ರಾಂಚಿ(ಆ.13): ನೂರಾರು ದಿನಗಳ ಕಾಯುವಿಕೆಯ ಬಳಿಕ 13ನೇ ಆವೃತ್ತಿಯ ಐಪಿಎಲ್ ಆಯೋಜಿಸುವ ದಿಟ್ಟ ತೀರ್ಮಾನವನ್ನು ಬಿಸಿಸಿಐ ತೆಗೆದುಕೊಂಡಿದೆ. ಕೊರೋನಾ ಭೀತಿಯಿಂದಾಗಿ ಭಾರತದಲ್ಲಿ ನಡೆಯಬೇಕಿದ್ದ ಮಿಲಿಯನ್ ಡಾಲರ್ ಟೂರ್ನಿ ಯುಎಇಗೆ ಸ್ಥಳಾಂತರಗೊಂಡಿದೆ. ಸೆಪ್ಟೆಂಬರ್ 19ರಿಂದ ಆರಂಭವಾಗಲಿರುವ ಟೂರ್ನಿಗೆ ಫ್ರಾಂಚೈಸಿಗಳು ಈಗಾಗಲೇ ಸಿದ್ದತೆ ಆರಂಭಿಸಿವೆ.

ಇದರ ಆರಂಭಿಕ ಭಾಗವಾಗಿ ಬಿಸಿಸಿಐ ಮಾರ್ಗಸೂಚಿ ಅನ್ವಯ ಆಟಗಾರರ ಕೊರೋನಾ ಟೆಸ್ಟ್ ನಡೆಸಲು ಫ್ರಾಂಚೈಸಿಗಳು ರೆಡಿಯಾಗಿವೆ. 2019ರ ಐಸಿಸಿ ಏಕದಿನ ವಿಶ್ವಕಪ್ ಸೆಮಿಫೈನಲ್ ಸೋಲಿನ ಬಳಿಕ ಕ್ರಿಕೆಟ್‌ನಿಂದ ದೂರವೇ ಉಳಿದಿರುವ ಮಹೇಂದ್ರ ಸಿಂಗ್ ಧೋನಿ ಇದೀಗ ತವರೂರಾದ ರಾಂಚಿಯಲ್ಲೇ ಅಭ್ಯಾಸ ಆರಂಭಿಸಿದ್ದಾರೆ. ಇದರ ನಡುವೆ ಸಿಎಸ್‌ಕೆ ನಾಯಕ ಎಂ.ಎಸ್. ಧೋನಿ ಹಾಗೂ ಸಹ ಆಟಗಾರ ಮೋನು ಕುಮಾರ್ ಕೊರೋನಾ ಟೆಸ್ಟ್‌ಗೆ ಒಳಗಾಗಿದ್ದು ಬುಧವಾರ ಸ್ಯಾಂಪಲ್ ನೀಡಿದ್ದಾರೆ.

ಧೋನಿ ಫಾರ್ಮ್‌ಹೌಸ್‌ನಲ್ಲಿರುವಾಗಲೇ ಅವರ ಸ್ಯಾಂಪಲ್ ತೆಗೆದುಕೊಂಡಿರುವುದಾಗಿ ಗುರುನಾನಕ್ ಆಸ್ಪತ್ರೆಯ ಹಿರಿಯ ಸಿಬ್ಬಂದಿಯೊಬ್ಬರು ಖಚಿತಪಡಿಸಿದ್ದಾರೆ. ತಮ್ಮ ತಂಡ ಶಿಮ್ಲಾದಲ್ಲಿರುವ ಧೋನಿ ಫಾರ್ಮ್‌ಹೌಸ್‌ಗೆ ಭೇಟಿ ನೀಡಿ, ಮಧ್ಯಾಹ್ನ 2 ಗಂಟೆಯ ವೇಳೆಗೆ ಇಬ್ಬರು ಆಟಗಾರರ ಸ್ಯಾಂಪಲ್ ಪಡೆಯಲಾಗಿದೆ. ಗುರುವಾರ ಸಂಜೆ ವೇಳೆಗೆ ಫಲಿತಾಂಶ ಗೊತ್ತಾಗಲಿದೆ ಎಂದು ಸಿಬ್ಬಂದಿ ಹೇಳಿದ್ದಾರೆ.

ಧೋನಿ 2022ರವರೆಗೂ ಐಪಿಎಲ್‌ ಆಡ್ತಾರೆ: ಸಿಎಸ್‌ಕೆ

ಒಂದು ವೇಳೆ ಧೋನಿ ಹಾಗೂ ಮೋನು ಕುಮಾರ್ ಕೊರೋನಾ ಟೆಸ್ಟ್ ನೆಗೆಟಿವ್ ಬಂದರೆ ಈ ಒಬ್ಬರು ಆಟಗಾರರು ಆಗಸ್ಟ್ 14ರ ವೇಳೆಗೆ ಚೆನ್ನೈಗೆ ಬಂದಿಳಿಯಲಿದ್ದಾರೆ. ಒಂದು ವಾರ ಧೋನಿ ಪಡೆ ಚೆನ್ನೈನ ಚೆಪಾಕ್ ಮೈದಾನದಲ್ಲಿ ಅಭ್ಯಾಸ ನಡೆಸಿ ಆಗಸ್ಟ್ 22ರಂದು ಚೆನ್ನೈ ಸೂಪರ್ ಕಿಂಗ್ಸ್ ತಂಡ ಒಟ್ಟಾಗಿ ಯುಎಇ ವಿಮಾನ ಏರಲಿದೆ.

ಬಿಸಿಸಿಐ ಮಾರ್ಗಸೂಚಿಯನ್ವಯ ಪ್ರತಿ ಆಟಗಾರ ಎರಡು ಬಾರಿ ಕೊರೋನಾ ಟೆಸ್ಟ್‌ಗೆ ಒಳಗಾಗಬೇಕಾಗಿದೆ. ಎರಡು ಟೆಸ್ಟ್ ನೆಗೆಟಿವ್ ಬಂದರೆ ಮಾತ್ರ ಆತ ಯುಎಇಗೆ ಹೊರಡಲು ಅರ್ಹತೆ ಗಿಟ್ಟಿಸಿಕೊಳ್ಳುತ್ತಾನೆ. ಯಾವುದೇ ಆಟಗಾರ ಕೊರೋನಾ ಸೋಂಕಿಗೆ ತುತ್ತಾದರೆ 14 ದಿನ ಕ್ವಾರಂಟೈನ್‌ನಲ್ಲಿದ್ದು ಎರಡು ಬಾರಿ ಚಿಕಿತ್ಸೆಗೊಳಗಾಗಬೇಕಾಗುತ್ತದೆ. ಎರಡು ಪರೀಕ್ಷೆ ನೆಗೆಟಿವ್ ಬಂದರಷ್ಟೇ ಆಟಗಾರ ಯುಎಇ ವಿಮಾನ ಹತ್ತಲು ಅರ್ಹತೆ ಗಿಟ್ಟಿಸಿಕೊಳ್ಳುತ್ತಾನೆ.