ ಕ್ರೀಡಾಮಾಧ್ಯಮದೊಂದಿಗೆ ಮಾತನಾಡಿದ್ದು, ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಕೂಡಿಕೊಳ್ಳುವ ಸುಳಿವನ್ನು ನೀಡಿದ್ದಾರೆ. ಇನ್ನು ಸಿಎಸ್‌ಕೆ ಮೂಲಗಳು ಕೂಡಾ ಸುರೇಶ್ ರೈನಾ ಮುಂದಿನ ನಾಲ್ಕೈದು ವರ್ಷಗಳ ಕಾಲ ಚೆನ್ನೈ ಮೂಲದ ಫ್ರಾಂಚೈಸಿ ಪರ ಕಣಕ್ಕಿಳಿಯಲಿದ್ದಾರೆ ಎಂದು ಖಚಿತ ಪಡಿಸಿವೆ.

ನಾನು ನನ್ನ ಕುಟುಂಬಕ್ಕೋಸ್ಕರ ತವರಿಗೆ ಮರಳಬೇಕು ಎನ್ನುವುದು ನನ್ನ ವೈಯುಕ್ತಿಕ ತೀರ್ಮಾನವಾಗಿತ್ತು. ಆ ಸಂದರ್ಭದಲ್ಲಿ ನಾನು ತುರ್ತಾಗಿ ಭಾರತಕ್ಕೆ ಮರಳಲೇಬೇಕಿತ್ತು. ಸಿಎಸ್‌ಕೆ ಕೂಡಾ ತನ್ನ ಕುಟುಂಬವೇ. ಇನ್ನು ಮಹೇಂದ್ರ ಸಿಂಗ್ ಧೋನಿ ನನ್ನ ಪಾಲಿನ ಆಪ್ತ ವ್ಯಕ್ತಿ. ನನ್ನ ಹಾಗೂ ಸಿಎಸ್‌ಕೆ ನಡುವೆ ಯಾವುದೇ ಗಲಾಟೆ ಅಥವಾ ಬೇಸರವಾಗಲಿ ಇಲ್ಲ. ಯಾರೂ ಬಲವಾದ ಕಾರಣವಿಲ್ಲದೇ ಸುಮ್ಮನೆ 12.5 ಕೋಟಿ ರುಪಾಯಿಗಳನ್ನು ಕಳೆದುಕೊಳ್ಳಲು ಬಯಸುವುದಿಲ್ಲ. ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರಬಹುದು, ಆದರೆ ನನ್ನಲ್ಲಿ ಇನ್ನೂ ಕ್ರಿಕೆಟ್ ಬಾಕಿ ಇದೆ. ನಾನಿನ್ನು ಮುಂದಿನ ನಾಲ್ಕೈದು ವರ್ಷಗಳ ಕಾಲ ಚೆನ್ನೈ ಫ್ರಾಂಚೈಸಿ ಪರ ಆಡಬೇಕೆಂದಿದ್ದೇನೆ ಎಂದು ಖ್ಯಾತ ಕ್ರೀಡಾ ವೆಬ್‌ಸೈಟ್ ಕ್ರಿಕ್‌ಬಜ್‌ಗೆ ತಿಳಿಸಿದ್ದಾರೆ.

ಮಾವನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ, ಅತ್ತೆ ಸಾವು ಬದುಕಿನ ಜತೆ ಹೋರಾಡುತ್ತಿದ್ದಾರೆ: ರೈನಾ

ನಾನು ಸದ್ಯ ಕ್ವಾರಂಟೈನ್‌ನಲ್ಲಿದ್ದು, ಇಲ್ಲಿಯೇ ಅಭ್ಯಾಸ ನಡೆಸುತ್ತಿದ್ದೇನೆ. ಯಾರಿಗೆ ಗೊತ್ತು, ನೀವು ನನ್ನನ್ನು ಮತ್ತೆ ಚೆನ್ನೈ ಸೂಪರ್‌ ಕಿಂಗ್ಸ್ ತಂಡದಲ್ಲಿ ನೋಡಿದರು ನೋಡಬಹುದು ಎಂದು ಎನ್ನುವ ಮೂಲಕ ತಾವು ಮತ್ತೆ ಸಿಎಸ್‌ಕೆ ತಂಡ ಕೂಡಿಕೊಳ್ಳುವ ಸುಳಿವನ್ನು ನೀಡಿದ್ದಾರೆ.

ಪಠಾಣ್‌ಕೋಟ್‌ನಲ್ಲಿ ಸುರೇಶ್ ರೈನಾ ಮಾವ ಹಾಗೂ ಕಸಿನ್‌ರನ್ನು ಡಕಾಯಿತರ ಗುಂಪೊಂದು ಬರ್ಬರವಾಗಿ ಹತ್ಯೆ ಮಾಡಿತ್ತು. ಇನ್ನೂ ಕೆಲವು ಸದಸ್ಯರು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಪಠಾಣ್‌ಕೋಟ್‌ನಲ್ಲಿ ನಡೆದ ಆ ದುರ್ಘಟನೆ ನಿಜಕ್ಕೂ ಬೆಚ್ಚಿ ಬೀಳಿಸುತ್ತದೆ. ನನ್ನ ಕುಟುಂಬ ಈ ಘಟನೆಯಿಂದ ಸಾಕಷ್ಟು ಆಘಾತಕ್ಕೆ ಒಳಗಾಗಿದೆ. ಅಂತಹ ಸಂದರ್ಭದಲ್ಲಿ ಕುಟುಂಬದ ಜತೆ ನಿಲ್ಲುವುದು ನನ್ನ ಜವಾಬ್ದಾರಿ. ನಾನು ಭಾರತಕ್ಕೆ ಬಂದ ದಿನದಿಂದ ಇಲ್ಲಿಯವರೆಗೂ ಕ್ವಾರಂಟೈನಲ್ಲಿದ್ದೇನೆ. ಹೀಗಾಗಿ ಇನ್ನೂ ನನ್ನ ಕುಟುಂಬವನ್ನು ಭೇಟಿಯಾಗಿಲ್ಲ ಎಂದು ರೈನಾ ಹೇಳಿದ್ದಾರೆ.