ಶಾರ್ಜಾ(ಸೆ.28): 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್ ನಡುವೆ ಭಾನುವಾರ(ಸೆ.27) ನಡೆದ ಪಂದ್ಯ ದಾಖಲೆಯ ರನ್ ಚೇಸ್‌ಗೆ ಸಾಕ್ಷಿಯಾಯಿತು. ಶಾರ್ಜಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ನೀಡಿದ್ದ 224 ರನ್‌ಗಳ ಗುರಿಯನ್ನು ರಾಜಸ್ಥಾನ 3 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು. ಇದೆಲ್ಲದರ ಹೊರತಾಗಿಯೂ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ನಿಕೋಲಸ್ ಪೂರನ್ ಅವರು ಮಾಡಿದ ಕ್ಷೇತ್ರ ರಕ್ಷಣೆ ಕ್ರಿಕೆಟ್ ಅಭಿಮಾನಿಗಳು ಬಾಯಿ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದೆ.

ವೆಸ್ಟ್ ಇಂಡೀಸ್ ಆಟಗಾರ ನಿಕೋಲಸ್ ಪೂರನ್ ಬೌಂಡರಿ ಗೆರೆಯಲ್ಲಿ ಆಕರ್ಷಕ ಜಂಪ್ ಮಾಡಿ ಸಿಕ್ಸರ್ ತಡೆದದ್ದು ಎಲ್ಲರು ಒಂದು ಕ್ಷಣ ವಾವ್ಹ್  ಎನ್ನುವಂತಿತ್ತು. ಮುರುಗನ್ ಅಶ್ವಿನ್ ಎಸೆದ ಎಂಟನೇ ಓವರ್‌ನಲ್ಲಿ ಸಂಜು ಸ್ಯಾಮ್ಸನ್ ಬಾರಿಸಿದ ಚೆಂಡು ಸಿಕ್ಸರ್ ಗೆರೆ ದಾಟಿತು ಎಂದೇ ಎಲ್ಲರು ಬಾವಿಸಿಬಿಟ್ಟಿದ್ದರು. ಆದರೆ ಮಿಂಚಿನಂತೆ ಬಂದ ಪೂರನ್ ಗಾಳಿಯಲ್ಲಿ ನೆಗೆದು ಸಿಕ್ಸರ್ ಹೋಗುವುದನ್ನು ತಡೆದು ತಂಡಕ್ಕೆ 4 ರನ್‌ಗಳನ್ನು ಉಳಿಸಿಕೊಟ್ಟರು. 

ಇದಾಗಿ ಕೆಲವೇ ಹೊತ್ತಿನಲ್ಲಿ ಮಾಜಿ ಹಾಗೂ ಹಾಲಿ ಕ್ರಿಕೆಟಿಗರು ವಿಂಡೀಸ್ ಕ್ರಿಕೆಟಿಗನ ಚುರುಕಿನ ಕ್ಷೇತ್ರ ರಕ್ಷಣೆಗೆ ಶಹಬ್ಬಾಸ್ ಎಂದಿದ್ದಾರೆ. ಇನ್ನು ಕ್ರಿಕೆಟ್ ದೇವರೆಂದೇ ಹೆಸರಾದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಒಂದು ಹೆಜ್ಜೆ ಮುಂದೆ ಹೋಗಿ, ನನ್ನ ಕ್ರಿಕೆಟ್‌ ಜೀವನದಲ್ಲಿ ನಾನು ನೋಡಿದ ಅತ್ಯದ್ಭುತ ರನ್ ಸೇವ್ ಇದು ಎಂದು ಗುಣಗಾನ ಮಾಡಿದ್ದಾರೆ.

ಕಳೆದ ಹಲವು ವರ್ಷಗಳಿಂದ ಐಪಿಎಲ್‌ನಲ್ಲಿ ಅತ್ಯದ್ಭುತವಾದ ಕ್ಷೇತ್ರ ರಕ್ಷಣೆಯ ಕ್ಷಣಗಳನ್ನು ನಾವೆಲ್ಲ ನೋಡಿದ್ದೇವೆ. ಆದರೆ ಪೂರನ್ ಅವರ ಈ ಫೀಲ್ಡಿಂಗ್‌ಗೆ ಅಗ್ರಸ್ಥಾನ ಎಂದು ಹಲವರು ಕ್ರಿಕೆಟ್ ಪಂಡಿತರ ಷರಾ ಬರೆದಿದ್ದಾರೆ.

ಇದು ನನ್ನ ಜೀವನದಲ್ಲಿ ಕಂಡ ಬೆಸ್ಟ್ ಸೇವ್. ಇದು ನಿಜಕ್ಕೂ ಅತ್ಯದ್ಭುತ ಎಂದು ಸಚಿನ್ ತೆಂಡುಲ್ಕರ್ ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಉದ್ಘರಿಸಿದ್ದಾರೆ.

ಪೂರನ್ ಅವರ ಕ್ಷೇತ್ರ ರಕ್ಷಣೆಯ ಆ ಬೆಸ್ಟ್ ವಿಡಿಯೋವನ್ನು ನೋಡಲು ಈ ಲಿಂಕ್ ಕ್ಲಿಕ್ ಮಾಡಿ