ಸೆಪ್ಟೆಂಬರ್ 26ರಿಂದ ನವೆಂಬರ್ 08ರ ವರೆಗೂ ಐಪಿಎಲ್?
ಈ ವರ್ಷ ಐಪಿಎಲ್ ನಡೆಸಲು ಶತಾಯಗತಾಯ ಪ್ರಯತ್ನದಲ್ಲಿರುವ ಬಿಸಿಸಿಐ ಈ ಕುರಿತಂತೆ ಹೊಸದೊಂದು ಪ್ಲಾನ್ ರೂಪಿಸಿದೆ. ಹೀಗಾದಲ್ಲಿ ಬೆಂಗಳೂರು ಹಾಗೂ ಚೆನ್ನೈನಲ್ಲಿ ಬಹುತೇಕ ಟೂರ್ನಿಗಳು ನಡೆಯುವ ಸಾಧ್ಯತೆಯಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಜೂ.16): ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ವರ್ಷ ಐಪಿಎಲ್ ಟೂರ್ನಿಯನ್ನು ನಡೆಸಿಯೇ ತೀರಲು ನಿರ್ಧರಿಸಿದೆ. ಇದೇ ಸೆಪ್ಟೆಂಬರ್ 26ರಿಂದ ನವೆಂಬರ್ 08ರ ವರೆಗೂ ಟೂರ್ನಿ ನಡೆಸಲು ತಾತ್ಕಾಲಿಕ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.
ಈ ಅವಧಿಯಲ್ಲಿ ದಿನಕ್ಕೆ 2 ಪಂದ್ಯಗಳಂತೆ 60 ಪಂದ್ಯಗಳನ್ನು ನಡೆಸಲು ಚಿಂತನೆ ನಡೆಸಲಾಗಿದೆ ಎನ್ನಲಾಗಿದೆ. ಸೆಪ್ಟೆಂಬರ್ ವೇಳೆಗೆ ದೇಶದಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಬರದಿದ್ದರೆ ಟೂರ್ನಿಯನ್ನು ಸ್ಥಳಾಂತರಗೊಳಿಸಲು ಸಹ ಸಿದ್ಧತೆ ಆರಂಭಿಸಲಾಗಿದೆ ಎನ್ನಲಾಗಿದೆ. ಈ ಬಾರಿ ಪ್ಲೇ-ಆಫ್ ಮಾದರಿ ಬದಲಿಗೆ ಅಗ್ರ 4 ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ ಎಂದು ವರದಿಯಲ್ಲಿ ಹೇಳಲಾಗಿದೆ.
ಸೆಪ್ಟೆಂಬರ್ ಅಂತ್ಯದ ವೇಳೆಗೆ ಮಾನ್ಸೂನ್ ಮುಗಿಯಲಿರುವುದರಿಂದ ಹೆಚ್ಚಿನ ಪಂದ್ಯಾವಳಿಗಳನ್ನು ದಕ್ಷಿಣ ಭಾರತದಲ್ಲಿ ಆಯೋಜಿಸಲು ಬಿಸಿಸಿಐ ಚಿಂತನೆ ಮಾಡಿದೆ ಎನ್ನಲಾಗಿದೆ. ಹೀಗಾದಲ್ಲಿ ಬೆಂಗಳೂರು ಹಾಗೂ ಚೆನ್ನೈನಲ್ಲಿ ಅರ್ಧ ಭಾಗದ ಐಪಿಎಲ್ ನಡೆಯುವ ಸಾಧ್ಯತೆಯಿದೆ. ಇನ್ನು ಮುಂಬೈನಲ್ಲಿ ಪರಿಸ್ಥಿತಿ ಕೈ ಮೀರುತ್ತಿರುವುದರಿಂದ ವಾಂಖೆಡೆ ಮೈದಾನದಲ್ಲಿ ಟೂರ್ನಿ ಆಯೋಜನೆ ಕಷ್ಟಸಾಧ್ಯ ಎನಿಸಿದೆ.
ಕೇವಲ 7 ನಿಮಿಷದಲ್ಲಿ ಭಾರತದ ಕೋಚ್ ಆಗಿದ್ದ ಕರ್ಸ್ಟನ್
ಕೆಲವು ದಿನಗಳ ಹಿಂದಷ್ಟೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಖಾಲಿ ಮೈದಾನದಲ್ಲಾದರೂ ಸರಿ, ಐಪಿಎಲ್ ಈ ವರ್ಷ ನಡಿಸಿಯೇ ಸಿದ್ದ ಎಂದು ಹೇಳಿದ್ದರು. ಇದರ ಜೊತೆಗೆ ಎಲ್ಲಾ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಸಿದ್ದವಾಗಿರುವಂತೆ ಇ-ಮೇಲ್ ಕಳಿಸಿದ್ದರು. ಒಂದು ವೇಳೆ ಈ ವರ್ಷ ಟಿ20 ವಿಶ್ವಕಪ್ ನಡೆಯದೇ ಹೋದರೆ ಐಪಿಎಲ್ ಟೂರ್ನಿ ಆಯೋಜಿಸುವ ಲೆಕ್ಕಾಚಾರ ಹಾಕಿಕೊಂಡಿದೆ ಬಿಸಿಸಿಐ.