ಐಪಿಎಲ್ ಟೈಟಲ್ ಪ್ರಾಯೋಕತ್ವ ಪಡೆಯುವಲ್ಲಿ Dream11 ಯಶಸ್ವಿ..!
2020ನೇ ಸಾಲಿನ ಐಪಿಎಲ್ ಟೈಟಲ್ ಪ್ರಾಯೋಜಕತ್ವ ಆನ್‌ಲೈನ್ ಗೇಮ್ ಪ್ಲಾಟ್‌ಫಾರ್ಮ್ ಡ್ರೀಮ್ ಇಲೆವನ್ ಪಾಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ನವದೆಹಲಿ(ಆ.18): 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೈಟಲ್ ಪ್ರಾಯೋಜಕತ್ವ ಡ್ರೀಮ್ ಇಲೆವನ್ ಪಾಲಾಗಿದೆ. 2020ನೇ ಸಾಲಿನ ಐಪಿಎಲ್ ಟೈಟಲ್ ಪ್ರಾಯೋಕತ್ವವನ್ನು ಆನ್‌ಲೈನ್ ಫ್ಯಾಂಟಸಿ ಕ್ರಿಕೆಟ್ ಲೀಗ್ ಆದಂತಹ ಡ್ರೀಮ್ ಇಲೆವೆನ್‌ಗೆ ಬಿಸಿಸಿಐ ನೀಡಿದೆ.
ಈಗಾಗಲೇ ಬಿಸಿಸಿಐ ಜತೆ ಡ್ರೀಮ್ ಇಲೆವನ್ ಪ್ರಾಯೋಜಕತ್ವವನ್ನು ನೀಡುತ್ತಲೇ ಬಂದಿದೆ. ಇದೀಗ ಡ್ರೀಮ್ ಇಲೆವನ್ 222 ಕೋಟಿ ರುಪಾಯಿ ಬಿಡ್ ಮಾಡಿ 2020ನೇ ಸಾಲಿನ ಟೈಟಲ್ ಪ್ರಾಯೋಕತ್ವ ಪಡೆಯುವಲ್ಲಿ ಸಫಲವಾಗಿದೆ. ಈ ಮೂಲಕ ಟೈಟಲ್ ಪ್ರಾಯೋಕತ್ವ ಪಡೆಯಲು ಬಯಸಿದ್ದ ಟಾಟಾ ಗ್ರೂಪ್, ಬೈಜೂಸ್ ಕಂಪನಿಗಳನ್ನು ಹಿಂದಿಕ್ಕಿ ಡ್ರೀಮ್ ಇಲೆವನ್ ಐಪಿಎಲ್ ಟೈಟಲ್ ಪ್ರಾಯೋಕತ್ವ ಪಡೆದಿದೆ.
ಈ ಮೊದಲೇ ಹೇಳಿದಂತೆ ಡ್ರೀಮ್ ಇಲೆವನ್ ಈಗಾಗಲೇ ಬಿಸಿಸಿಐನೊಂದಿಗೆ ಅಸೋಸಿಯೇಟ್ ಪಾರ್ಟ್ನರ್ ಆಗಿ ಗುರುತಿಸಿಕೊಂಡಿತ್ತು. ಆದರೆ ಈಗ ಟೈಟಲ್ ಪ್ರಾಯೋಜಕತ್ವ ಪಡೆದ ಬಳಿಕವೂ ಡ್ರೀಮ್ ಇಲೆವನ್ ಅಸೋಸಿಯೇಟ್ ಪಾರ್ಟ್ನರ್ ಆಗಿ ಇರುತ್ತದೆಯೇ ಇಲ್ಲವೇ ಬೆರೆಯವರಿಗೆ ಬಿಸಿಸಿಐ ಅವಕಾಶ ನೀಡುತ್ತದೆಯೇ ಎನ್ನುವುದು ಇನ್ನೂ ಖಚಿತವಾಗಿಲ್ಲ. ಐಪಿಎಲ್ ಟೂರ್ನಿಗೆ ಡ್ರೀಮ್ ಇಲೆವನ್ ಅಸೋಸಿಯೇಟ್ ಪಾರ್ಟ್ನರ್ ಆಗಿ 40 ಕೋಟಿ ರುಪಾಯಿಗಳನ್ನು ಬಿಸಿಸಿಐಗೆ ನೀಡುತ್ತಿದೆ.
IPL 2020: 300 ಕೋಟಿ ರುಪಾಯಿ ಆದಾಯ ನಿರೀಕ್ಷೆಯಲ್ಲಿ ಬಿಸಿಸಿಐ
ಈ ಬಾರಿಯ ಐಪಿಎಲ್ ಟೈಟಲ್ ಪ್ರಾಯೋಜಕತ್ವದಿಂದ ಚೀನಿ ಮೊಬೈಲ್ ಕಂಪನಿ ವಿವೋ ಹಿಂದೆ ಸರಿದಿದ್ದರಿಂದ ಬಿಸಿಸಿಐ ಮುಕ್ತ ಬಿಡ್ ಆಹ್ವಾನಿಸಿತ್ತು. ಹಲವು ಕಂಪನಿಗಳು ಒಲವು ತೋರಿದ್ದವು. ಈ ಪೈಕಿ ಟಾಟಾ ಗ್ರೂಪ್ ಟೈಟಲ್ ಪ್ರಾಯೋಕತ್ವ ಪಡೆಯಬಹುದು ಎಂದು ಊಹಿಸಲಾಗಿದ್ದ. ಆದರೆ ಡ್ರೀಮ್ ಇಲೆವನ್ ಎಲ್ಲಾ ನಿರೀಕ್ಷೆಗಳನ್ನು ತಲೆಕೆಳಗೆ ಮಾಡಿ 2020ನೇ ಸಾಲಿನ ಟೈಟಲ್ ಪ್ರಾಯೋಜಕತ್ವ ಪಡೆಯಲು ಯಶಸ್ವಿಯಾಗಿದೆ.
ಇತರೆ ಕಂಪನಿಗಳು ಬಿಡ್ ಮಾಡಿದ್ದೆಷ್ಟು..?
ಬೆಂಗಳೂರು ಮೂಲದ ಕಂಪನಿ ಅನ್‌ಅಕಾಡಮಿ 210 ಕೋಟಿ ರುಪಾಯಿ ಬಿಡ್ ಮಾಡಿತ್ತು. ಇನ್ನು ಟಾಟಾ(180 ಕೋಟಿ) ಹಾಗೂ ಬೈಜೂಸ್(125 ಕೋಟಿ) ಬಿಡ್ ಮಾಡಿತ್ತು ಎಂದು ಇನ್‌ಸೈಡ್ ಸ್ಪೋರ್ಟ್ ವರದಿ ಮಾಡಿದೆ. ಇದರೊಂದಿಗೆ ಕೊನೆಗೂ ಈ ಬಾರಿಯ ಐಪಿಎಲ್ ವಿವೋ ಬದಲಾಗಿ ಡ್ರೀಮ್ ಇಲೆವನ್ ಐಪಿಎಲ್ ಟೂರ್ನಿ ಎಂದು ಕರೆಸಿಕೊಳ್ಳಲಿದೆ.