ಮೆಲ್ಬರ್ನ್(ಆ.08): ಚುಟುಕು ಕ್ರಿಕೆಟ್ ಪಾಲಿಗೆ ಆಸ್ಟ್ರೇಲಿಯಾ ತಂಡ ಕಂಡ ವಿಸ್ಪೋಟಕ ಆರಂಭಿಕ ಬ್ಯಾಟ್ಸ್‌ಮನ್‌ಗಳಲ್ಲಿ ಆ್ಯರೋನ್ ಫಿಂಚ್ ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ. 2011ರಲ್ಲಿ ಇಂಗ್ಲೆಂಡ್ ವಿರುದ್ಧ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದಾಗಿನಿಂದ ಇಲ್ಲಿಯವರೆಗೆ ಫಿಂಚ್ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಎರಡನೇ ಗರಿಷ್ಠ ವೈಯುಕ್ತಿಕ ಸ್ಕೋರ್(172) ಆ್ಯರೋನ್ ಫಿಂಚ್ ಹೆಸರಿನಲ್ಲಿದೆ.  
 
2018ರಲ್ಲಿ ಬಾಲ್ ಟ್ಯಾಂಪರಿಂಗ್ ವಿವಾದದ ಬಳಿಕ ಸೀಮಿತ ಓವರ್‌ಗಳ ತಂಡದ ನಾಯಕನನ್ನಾಗಿ ಆ್ಯರೋನ್ ಫಿಂಚ್ ಅವರನ್ನು ನೇಮಕ ಮಾಡಲಾಗಿದೆ. ಈ ಅವಕಾಶವನ್ನು ಎರಡು ಕೈಯಲ್ಲಿ ಬಾಚಿಕೊಂಡ ಫಿಂಚ್ 2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ತಂಡವನ್ನು ಸೆಮಿಫೈನಲ್‌ವರೆಗೂ ಯಶಸ್ವಿಯಾಗಿ ಮುನ್ನಡೆಸಿದ್ದರು. 

ಕೊಹ್ಲಿ ನಾಯಕತ್ವದಲ್ಲಿ ಆಡಲು ಫಿಂಚ್ ಉತ್ಸುಕ:

ಸಂದರ್ಶನವೊಂದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಗ್ಗೆ ಮಾತನಾಡಿರುವ ಫಿಂಚ್, RCB ತಂಡ ಕೂಡಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದೇನೆ. ರಾಯಲ್ ಚಾಲೆಂಜರ್ಸ್ ಫ್ರಾಂಚೈಸಿಯಲ್ಲಿ ಹಲವಾರು ದಿಗ್ಗಜ ಆಟಗಾರರ ಜತೆ ಆಡಲು ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯವೆಂದು ಭಾವಿಸುತ್ತೇನೆ. ಅದರಲ್ಲೂ ಚಿನ್ನಸ್ವಾಮಿ ಮೈದಾನದಲ್ಲಿ ತವರಿನ ಅಭಿಮಾನಿಗಳ ಎದುರು ಆಡುವುದು ಮತ್ತಷ್ಟು ಹುರುಪು ನೀಡುತ್ತಿತ್ತು. ಆದರೆ ಯುಎಇನಲ್ಲೂ ಅದೇ ಉತ್ಸಾಹದಲ್ಲಿ ಆಡುತ್ತೇವೆ ಎಂದು ಆಸೀಸ್ ನಾಯಕ ಹೇಳಿದ್ದಾರೆ.

ತವರಿನಲ್ಲಿ ಬ್ಯಾಟ್ ಹಿಡಿದು ಅಭ್ಯಾಸ ಆರಂಭಿಸಿದ ಧೋನಿ

ಇನ್ನು ನಾಯಕ ಕೊಹ್ಲಿ ಕುರಿತಂತೆ, ನಾನು ಇದೇ ಮೊದಲ ಬಾರಿಗೆ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆಡುತ್ತಿದ್ದೇನೆ. ನಾನು ಈ ಹಿಂದೆ ಐಪಿಎಲ್ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎದುರು ಬದುರಾಗಿ ಆಡಿದ್ದೇವೆ. ಆದರೆ ಇದೇ ಮೊದಲ ಬಾರಿಗೆ ಕೊಹ್ಲಿ ತಂಡದಲ್ಲಿ ಆಡುತ್ತಿರುವುದಕ್ಕೆ ನಿಜಕ್ಕೂ ಥ್ರಿಲ್ ಆಗುತ್ತಿದೆ. ಕೊಹ್ಲಿ ನಾಯಕತ್ವವನ್ನು ಹತ್ತಿರದಿಂದ ನೋಡುವ ಅವಕಾಶ ಒದಗಿ ಬಂದಿದೆ ಎಂದು ಫಿಂಚ್ ಹೇಳಿದ್ದಾರೆ.

2019ರಲ್ಲಿ ಕೋಲ್ಕತಾದಲ್ಲಿ ನಡೆದ ಆಟಗಾರರ ಹರಾಜಿನಲ್ಲಿ ಒಂದು ಕೋಟಿ ರುಪಾಯಿ ಮೂಲ ಬೆಲೆ ಹೊಂದಿದ್ದ ಆ್ಯರೋನ್ ಫಿಂಚ್ ಅವರನ್ನು ಕೋಲ್ಕತಾ ನೈಟ್‌ ರೈಡರ್ಸ್ ಜತೆ ಜಿದ್ದಾಜಿದ್ದಿನ ಹೋರಾಟ ನಡೆಸಿ 4.40 ಕೋಟಿ ರುಪಾಯಿ ನೀಡಿ ಖರೀದಿಸುವಲ್ಲಿ ಬೆಂಗಳೂರು ಫ್ರಾಂಚೈಸಿ ಯಶಸ್ವಿಯಾಗಿತ್ತು. 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಸೆಪ್ಟೆಂಬರ್ 19ರಿಂದ ಆರಂಭವಾಗಿ ನವೆಂಬರ್ 10ರವರೆಗೆ ಯುಎಇನಲ್ಲಿ ನಡೆಯಲಿದೆ.