ಬೆಂಗಳೂರು(ನ.03): ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ 19ನೇ ಓವರ್‌ನಲ್ಲಿ ಗೆಲುವಿನ ನಗೆ ಬೀರಿದೆ. ಇದರೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಕ್ವಾಲಿಫೈಯರ್ ಪಂದ್ಯವನ್ನಾಡಲು ಅರ್ಹತೆಗಿಟ್ಟಿಸಿಕೊಂಡರೆ, ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋತರೂ ಸಹ ಪ್ಲೇ ಆಫ್‌ಗೆ ಅರ್ಹತೆಗಿಟ್ಟಿಸಿಕೊಂಡಿದೆ.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ದೇವದತ್ ಪಡಿಕ್ಕಲ್ ಸಮಯೋಚಿತ ಅರ್ಧಶತಕದ ನೆರವಿನಿಂದ 7 ವಿಕೆಟ್ ಕಳೆದುಕೊಂಡು 152 ರನ್ ಬಾರಿಸಿತ್ತು. ಇದಕ್ಕುತ್ತರವಾಗಿ ಅಜಿಂಕ್ಯ ರಹಾನೆ, ಶಿಖರ್ ಧವನ್ ಆಕರ್ಷಕ ಅರ್ಧಶತಕದ ನೆರವಿನಿಂದ ಇನ್ನೊಂದು ಓವರ್‌ ಬಾಕಿ ಇರುವಂತೆಯೇ ಡೆಲ್ಲಿ ಗೆಲುವಿನ ನಗೆ ಬೀರಿತು.

ರಾಯಲ್ ಚಾಲೆಂಜರ್ಸ್ ಬೆಂಗಳೂರ ತಂಡ ಪ್ಲೇ ಆಫ್‌ನಲ್ಲಿ ಅರ್ಹತೆಗಿಟ್ಟಿಸಿಕೊಳ್ಳಬೇಕಿದ್ದರೆ ಡೆಲ್ಲಿ ತಂಡವನ್ನು 17.3 ಓವರ್‌ಗಳೊಳಗಾಗಿ ಗೆಲ್ಲದಂತೆ ನೋಡಿಕೊಳ್ಳಬೇಕಿತ್ತು. ಪಂದ್ಯದ ಮಧ್ಯ ಓವರ್‌ಗಳಲ್ಲಿ ಆರ್‌ಸಿಬಿ ಸ್ಪಿನ್ನರ್‌ಗಳು ಡೆಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ಕಡಿವಾಣ ಹಾಕಿದ್ದರಿಂದ ವಿರಾಟ್ ಪಡೆ ಸೋತರೂ ಸಹ ನೆಟ್‌ ರನ್‌ ರೇಟ್ ಆಧಾರದಲ್ಲಿ ಪ್ಲೇ ಆಫ್‌ಗೆ ಅರ್ಹತೆ ಪಡೆದಿದೆ.

IPL 2020: ಡೆಲ್ಲಿ ಪ್ಲೇ ಆಫ್ ಸ್ಥಾನ ಖಚಿತ, ಸೋತ RCB ಕೂಡ ಸೇಫ್!

ಇನ್ನು ಕೋಲ್ಕತ ನೈಟ್ ರೈಡರ್ಸ್ ತಂಡ ಕೂಡಾ 14 ಅಂಕಗಳಿಸಿದ್ದರೂ ಸಹ ಮಾರ್ಗನ್ ಪಡೆಯ ಪ್ಲೇ ಆಫ್‌ ಸ್ಥಾನ ಇನ್ನೂ ಭದ್ರವಾಗಿಲ್ಲ. ಹೀಗಿರುವಾಗಲೇ ಆರ್‌ಸಿಬಿ ವರ್ಸಸ್ ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯ ವೀಕ್ಷಿಸಿದ ನೆಟ್ಟಿಗರು ಹೊಟ್ಟೆ ಹುಣ್ಣಾಗಿಸುವಂತ ಮೀಮ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.