ಅಬು​ಧಾ​ಬಿ(ನ.06): ಐಪಿಎಲ್‌ ಫೈನಲ್‌ನಲ್ಲಿ ಆಡುವ ಒಂದು ತಂಡ ಯಾವುದು ಎನ್ನು​ವುದು ಈಗಾ​ಗಲೇ ನಿರ್ಧಾರವಾಗಿದೆ. ಮತ್ತೊಂದು ಸ್ಥಾನ​ಕ್ಕಾಗಿ 3 ತಂಡ​ಗಳು ಪೈಪೋಟಿಯಲ್ಲಿವೆ. ಈ ಪೈಕಿ ಒಂದು ತಂಡದ ಕನಸು ಶುಕ್ರ​ವಾರ ಅಂತ್ಯ​ಗೊ​ಳ್ಳ​ಲಿದೆ. ಇಲ್ಲಿ ನಡೆ​ಯ​ಲಿ​ರುವ ಎಲಿ​ಮಿ​ನೇ​ಟರ್‌ ಪಂದ್ಯ​ದಲ್ಲಿ ರಾಯಲ್‌ ಚಾಲೆಂಜ​ರ್ಸ್ ಬೆಂಗ​ಳೂರು ಹಾಗೂ ಸನ್‌ರೈಸ​ರ್ಸ್ ಹೈದ​ರಾಬಾದ್‌ ಮುಖಾ​ಮುಖಿ​ಯಾ​ಗ​ಲಿದ್ದು, ಸೋಲುವ ತಂಡ ಟೂರ್ನಿಯಿಂದ ಹೊರ​ಬೀ​ಳಲಿದೆ.

ಲೀಗ್‌ ಹಂತದ ಅಂತಿಮ ಘಟ್ಟ​ದಲ್ಲಿ ಸನ್‌ರೈಸ​ರ್ಸ್ ಗೆಲು​ವಿನ ಮೇಲೆ ಗೆಲುವು ಸಾಧಿಸಿ ಆತ್ಮ​ವಿ​ಶ್ವಾಸ ಹೆಚ್ಚಿ​ಸಿ​ಕೊಂಡಿದ್ದರೆ, ಆರ್‌ಸಿಬಿ ಸತತ 4 ಸೋಲು ಕಂಡರೂ ಪ್ಲೇ-ಆಫ್‌ಗೆ ನುಸು​ಳು​ವ​ಲ್ಲಿ ಯಶ​ಸ್ವಿ​ಯಾಗಿತ್ತು. ಆದರೂ ತಂಡದ ಆತ್ಮ​ವಿ​ಶ್ವಾಸಕ್ಕೆ ಭಾರೀ ಪೆಟ್ಟು ಬಿದ್ದಿದ್ದು, ಟೂರ್ನಿಯಲ್ಲಿ ಮುಂದೆ ಸಾಗ​ಬೇ​ಕಿ​ದ್ದರೆ ಸೋಲಿನ ಕಹಿ​ಯನ್ನು ಮರೆಯಬೇಕು ಎಂದು ನಾಯಕ ವಿರಾಟ್‌ ಕೊಹ್ಲಿ ಈಗಾ​ಗಲೇ ಸಹ ಆಟ​ಗಾ​ರ​ರಿಗೆ ಕರೆ ನೀಡಿ​ದ್ದಾರೆ.

ವಾರ್ನರ್‌ ಹಾಗೂ ಸಾಹ ಆರಂಭಿಕರಾಗಿ ಆಡುತ್ತಿರು​ವುದು ಸನ್‌ರೈಸರ್ಸ್ ಪಾಲಿಗೆ ವರ​ದಾ​ನ​ವಾ​ಗಿದೆ. ಜೊತೆಗೆ ಸಂದೀಪ್‌ ಶರ್ಮಾ, ಜೇಸನ್‌ ಹೋಲ್ಡರ್‌, ರಶೀದ್‌ ಖಾನ್‌, ಟಿ.ನ​ಟ​ರಾ​ಜನ್‌ ಹಾಗೂ ಶಾಬಾಜ್‌ ನದೀಂ ಭರ್ಜರಿ ಬೌಲಿಂಗ್‌ ಪ್ರದ​ರ್ಶನ ತೋರುತ್ತಿದ್ದಾರೆ. ತಂಡ ಸಮ​ತೋ​ಲನದಿಂದ ಕೂಡಿದೆ.

ಮತ್ತೊಂದೆಡೆ ಆರ್‌ಸಿಬಿ ಕೊಹ್ಲಿ ಹಾಗೂ ಎಬಿ ಡಿ ವಿಲಿ​ಯ​ರ್ಸ್ ಮೇಲೆಯೇ ಹೆಚ್ಚು ಅವ​ಲಂಬಿತಗೊಂಡಿದೆ. ಇಬ್ಬ​ರಲ್ಲಿ ಒಬ್ಬರಾದ​ರೂ ದೊಡ್ಡ ಇನ್ನಿಂಗ್ಸ್‌ ಆಡಿ​ದರೆ ಮಾತ್ರ ತಂಡ ಗೆಲ್ಲುತ್ತೆ ಎನ್ನುವ ಪರಿ​ಸ್ಥಿತಿ ಮುಂದು​ವ​ರಿ​ದಿದೆ. ದೇವ​ದತ್‌ ಪಡಿ​ಕ್ಕಲ್‌ ಉತ್ತಮ ಲಯ​ದ​ಲ್ಲಿದ್ದು, ಆಲ್ರೌಂಡರ್‌ ಮೋರಿಸ್‌ ಹಾಗೂ ಸ್ಪಿನ್ನರ್‌ ಚಹಲ್‌ ಮೇಲೆ ತಂಡ ವಿಶ್ವಾಸವಿರಿ​ಸಿದೆ. ಗಾಯ​ದಿಂದ ಚೇತ​ರಿ​ಸಿ​ಕೊಂಡಿ​ರು​ವ ವೇಗಿ ನವ್‌ದೀಪ್‌ ಸೈನಿ ಆಡುವ ಸಾಧ್ಯತೆ ಇದೆ. ಜೋಶ್ವಾ ಫಿಲಿಪಿ ಬದ​ಲಿಗೆ ಆ್ಯರೋನ್‌ ಫಿಂಚ್‌ ಆಡುವ ಹನ್ನೊಂದ​ರಲ್ಲಿ ಸ್ಥಾನ ಪಡೆ​ಯುವ ನಿರೀಕ್ಷೆ ಇದೆ.

ಡೆಲ್ಲಿ ಸೋಲಿಸಿ IPL 2020 ಫೈನಲ್ ಪ್ರವೇಶಿಸಿದ ಮುಂಬೈ!

ಸನ್‌ರೈಸ​ರ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಈ ಆವೃ​ತ್ತಿ​ಯನ್ನು ಆರಂಭಿ​ಸಿದ್ದ ಆರ್‌ಸಿಬಿ, 2ನೇ ಮುಖಾ​ಮುಖಿ​ಯಲ್ಲಿ ಸೋಲುಂಡಿತ್ತು. ಈ ಪಂದ್ಯದಲ್ಲಿ ಗೆದ್ದು ಚೊಚ್ಚಲ ಬಾರಿಗೆ ಕಪ್‌ ಗೆಲ್ಲುವ ಕನಸು ಜೀವಂತವಾಗಿ​ರಿ​ಸಿ​ಕೊ​ಳ್ಳಲು ಎದುರು ನೋಡು​ತ್ತಿದೆ.

ಪಿಚ್‌ ರಿಪೋರ್ಟ್‌

ಕಳೆದ 5 ಪಂದ್ಯ​ಗ​ಳಲ್ಲಿ ಇದು ಸರಾ​ಸರಿ 150-160 ರನ್‌ ದಾಖ​ಲಾ​ಗಿದ್ದು, ಐದೂ ಪಂದ್ಯ​ಗ​ಳಲ್ಲಿ ಮೊದಲು ಫೀಲ್ಡ್‌ ಮಾಡಿದ ತಂಡ ಜಯ​ಗ​ಳಿ​ಸಿದೆ. ಹೀಗಾಗಿ ಟಾಸ್‌ ನಿರ್ಣಾಯಕವಾಗ​ಲಿದೆ. ಮೊದಲು ಬ್ಯಾಟ್‌ ಮಾಡು​ವ ತಂಡ 190ಕ್ಕಿಂತ ಹೆಚ್ಚು ಮೊತ್ತ ಗಳಿ​ಸ​ಬೇ​ಕಿದರೆ ರಕ್ಷಿ​ಸಿ​ಕೊ​ಳ್ಳ​ಬ​ಹು​ದಾದ ಸಾಧ್ಯತೆ ಹೆಚ್ಚು.

ಸಂಭಾವ​ನೀಯ ಆಟ​ಗಾ​ರರ ಪಟ್ಟಿ

ಆರ್‌ಸಿಬಿ: ಫಿಲಿ​ಪಿ/ಫಿಂಚ್‌, ಪಡಿ​ಕ್ಕಲ್‌, ಕೊಹ್ಲಿ​(​ನಾ​ಯ​ಕ​), ವಿಲಿ​ಯರ್ಸ್, ಮೋರಿಸ್‌, ವಾಷಿಂಗ್ಟನ್‌, ದುಬೆ, ಉಡಾನ, ಸೈನಿ, ಸಿರಾಜ್‌, ಚಹಲ್‌.

ಸನ್‌ರೈಸರ್ಸ್: ವಾರ್ನರ್‌(ನಾ​ಯ​ಕ), ಸಾಹ, ಪಾಂಡೆ, ವಿಲಿ​ಯ​ಮ್ಸನ್‌, ಗರ್ಗ್‌, ಹೋಲ್ಡರ್‌, ಸಮದ್‌, ರಶೀದ್‌, ನದೀಂ, ಸಂದೀಪ್‌, ನಟ​ರಾ​ಜನ್‌.

ಸ್ಥಳ: ಅಬು​ಧಾಬಿ 
ಪಂದ್ಯ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್