IPL 2020: ಸಿಎಸ್‌ಕೆಗಿಂದು ಬಲಿಷ್ಠ ಕೆಕೆಆರ್ ಸವಾಲು
13ನೇ ಆವೃತ್ತಿಯ ಐಪಿಎಲ್ ಟೂರ್ನಿಯ 21ನೇ ಪಂದ್ಯದಲ್ಲಿಂದು ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ ನೈಟ್ ರೈಡರ್ಸ್ ತಂಡಗಳು ಅಬುಧಾಬಿಯಲ್ಲಿ ಮುಖಾಮುಖಿಯಾಗಲಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಅಬುಧಾಬಿ(ಅ.07): ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್ ಕಳೆದ ಪಂದ್ಯದಲ್ಲಿ 10 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ ಪುಟಿದೆದ್ದಿದ್ದು, ಬುಧವಾರ ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ಒತ್ತಡದಲ್ಲಿರುವ ಕೋಲ್ಕತಾ ನೈಟ್ರೈಡರ್ಸ್ ತಂಡವನ್ನು ಎದುರಿಸಲಿದೆ. ಆಯ್ಕೆ ಗೊಂದಲವನ್ನು ಚೆನ್ನೈ ಸರಿಪಡಿಸಿಕೊಂಡಿದ್ದರೆ, ಕೆಕೆಆರ್ ಇನ್ನೂ ಗೊಂದಲದಲ್ಲೇ ಇರುವಂತೆ ಕಾಣುತ್ತಿದೆ.
ವಿಶ್ವಕಪ್ ವಿಜೇತ ನಾಯಕ ಇಯಾನ್ ಮೊರ್ಗನ್ ಇದ್ದರೂ, ಕೆಕೆಆರ್ ದಿನೇಶ್ ಕಾರ್ತಿಕ್‌ರನ್ನೇ ನಾಯಕನನ್ನಾಗಿ ಮುಂದುವರಿಸಲು ಇಚ್ಛಿಸಿದ್ದು ತಂಡಕ್ಕೆ ಮುಳುವಾದಂತೆ ಕಾಣುತ್ತಿದೆ. ಕಾರ್ತಿಕ್ 4 ಪಂದ್ಯಗಳಲ್ಲಿ ಕೇವಲ 37 ರನ್ ಗಳಿಸಿದ್ದು, ಲಯ ಕಂಡುಕೊಳ್ಳಲು ಪರದಾಡುತ್ತಿದ್ದಾರೆ. ಮಾರ್ಗನ್, ರಸೆಲ್‌ಗಿಂತಲೂ ಮೇಲ್ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಿರುವುದಕ್ಕೆ ಟೀಕೆ ವ್ಯಕ್ತವಾಗಿದೆ. ಜೊತೆಗೆ ಬಿಗ್‌ಬ್ಯಾಶ್ ತಾರೆ ಟಾಮ್ ಬ್ಯಾನ್ಟನ್ ಇದ್ದರೂ ಸುನಿಲ್ ನರೇನ್‌ರನ್ನೇ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಆಡಿಸುತ್ತಿರುವುದು ಸಹ ತಜ್ಞರು, ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದೆ. 15.5 ಕೋಟಿ ರು. ನೀಡಿ ಖರೀದಿಸಿದ್ದ ಆಸೀಸ್ ವೇಗಿ ಪ್ಯಾಟ್ ಕಮಿನ್ಸ್ ಸಹ ನಿರೀಕ್ಷೆ ಉಳಿಸಿಕೊಳ್ಳುತ್ತಿಲ್ಲ. ಸ್ಪಿನ್ನರ್‌ಗಳು ವಿಕೆಟ್ ಕೀಳುವಲ್ಲಿ ಹಿಂದೆ ಬಿದ್ದಿದ್ದಾರೆ. ಚೆನ್ನೈ ವಿರುದ್ಧದ ಪಂದ್ಯದಲ್ಲಿ ಕೆಕೆಆರ್ ತನ್ನ ಸಮಸ್ಯೆಗಳಿಗೆ ಉತ್ತರ ಹುಡುಕಿಕೊಳ್ಳಲಿದೆಯೇ ಎನ್ನುವ ಕುತೂಹಲ ಕಾಡುತ್ತಿದೆ.
IPL 2020: ಬುಮ್ರಾ ದಾಳಿಗೆ ರಾಜಸ್ಥಾನ ಉಡೀಸ್, ಅಗ್ರಸ್ಥಾನಕ್ಕೆ ಲಗ್ಗೆ ಇಟ್ಟ ಮುಂಬೈ!
ಮತ್ತೊಂದೆಡೆ ಚೆನ್ನೈ ತನ್ನ ಮಧ್ಯಮ ಕ್ರಮಾಂಕದ ಸಮಸ್ಯೆ ಬಗೆಹರಿಸಿಕೊಂಡಿಲ್ಲವಾದರೂ, ಅಗ್ರ ಕ್ರಮಾಂಕದ ಮೇಲೆ ಹೆಚ್ಚು ವಿಶ್ವಾಸ ಇರಿಸಿದೆ. ಕೆಕೆಆರ್ ಬೌಲರ್‌ಗಳು ಧೋನಿ ಪಡೆಯ ಮೇಲ್ಕ್ರಮಾಂಕವನ್ನು ಉರುಳಿಸಿದರೆ ಗೆಲುವು ಸುಲಭ ಎಂದು ವಿಶ್ಲೇಷಿಸಲಾಗಿದೆ.
ಒಟ್ಟು ಮುಖಾಮುಖಿ: 20
ಚೆನ್ನೈ: 13
ಕೆಕೆಆರ್: 07
ಸಂಭವನೀಯ ಆಟಗಾರರ ಪಟ್ಟಿ
ಚೆನ್ನೈ: ಶೇನ್ ವಾಟ್ಸನ್, ಫಾಫ್ ಡು ಪ್ಲೆಸಿ, ಅಂಬಟಿ ರಾಯುಡು, ಕೇದಾರ್ ಜಾಧವ್, ಎಂ.ಎಸ್.ಧೋನಿ(ನಾಯಕ), ರವೀಂದ್ರ ಜಡೇಜಾ, ಸ್ಯಾಮ್ ಕರ್ರನ್, ಡ್ವೇನ್ ಬ್ರಾವೋ, ದೀಪಕ್ ಚಹರ್, ಶಾರ್ದೂಲ್ ಠಾಕೂರ್, ಪೀಯೂಷ್ ಚಾವ್ಲಾ.
ಕೆಕೆಆರ್: ಬಾಂಟನ್/ನರೇನ್, ಶುಭ್‌ಮನ್ ಗಿಲ್, ನಿತೀಶ್ ರಾಣಾ, ದಿನೇಶ್ ಕಾರ್ತಿಕ್(ನಾಯಕ), ಇಯಾನ್ ಮೊರ್ಗನ್, ಆ್ಯಂಡ್ರೆ ರಸೆಲ್, ರಾಹುಲ್ ತ್ರಿಪಾಠಿ, ಪ್ಯಾಟ್ ಕಮಿನ್ಸ್, ಕಮ್ಲೇಶ್ ನಾಗರಕೋಟಿ, ಶಿವಂ ಮಾವಿ, ವರುಣ್ ಚಕ್ರವರ್ತಿ.
ಪಿಚ್ ರಿಪೋರ್ಟ್
ಇಲ್ಲಿನ ಪಿಚ್‌ನಲ್ಲಿ ಮೊದಲ ಇನ್ನಿಂಗ್ಸ್ ಸರಾಸರಿ ಸ್ಕೋರ್ 170-180 ರನ್ ಆಗಿದ್ದು, ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡುವ ತಂಡಕ್ಕೆ ಲಾಭ ಹೆಚ್ಚು. ಇಲ್ಲಿ ಯಾವ ತಂಡವೂ 200ಕ್ಕೂ ಹೆಚ್ಚು ರನ್ ದಾಖಲಿಸಿಲ್ಲ. ಸ್ಪಿನ್ನರ್‌ಗಳಿಗೆ ನೆರವು ಸಿಗುವ ನಿರೀಕ್ಷೆ ಇದೆ.
ಸ್ಥಳ: ಅಬುಧಾಬಿ
ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋಟ್ಸ್‌ರ್