IPL 2020 ಕೊಲ್ಲಿ ರಾಷ್ಟ್ರದಲ್ಲಿ ಚುಟುಕು ಕ್ರಿಕೆಟ್ ಕಲರವ ಶುರು..!
13ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದೆ. ಈ ಬಾರಿಯ ಐಪಿಎಲ್‌ನ ವಿಶೇಷತೆಗಳೇನು ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.
ಅಬುಧಾಬಿ(ಸೆ.19): ಕೊರೋನಾ ಸೋಂಕಿನ ಆತಂಕ, ಹಲವು ಅಡೆತಡೆಗಳ ನಡುವೆಯೇ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದ ಆ ದಿನ ಬಂದೇ ಬಿಟ್ಟಿದೆ. ಬಹುನಿರೀಕ್ಷಿತ 13ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಟೂರ್ನಿಗೆ ಶನಿವಾರ ಇಲ್ಲಿ ಚಾಲನೆ ಸಿಗಲಿದ್ದು, 53 ದಿನಗಳ ಕಾಲ ಅಭಿಮಾನಿಗಳಿಗೆ ಭರಪೂರ ಮನರಂಜನೆ ಸಿಗಲಿದೆ. ಈ ವರ್ಷವೂ 8 ತಂಡಗಳು ಪ್ರಶಸ್ತಿ ಗೆಲ್ಲಲು ಪೈಪೋಟಿ ನಡೆಸಲಿದ್ದು, ನ.10ರಂದು ಫೈನಲ್ ಪಂದ್ಯ ನಡೆಯಲಿದೆ.
ಟೂರ್ನಿ ಮಾದರಿ ಹೇಗೆ?:
ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನ ಸುಡು ಬಿಸಿಲಿನಲ್ಲಿ ಟೂರ್ನಿ ನಡೆಯಲಿದ್ದು, ದಣಿವರಿಯದೆ ಮುನ್ನುಗ್ಗುವ ತಂಡ ಟ್ರೋಫಿಗೆ ಮುತ್ತಿಡಲಿದೆ. ಲೀಗ್ ಹಂತದಲ್ಲಿ 56 ಪಂದ್ಯಗಳು ನಡೆಯಲಿದ್ದು, ಅ.1ರ ಬಳಿಕ ವಾರಾಂತ್ಯದಲ್ಲಿ ತಲಾ 2 ಪಂದ್ಯಗಳು ನಡೆಯಲಿವೆ. ಒಟ್ಟು 10 ದಿನಗಳಂದು 2 ಪಂದ್ಯಗಳನ್ನು ನಡೆಸಲು ಬಿಸಿಸಿಐ ನಿರ್ಧರಿಸಿದೆ. ಲೀಗ್ ಹಂತದ ಮುಕ್ತಾಯಕ್ಕೆ ಅಂಕಪಟ್ಟಿಯಲ್ಲಿ ಅಗ್ರ 4 ಸ್ಥಾನಗಳನ್ನು ಪಡೆಯುವ ತಂಡಗಳು ಪ್ಲೇ-ಆಫ್ ಪ್ರವೇಶಿಸಲಿವೆ. ಮೊದಲೆರಡು ಸ್ಥಾನಗಳನ್ನು ಹೊಂದಿರುವ ತಂಡಗಳು ಮೊದಲ ಕ್ವಾಲಿಫೈಯರ್‌ನಲ್ಲಿ ಆಡಲಿವೆ. ಗೆಲ್ಲುವ ತಂಡ ನೇರವಾಗಿ ಫೈನಲ್‌ಗೇರಲಿದೆ. 3ನೇ ಹಾಗೂ 4ನೇ ಸ್ಥಾನ ಪಡೆಯುವ ತಂಡಗಳು 2ನೇ ಕ್ವಾಲಿಫೈಯರ್‌ನಲ್ಲಿ ಆಡಲಿದ್ದು, ಸೋಲುವ ತಂಡ ಹೊರಬೀಳಲಿದೆ. ಎಲಿಮಿನೇಟರ್ ಪಂದ್ಯದಲ್ಲಿ ಮೊದಲ ಕ್ವಾಲಿಫೈಯರ್‌ನಲ್ಲಿ ಸೋಲುವ ತಂಡ, 2ನೇ ಕ್ವಾಲಿಫೈಯರ್‌ನಲ್ಲಿ ಗೆಲ್ಲುವ ತಂಡ ಎದುರಾಗಲಿದ್ದು, ಈ ಪಂದ್ಯದಲ್ಲಿ ಗೆದ್ದ ತಂಡ ಫೈನಲ್‌ಗೇರಲಿದೆ.
ಭರ್ಜರಿ ತಯಾರಿ:
"
ಕಳೆದ ತಿಂಗಳೇ ಯುಎಇ ತಲುಪಿದ್ದ 8 ತಂಡಗಳು, 3 ವಾರಗಳ ಅಭ್ಯಾಸ ಶಿಬಿರ ನಡೆಸಿವೆ. ತಂಡದೊಳಗೇ ತಂಡಗಳನ್ನು ರಚಿಸಿಕೊಂಡು ಅಭ್ಯಾಸ ಪಂದ್ಯಗಳನ್ನಾಡಿವೆ. ಎಲ್ಲಾ ತಂಡಗಳು ಭರ್ಜರಿ ತಯಾರಿ ನಡೆಸಿವೆಯಾದರೂ, ಟೂರ್ನಿ ಆರಂಭಗೊಂಡ ಬಳಿಕವಷ್ಟೇ ತಂಡಗಳ ಅಸಲಿ ಬಲಾಬಲ ತಿಳಿಯುವುದು. ಟೂರ್ನಿ ಭಾರತದಲ್ಲಿ ನಡೆಯಲಿದೆ ಎನ್ನುವ ಲೆಕ್ಕಾಚಾರದೊಂದಿಗೆ ತಂಡಗಳನ್ನು ಸಿದ್ಧಪಡಿಸಿಕೊಂಡಿದ್ದ ಫ್ರಾಂಚೈಸಿಗಳಿಗೆ ಟೂರ್ನಿ ಯುಎಇಗೆ ಸ್ಥಳಾಂತರಗೊಂಡಿದ್ದರಿಂದ ಸಹಜವಾಗಿಯೇ ಗೊಂದಲ ಉಂಟಾಗಿತ್ತು. ಅಲ್ಲಿನ ವಾತಾವರಣಕ್ಕೆ ತಕ್ಕಂತೆ ಈಗ ರಣತಂತ್ರ ಬದಲಿಸಿಕೊಳ್ಳಬೇಕಿದೆ.
ಈ ಸಲದ ಐಪಿಎಲ್ ಮಿಸ್ ಮಾಡ್ದೇ ನೋಡ್ಬೇಕು, ಯಾಕೆ ಅಂತಿರಾ..?
ಸ್ಪಿನ್ನರ್‌ಗಳೇ ಟ್ರಂಪ್‌ಕಾರ್ಡ್ಸ್:
"
ಅಬುಧಾಬಿ, ಶಾರ್ಜಾ ಹಾಗೂ ದುಬೈ ಮೂರೂ ಕ್ರೀಡಾಂಗಣಗಳ ಪಿಚ್‌ಗಳು ಸ್ಪಿನ್ ಸ್ನೇಹಿಯಾಗಿವೆ. ಸ್ಪಿನ್ ಪಡೆ ಬಲಿಷ್ಠವಾಗಿರುವ ತಂಡಗಳು ಟೂರ್ನಿಯಲ್ಲಿ ಯಶಸ್ಸು ಗಳಿಸಲಿವೆ. ಪಾಕಿಸ್ತಾನ ತಂಡ ಯುಎಇನಲ್ಲಿ ತವರು ಪಂದ್ಯಗಳನ್ನು ಆಡಿ, ಟಿ20ಯಲ್ಲಿ ವಿಶ್ವ ನಂ.1 ಸ್ಥಾನಕ್ಕೇರಿತ್ತು. ತಂಡ ನಂ.1 ಆಗಲು ಸ್ಪಿನ್ನರ್‌ಗಳೇ ಕಾರಣ. ಜೊತೆಗೆ ಯುಎಇನಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಪ್ರದರ್ಶನ ನಿರ್ಣಾಯಕವಾಗಲಿದೆ. ಕ್ರೀಸ್‌ನಲ್ಲಿ ನೆಲೆಯೂರಿ ರನ್ ಕಲೆಹಾಕಬೇಕಿದೆ. 150-160 ರನ್ ಗಳಿಸಿದರೂ ರಕ್ಷಿಸಿಕೊಳ್ಳಲು ಸಾಧ್ಯ.
ಮುಖ್ಯವಾಗಿ ಕ್ರೀಡಾಂಗಣಗಳಲ್ಲಿ ಪ್ರೇಕ್ಷಕರಿರುವುದಿಲ್ಲ. ಖಾಲಿ ಕ್ರೀಡಾಂಗಣ ಆಟಗಾರರ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರಲಿದೆ ಎನ್ನುವುದು ಕುತೂಹಲ ಮೂಡಿಸಿದೆ.