ನವ​ದೆ​ಹ​ಲಿ(ಆ.04): 2020ರ ಐಪಿ​ಎಲ್‌ ಟೂರ್ನಿ ಯುಎ​ಇ​ನಲ್ಲಿ ನಡೆ​ಯು​ವುದು ಖಚಿತವಾಗು​ತ್ತಿ​ದ್ದಂತೆ ಫ್ರಾಂಚೈ​ಸಿ​ಗಳು ಸಾಮಾ​ಜಿಕ ತಾಣಗ​ಳಲ್ಲಿ ಸಂತಸ ವ್ಯಕ್ತ​ಪ​ಡಿ​ಸಿವೆ.

ಚೆನ್ನೈ ಸೂಪರ್‌ ಕಿಂಗ್ಸ್‌, ಎಂ.ಎಸ್‌.ಧೋನಿ ಸೇರಿ​ದಂತೆ ಇತರ ಆಟ​ಗಾ​ರರು ಅರಬ್‌ ಸಾಂಪ್ರ​ದಾ​ಯಿಕ ಶಿರವಸ್ತ್ರವನ್ನು ಧರಿ​ಸಿ​ರು​ವಂತೆ ಫೋಟೋ​ಶಾಪ್‌ ಮಾಡಿದ ಚಿತ್ರವನ್ನು ಟ್ವೀಟ್‌ ಮಾಡಿದ್ದು, ವೈರಲ್‌ ಆಗಿದೆ. ಮುಂಬೈ ಇಂಡಿ​ಯನ್ಸ್‌, ಆರ್‌ಸಿಬಿ ಸೇರಿ​ದಂತೆ ಬಹು​ತೇಕ ಎಲ್ಲಾ ತಂಡ​ಗಳು ಸಾಮಾ​ಜಿಕ ತಾಣ​ಗ​ಳಲ್ಲಿ ಸಂತಸ ಹಂಚಿ​ಕೊಂಡಿವೆ.

ಈ ತಿಂಗಳೇ ಯುಎ​ಇಗೆ ಚೆನ್ನೈ ಸೂಪರ್‌ ಕಿಂಗ್ಸ್‌?

ನವ​ದೆ​ಹ​ಲಿ: 3 ಬಾರಿ ಚಾಂಪಿ​ಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಈ ವರ್ಷ ಐಪಿ​ಎಲ್‌ಗೆ ಸಿದ್ಧತೆ ನಡೆ​ಸಲು ಒಂದು ತಿಂಗಳು ಮುಂಚಿತವಾಗಿಯೇ ಯುಎಇಗೆ ತೆರ​ಳಲು ನಿರ್ಧ​ರಿ​ಸಿದೆ. 

ತಂಡದ ಮಾಲಿ​ಕರು ಕೇಂದ್ರ ಸರ್ಕಾರದ ಅನು​ಮ​ತಿ​ಗಾಗಿ ಕಾಯು​ತ್ತಿ​ರು​ವು​ದಾಗಿ ಮೂಲ​ಗಳು ತಿಳಿ​ಸಿವೆ. ಅನು​ಮತಿ ದೊರೆ​ತರೆ ಇದೇ ತಿಂಗ​ಳಲ್ಲಿ ತಂಡ ಯುಎಇ ತಲು​ಪ​ಲಿದ್ದು, ಕಠಿಣ ಅಭ್ಯಾಸ ನಡೆ​ಸ​ಲಿದೆ ಎಂದು ತಂಡದ ಅಧಿ​ಕಾ​ರಿ​ಯೊ​ಬ್ಬರು ತಿಳಿ​ಸಿ​ದ್ದಾರೆ.

ಬಹುನಿರೀಕ್ಷಿತ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಸೆಪ್ಟೆಂಬರ್ 19ರಿಂದ ಆರಂಭವಾಗಲಿದ್ದು, ನವೆಂಬರ್ 10ಕ್ಕೆ ಫೈನಲ್ ಪಂದ್ಯ ಜರುಗಲಿದೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್ ಪ್ರಶಸ್ತಿ ಮೇಲೆ ಮತ್ತೆ ಕಣ್ಣಿಟ್ಟಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೊಚ್ಚಲ ಕಪ್ ಗೆಲ್ಲುವ ಕನವರಿಕೆಯಲ್ಲಿದೆ.