ದುಬೈ(ಅ.20): ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ವೃದ್ದಿಮಾನ್ ಸಾಹ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಕೆಚ್ಚೆದೆಯ ಬ್ಯಾಟಿಂಗ್ ನಡೆಸುವ ಮೂಲಕ ಆರೆಂಜ್‌ ಆರ್ಮಿ ಸ್ಮರಣೀಯ ಗೆಲುವು ದಾಖಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದೀಗ ಸಾಹ ಅವರನ್ನು ಹೊಗಳುವ ಭರದಲ್ಲಿ ಟೀಂ ಇಂಡಿಯಾ ಕೋಚ್ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಹೌದು, ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ವೃದ್ದಿಮಾನ್ ಸಾಹ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೇವಲ 45 ಎಸೆತಗಳಲ್ಲಿ 12 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 87 ರನ್ ಬಾರಿಸಿದ್ದರು. ಈ ಪಂದ್ಯವನ್ನು ಹೈದರಾಬಾದ್ ತಂಡ 88 ರನ್‌ಗಳ ಅಂತರದಲ್ಲಿ ಗೆಲುವಿನ ನಗೆ ಬೀರಿತ್ತು. ಸಾಹ ಅವರನ್ನು ಹೊಗಳುವ ಭರದಲ್ಲಿ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ, ಬಂಗಾಳ ಮೂಲದ ವೃದ್ದಿಮಾನ್ ಸಾಹ ಅವರನ್ನು ಜಗತ್ತಿನ ಶ್ರೇಷ್ಠ ವಿಕೆಟ್ ಕೀಪರ್ ಎಂದು ಬಣ್ಣಿಸಿದ್ದಾರೆ. ಇದು ಧೋನಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಡೆಲ್ಲಿ ವಿರುದ್ಧ ಹೈದರಾಬಾದ್‌ ತಂಡಕ್ಕೆ ದೊಡ್ಡ ಶಾಕ್‌; ಕಳೆದ ಪಂದ್ಯದ ಹೀರೋ ಟೂರ್ನಿಯಿಂದಲೇ ಔಟ್?

ರವಿಶಾಸ್ತ್ರಿ ಅವರ ಈ ಟ್ವೀಟ್‌ ಮಾಡುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆ ವ್ಯಕ್ತವಾಗಿದೆ. ಕೆಲವರು ಸ್ವಾಮಿ ಸ್ವಲ್ಪ ಕಣ್ಣು ತೆರೆದು ನೋಡಿ ಎಂದಿದ್ದರೆ, ಮತ್ತೆ ಕೆಲವರು ಹಾಗಿದ್ದರೆ ಧೋನಿ ಏನು ಎಂದು ಪ್ರಶ್ನಿಸಿದ್ದಾರೆ. ಈ ಪೈಕಿ ಚಂದ್ರಿನ್ ಸೆನಗುಪ್ತಾ ಎನ್ನುವವರು, ಎಲ್ಲಿಯವರೆಗೂ ಧೋನಿ ಯಾವುದೇ ಮಾದರಿ ಕ್ರಿಕೆಟ್ ಆಡುತ್ತಿರುತ್ತಾರೋ ಅಲ್ಲಿಯವರೆಗೂ ಧೋನಿಗಿಂತ ಮತ್ತೊಬ್ಬ ಶ್ರೇಷ್ಠ ವಿಕೆಟ್ ಕೀಪರ್ ಇರಲಾರ. ಧೋನಿ ಯಾವತ್ತಿದ್ದರೂ ಶ್ರೇಷ್ಠ ವಿಕೆಟ್ ಕೀಪರ್ ಎಂದು ಟ್ವೀಟ್ ಮಾಡಿದ್ದಾರೆ. ಇನ್ನೋಬ್ಬಾತ ನಿಜವಾಗಲೂ ಗಂಭೀರವಾಗಿ ಈ ಮಾತನ್ನು ಹೇಳಿದ್ದೀರಾ, ಸ್ವಾಮಿ ಸ್ವಲ್ಪ ಕಡಿಮೆ ಕುಡಿಯಿರಿ ಎಂದು ಲೇವಡಿ ಮಾಡಿದ್ದಾರೆ.

ಟೀಂ ಇಂಡಿಯಾ ಮಾಜಿ ನಾಯಕ ಎಂ ಎಸ್ ಧೋನಿ ಕಳೆದ ಆಗಸ್ಟ್ 15ರಂದು ದಿಢೀರ್ ಎನ್ನುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವ ಮುನ್ನ 90 ಟೆಸ್ಟ್, 350 ಏಕದಿನ ಹಾಗೂ 98 ಟಿ20 ಪಂದ್ಯಗಳನ್ನಾಡಿ 17 ಸಾವಿರಕ್ಕೂ ಅಧಿಕ ರನ್ ಬಾರಿಸಿದ್ದಾರೆ. ಇನ್ನು ವಿಕೆಟ್ ಕೀಪಿಂಗ್‌ನಲ್ಲಿ ಟೆಸ್ಟ್‌ನಲ್ಲಿ 256 ಕ್ಯಾಚ್ & 38 ಸ್ಟಂಪಿಂಗ್, ಏಕದಿನ ಕ್ರಿಕೆಟ್‌ನಲ್ಲಿ 321 ಕ್ಯಾಚ್ & 123 ಸ್ಟಂಪಿಂಗ್ಸ್ ಹಾಗೆಯೇ ಟಿ20 ಕ್ರಿಕೆಟ್‌ನಲ್ಲಿ 57 ಕ್ಯಾಚ್ ಹಾಗೂ 34 ಸ್ಟಂಪೌಟ್ ಮಾಡಿದ್ದಾರೆ.