ಶಾರ್ಜಾ(ನ.03): ಡೇವಿಡ್ ವಾರ್ನರ್ ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡವಿಂದು(ನ.03) 13ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಹೈದರಾಬಾದ್ ತಂಡ ಪ್ಲೇ ಆಫ್‌ ಪ್ರವೇಶಿಸಬೇಕಿದ್ದರೆ ಮುಂಬೈ ವಿರುದ್ಧ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.

ಇನ್ನು ವೆಸ್ಟ್ ಇಂಡೀಸ್‌ನ ಮಾಜಿ ದಿಗ್ಗಜ ಕ್ರಿಕೆಟಿಗ ಬ್ರಿಯಾನ್ ಲಾರಾ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡಕ್ಕೆ ತಿರುಗೇಟು ನೀಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಉತ್ತಮ ಲಯದಲ್ಲಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡ ಹಾಲಿ ಚಾಂಪಿಯನ್‌ ಜಯದ ನಾಗಾಲೋಟಕ್ಕೆ ಬ್ರೇಕ್ ಹಾಕಬಹುದು ಎಂದು ಲಾರಾ ಹೇಳಿದ್ದಾರೆ.

ಐಪಿಎಲ್ ಅಭಿಮಾನಿಗಳಿಗೆ ವಿಶೇಷ ಸಂದೇಶ ಕಳಿಸಿದ ಯೂನಿವರ್ಸೆಲ್ ಬಾಸ್..!

ಸನ್‌ರೈಸರ್ಸ್ ಹೈದರಾಬಾದ್ ತಂಡ ಇತ್ತೀಚೆಗೆ ಉತ್ತಮ ಪ್ರದರ್ಶನ ನೀಡುತ್ತಿದೆ. ಹೈದರಾಬಾದ್ ಆಟಗಾರರು ಲಯ ಕಂಡುಕೊಂಡಿದ್ದಾರೆ. ಇನ್ನು ಈಗಾಗಲೇ ಮೊದಲ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆಗಿಟ್ಟಿಸಿಕೊಂಡಿರುವುದರಿಂದ ಮುಂಬೈ ಇಂಡಿಯನ್ಸ್ ತಂಡ ಇವತ್ತಿನ ಪಂದ್ಯಕ್ಕೆ ಕೆಲವು ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ. ಹೀಗಾದಲ್ಲಿ ಇದು ಸನ್‌ರೈಸರ್ಸ್ ಗೆಲುವಿಗೆ ನೆರವಾಗಲಿದೆ ಎಂದು ಸ್ಟಾರ್ ಸ್ಪೋರ್ಟ್ಸ್ ಮಾತುಕತೆ ವೇಳೆ ಲಾರಾ ಅಭಿಪ್ರಾಯಪಟ್ಟಿದ್ದಾರೆ.

ಸದ್ಯ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಈಗಾಗಲೇ ಪ್ಲೇ ಆಫ್‌ ಸ್ಥಾನವನ್ನು ಖಚಿತಪಡಿಸಿಕೊಂಡಿವೆ. ಇನ್ನು 14 ಅಂಕ ಹೊಂದಿರುವ ಕೋಲ್ಕತ ತಂಡ ಪ್ಲೇ ಆಫ್‌ ಸ್ಥಾನವನ್ನು ಖಚಿತಪಡಿಸಿಕೊಂಡಿಲ್ಲ. ಡೇವಿಡ್ ವಾರ್ನರ್ ಪಡೆ 12 ಅಂಕ ಹೊಂದಿದ್ದು, ಇಂದಿನ ಪಂದ್ಯವನ್ನು ಜಯಿಸಿದರೆ, ಕೆಕೆಆರ್ ತಂಡವನ್ನು ಹಿಂದಿಕ್ಕಿ ಪ್ಲೇ ಆಫ್‌ಗೆ ಹೈದರಾಬಾದ್ ಅರ್ಹತೆಗಿಟ್ಟಿಸಿಕೊಳ್ಳಲಿದೆ.