ಐಪಿಎಲ್ ಪ್ರಾಯೋಜಕತ್ವ: ರೇಸ್‌ನಲ್ಲಿ ಅಮೆಜಾನ್ ಎಂಟ್ರಿ..!
ಇಂಡಿಯನ್ ಪ್ರೀಮಿಯರ್ ಲೀಗ್ ಟೈಟಲ್ ಪ್ರಾಯೋಜಕತ್ವಕ್ಕೆ ಹಲವು ಕಂಪನಿಗಳು ಮುಂದೆ ಬಂದಿವೆ. ಈ ಪೈಕಿ ಅಮೆಜಾನ್ ರೇಸ್‌ನಲ್ಲಿ ಹೆಚ್ಚು ಒಲವು ತೋರಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಆ.08): ಚೀನಾ ಮೊಬೈಲ್ ಕಂಪನಿ ವಿವೋ ಐಪಿಎಲ್ ಪ್ರಾಯೋಜಕತ್ವದಿಂದ ಹಿಂದೆ ಸರಿದ ಬಳಿಕ, ಈ ವರ್ಷದ ಐಪಿಎಲ್ಗೆ ಹಲವು ಕಂಪನಿಗಳು ಪ್ರಯೋಜಕತ್ವಕ್ಕೆ ಆಸಕ್ತಿ ತೋರಿವೆ. ಅಮೆಜಾನ್, ಬೈಜೂಸ್, ಕೋಕಾ ಕೋಲಾ ಇಂಡಿಯಾ ಸೇರಿದಂತೆ ಹಲವು ಸಂಸ್ಥೆಗಳು ಪ್ರಾಯೋಜಕತ್ವಕ್ಕೆ ಆಸಕ್ತಿ ವಹಿಸಿವೆ ಎಂದು ವರದಿಯಾದ ಬೆನ್ನಲ್ಲೇ, ಇದೀಗ ಮತ್ತಷ್ಟು ಕಂಪನಿಗಳು ಪೈಪೋಟಿಗಿಳಿಯಲು ಸಿದ್ಧವಾಗಿವೆ.
ಅನ್ಅಕಾಡೆಮಿ, ಮೈ ಸರ್ಕಲ್ 11, ಡ್ರೀಮ್ 11 ಕಂಪನಿಗಳು ಪ್ರಾಯೋಜಕತ್ವ ಹಕ್ಕು ಸಂಪಾದಿಸಲು ಪ್ರಯತ್ನಿಸಲಿವೆ ಎನ್ನಲಾಗಿದೆ. ಇದೇ ವೇಳೆ ಬಿಸಿಸಿಐ ವಿವೋ ಜಾಗಕ್ಕೆ ಒಂದಕ್ಕಿಂತ ಹೆಚ್ಚು ಕಂಪನಿಗಳನ್ನು ಪ್ರಾಯೋಜಕರಾಗಿ ಪಡೆಯುವ ಲೆಕ್ಕಾಚಾರ ನಡೆಸಿದೆ ಎನ್ನಲಾಗಿದೆ. ಟೈಟಲ್ ಪ್ರಾಯೋಜಕತ್ವವನ್ನು ಒಂದು ಕಂಪನಿಗೆ ನೀಡಿ, ಅಧಿಕೃತ ಪ್ರಾಯೋಜಕರು ಎನ್ನುವ ಹೆಸರಲ್ಲಿ ಪ್ರಾಯೋಜಕತ್ವ ಹಕ್ಕು ಮಾರಾಟ ಮಾಡಲು ಯೋಜನೆ ರೂಪಿಸುತ್ತಿದೆ ಎಂದು ವರದಿಯಾಗಿದೆ.
ಐಪಿಎಲ್ ಪ್ರಾಯೋಜಕತ್ವಕ್ಕೆ ಕೋಕ್, ಬೈಜೂಸ್ ಆಸಕ್ತಿ?
13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಸೆಪ್ಟೆಂಬರ್ 19ರಿಂದ ಆರಂಭವಾಗಿ ನವೆಂಬರ್ 10ರವರೆಗೆ ನಡೆಯಲಿದೆ. ಭಾರತದಲ್ಲಿ ನಡೆಯಬೇಕಿದ್ದ ಈ ಚುಟುಕು ಕ್ರಿಕೆಟ್ ಟೂರ್ನಿಯು ಕೊರೋನಾ ಭೀತಿಯಿಂದಾಗಿ ಯುಎಇಗೆ ಸ್ಥಳಾಂತರವಾಗಿದೆ. ಕಳೆದೆರಡು ತಿಂಗಳ ಹಿಂದಷ್ಟೇ ಪೂರ್ವ ಲಡಾಖ್‌ನ ಗಡಿ ಭಾಗವಾದ ಗಲ್ವಾನ್ ಪ್ರದೇಶದಲ್ಲಿ ಭಾರತ-ಚೀನಾ ಸೈನಿಕರ ನಡುವಿನ ಘರ್ಷಣೆಯಲ್ಲಿ ಭಾರತದ 20 ಯೋಧರು ಕೊನೆಯುಸಿರೆಳೆದಿದ್ದರು. ಇದರ ಬೆನ್ನಲ್ಲೇ ಚೀನಿ ಉತ್ಫನ್ನಗಳ ವಿರುದ್ಧ ಘೋಷಣೆ ಜೋರಾಗಿತ್ತು.