2020ನೇ ಆವೃತ್ತಿಯ ಐಪಿಎಲ್ ಟೈಟಲ್ ಪ್ರಾಯೋಜಕತ್ವ ಮಾತ್ರ ಡ್ರೀಮ್11 ಹೊಂದಲಿದೆ ಎಂದು ಬಿಸಿಸಿಐ ಖಚಿತ ಪಡಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ನವದೆಹಲಿ(ಆ.20): 2020ರ ಐಪಿಎಲ್ಗೆ ಮಾತ್ರ ಟೈಟಲ್ ಪ್ರಾಯೋಜಕತ್ವ ಹಕ್ಕನ್ನು ಡ್ರೀಮ್ ಇಲೆವೆನ್ ಸಂಸ್ಥೆಗೆ ಮಾರಾಟ ಮಾಡಿರುವುದಾಗಿ ಬುಧವಾರ ಬಿಸಿಸಿಐ ಸ್ಪಷ್ಟಪಡಿಸಿದೆ.
2021, 2022ರ ಐಪಿಎಲ್ ಪ್ರಾಯೋಜಕತ್ವ ಹಕ್ಕಿಗೆ ಹೊಸದಾಗಿ ಬಿಡ್ಡಿಂಗ್ ನಡೆಸಲಿರುವ ಬಿಸಿಸಿಐ, ಹೆಚ್ಚಿನ ಮೊತ್ತಕ್ಕೆ ಬಿಡ್ ಸಲ್ಲಿಸುವಂತೆ ಸಂಸ್ಥೆಗೆ ತಿಳಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ. 2021ರ ಜನವರಿಯಲ್ಲಿ ಬಿಡ್ಡಿಂಗ್ ಪ್ರಕ್ರಿಯೆ ನಡೆಯಲಿದೆ ಎನ್ನಲಾಗಿದೆ.
ಐಪಿಎಲ್ ಟೈಟಲ್ ಪ್ರಾಯೋಕತ್ವ ಪಡೆಯುವಲ್ಲಿ Dream11 ಯಶಸ್ವಿ..!
ಈ ಹಿಂದೆ ಚೀನಾದ ಮೊಬೈಲ್ ಸಂಸ್ಥೆ ವಿವೋ ವಾರ್ಷಿಕ 440 ಕೋಟಿ ರು. ಒಪ್ಪಂದ ಮಾಡಿಕೊಂಡಿತ್ತು. ಹೆಚ್ಚೂ ಕಡಿಮೆ ಅದೇ ಮೊತ್ತವನ್ನು ಮುಂದಿನ ವರ್ಷದ ಐಪಿಎಲ್ನಲ್ಲಿ ಬಿಸಿಸಿಐ ನಿರೀಕ್ಷೆ ಮಾಡುತ್ತಿದೆ ಎನ್ನಲಾಗಿದೆ. ಬೈಜೂಸ್, ಅನ್‌ಅಕಾಡಮಿ ಹಾಗೂ ಟಾಟಾ ಗ್ರೂಪ್ ಅವರನ್ನು ಹಿಂದಿಕ್ಕಿ ಮಂಗಳವಾರವಷ್ಟೇ ಡ್ರೀಮ್ ಇಲೆವೆನ್ ಸಂಸ್ಥೆ 222 ಕೋಟಿ ರುಪಾಯಿಗೆ ಪ್ರಾಯೋಜಕತ್ವ ಹಕ್ಕು ಖರೀದಿಸಿತ್ತು.
13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಸೆಪ್ಟೆಂಬರ್ 19ರಿಂದ ಆರಂಭವಾಗಿ ನವೆಂಬರ್ 10ರವರೆಗೆ ನಡೆಯಲಿದೆ. ಕೊರೋನಾ ಭೀತಿಯಿಂದಾಗಿ ಭಾರತದಲ್ಲಿ ನಡೆಯಬೇಕಿದ್ದ ಐಪಿಎಲ್ ಟೂರ್ನಿಯು ಯುಎಯನಲ್ಲಿ ನಡೆಯಲಿದೆ. ಅಬುದಾಬಿ, ಶಾರ್ಜಾ ಹಾಗೂ ದುಬೈನಲ್ಲಿ ಪಂದ್ಯಗಳು ಜರುಗಲಿದ್ದು, ಅಧಿಕೃತ ವೇಳಾಪಟ್ಟಿ ಇನ್ನು ಪ್ರಕಟವಾಗಿಲ್ಲ.
