ಬೆಂಗಳೂರು: 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಪ್ರತಿನಿಧಿಸುತ್ತಿದ್ದ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಹೋರಾಟ ಭಾನುವಾರ(ನ.01)ದಂದು ಅಂತ್ಯವಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ಎದುರು ಕೆ ಎಲ್ ರಾಹುಲ್ ನೇತೃತ್ವದ ಪಂಜಾಬ್ ತಂಡ ಆಘಾತಕಾರಿ ಸೋಲು ಕಾಣುವ ಮೂಲಕ ಪ್ಲೇ ಆಫ್ ರೇಸಿನಿಂದ ಹೊರಬಿದ್ದಿದೆ.

ಟೂರ್ನಿಯ ಆರಂಭದಲ್ಲಿ ನಿರಾಶದಾಯಕ ಪ್ರದರ್ಶನ ತೋರಿದ್ದ ಕಿಂಗ್ಸ್ ಇಲೆವನ್ ಪಂಜಾಬ್ ತಂಡಕ್ಕೆ ಕ್ರಿಸ್ ಗೇಲ್ ಆಗಮನ ಹೊಸ ಹುರುಪನ್ನು ತಂದುಕೊಟ್ಟಿತ್ತು. ಗೇಲ್ ಆಡಿದ ಮೊದಲ 5 ಪಂದ್ಯಗಳಲ್ಲೂ ಪಂಜಾಬ್ ತಂಡ ಭರ್ಜರಿ ಗೆಲುವನ್ನು ದಾಖಲಿಸುವ ಮೂಲಕ ಕಮರಿ ಹೋಗಿದ್ದ ಪ್ಲೇ ಆಫ್‌ ಕನಸು ಮತ್ತೆ ಜೀವಂತವಾಯಿತು. ಕೇವಲ 7 ಪಂದ್ಯಗಳಲ್ಲಿ ಕ್ರಿಸ್ ಗೇಲ್ ರಾಜಸ್ಥಾನ ರಾಯಲ್ಸ್ ವಿರುದ್ಧ 99 ರನ್ ಸೇರಿದಂತೆ 3 ಅರ್ಧಶತಕ ಸಹಿತ 288 ರನ್ ಚಚ್ಚಿದ್ದರು. ಆದರೆ ಚೆನ್ನೈ ಸೂಪರ್ ಕಿಂಗ್ಸ್‌ ವಿರುದ್ಧದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಗೇಲ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರಿಂದ ಪಂಜಾಬ್ ಸೋಲನ್ನನುಭವಿಸಬೇಕಾಯಿತು.

RCB ವರ್ಸಸ್ ಡೆಲ್ಲಿ ಮ್ಯಾಚ್‌ ಬಳಿಕ ಸಿಕ್ಕಾಪಟ್ಟೆ ಟ್ರೆಂಡ್‌ ಆದ ಮೀಮ್ಸ್‌ಗಳಿವು..!

ಈ ಆವೃತ್ತಿಯಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ಹೋರಾಟ ಅಂತ್ಯವಾಗಿದ್ದರೂ ಯೂನಿವರ್ಸೆಲ್ ಬಾಸ್ ತಮ್ಮ ಅಭಿಮಾನಿಗಳಿಗೆ ಟ್ವಿಟರ್ ಮೂಲಕ ವಿಶೇಷ ಸಂದೇಶ ರವಾನಿಸಿದ್ದಾರೆ. ಈ ಆವೃತ್ತಿಯಲ್ಲಿ ನನ್ನ ಹೋರಾಟ ಮುಗಿದಿದೆ, ಆದರೂ ನೀವು ಐಪಿಎಲ್ ನೋಡುವುದನ್ನು ನಿಲ್ಲಿಸಬೇಡಿ ಎಂದು ಕ್ರಿಸ್ ಗೇಲ್ ಐಪಿಎಲ್ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಸದ್ಯ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಪ್ಲೇ ಆಫ್‌ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದು, ನಾಲ್ಕನೇ ಪ್ಲೇ ಆಫ್‌ ಸ್ಥಾನಕ್ಕಾಗಿ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಕೋಲ್ಕತ ನೈಟ್‌ ರೈಡರ್ಸ್ ನಡುವೆ ಸ್ಪರ್ಧೆ ಏರ್ಪಟ್ಟಿದೆ.