ದುಬೈ(ಆ.28): 13ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಕೌಂಟ್‌ಡೌನ್ ಆರಂಭವಾಗಿದೆ. ಹೀಗಿರುವಾಗಲೇ ಮೂರು ಬಾರಿಯ ಐಪಿಎಲ್ ಚಾಂಪಿಯನ್ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್‌ ಕಿಂಗ್ಸ್ ಪಾಳಯದಿಂದ ಆಘಾತಕಾರಿ ಸುದ್ದಿಯೊಂದು ವರದಿಯಾಗಿದೆ.

ಖ್ಯಾತ ಕ್ರೀಡಾ ವೆಬ್‌ಸೈಟ್ ಇಎಸ್‌ಪಿಎನ್ ಕ್ರಿಕ್‌ಇನ್ಫೋ ವರದಿ ಪ್ರಕಾರ ಚೆನ್ನೈ ಸೂಪರ್‌ ಕಿಂಗ್ಸ್ ಫ್ರಾಂಚೈಸಿ ಕನಿಷ್ಠ 10 ಮಂದಿಗೆ ಕೊರೋನಾ ಸೋಂಕು ತಗುಲಿದೆ ಎಂದು ವರದಿ ಮಾಡಿದೆ. ದುಬೈನಲ್ಲಿ ನಡೆದ ಕೊರೋನಾ ಟೆಸ್ಟ್‌ನಲ್ಲಿ ಭಾರತೀಯ ಆಟಗಾರನೂ ಸೇರಿದಂತೆ 10 ಮಂದಿಗೆ ಕೋವಿಡ್ 19 ಸೋಂಕು ವಕ್ಕರಿಸಿದೆ ಎನ್ನಲಾಗಿದೆ.

ಗುರುವಾರವಷ್ಟೇ ಚೆನ್ನೈ ಸೂಪರ್ ಕಿಂಗ್ಸ್‌ನ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿ ಕೊರೋನಾ ಟೆಸ್ಟ್‌ಗೆ ಒಳಗಾಗಿದ್ದರು. ಸದ್ಯ ಸಿಎಸ್‌ಕೆ ತಂಡದ ಆಟಗಾರರೆಲ್ಲಾ ಹೋಟೆಲ್‌ನಲ್ಲೇ ಕ್ವಾರಂಟೈನ್ ಆಗಿದ್ದಾರೆ.

ಆಟಗಾರರ ಸಂಪೂರ್ಣ ರಕ್ಷಣೆಗೆ ಇನ್ಶೂರೆನ್ಸ್- ಮ್ಯಾಕ್ಸ್ ಜೊತೆ RCB ಒಪ್ಪಂದ!

ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಸಿಎಸ್‌ಕೆ ತಂಡವು ಆಗಸ್ಟ್ 21ರಂದು ದುಬೈಗೆ ಬಂದಿಳಿದಿತ್ತು. ಬಿಸಿಸಿಐ ಮಾರ್ಗಸೂಚಿಯಂತೆ 6 ದಿನಗಳ ಕಾಲ ಹೋಟೆಲ್‌ನಲ್ಲಿಯೇ ಕ್ವಾರಂಟೈನ್‌ ಆಗಿತ್ತು. ಇನ್ನೇನು ಮೈದಾನಕ್ಕಿಳಿದು ಅಭ್ಯಾಸ ಆರಂಭಿಸಲಿದೆ ಎನ್ನುವಷ್ಟರಲ್ಲೇ ಈ ಆಘಾತಕಾರಿ ಸುದ್ದಿ ಹೊರಬಿದ್ದಿದೆ. 

ಯಾವೆಲ್ಲಾ ಆಟಗಾರರು ಹಾಗೂ ಸಿಬ್ಬಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ ಎನ್ನುವ ಮಾಹಿತಿ ಇನ್ನೂ ಹೊರಬಿದ್ದಿಲ್ಲ. 13ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಸೆಪ್ಟೆಂಬರ್ 19ರಿಂದ ಆರಂಭವಾಗಿ ನವೆಂಬರ್ 10ರವರೆಗೆ ನಡೆಯಲಿದೆ.