ಬೆಂಗಳೂರು (ಅ.11): ಗಾಯಕ ರಘು ದೀಕ್ಷಿತ್ ಪತ್ನಿ, ಕೊರಿಯೋಗ್ರಾಫರ್ ಮಯೂರಿ ಉಪಾಧ್ಯ, ತಮ್ಮ ಪತಿಯ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿರುವ ಗಾಯಕಿ ಚಿನ್ಮಯಿ ಶ್ರೀಪಾದ್ ಅವರನ್ನು ಬೆಂಬಲಿಸಿದ್ದಾರೆ.

#MeToo ಹ್ಯಾಷ್ ಟ್ಯಾಗ್‌ನೊಂದಿಗೆ ಟ್ವೀಟ್ ಮಾಡಿರುವ ಮಯೂರಿ, 'ತಮ್ಮ ವಿರುದ್ಧ ನಡೆದ ಲೈಂಗಿಕ ಕಿರುಕುಳವನ್ನು ಅಭಿವ್ಯಕ್ತಗೊಳಿಸಲು ಹೆಣ್ಣಿಗೆ ದಿಟ್ಟತನವಿರಬೇಕು. ಅಂಥ ಧೈರ್ಯ ತೋರಿರುವ ಮಹಿಳೆಯರಿಗೆ ನನ್ನ ಬೆಂಬಲವಿದೆ. ತಪ್ಪು ಯಾರೇ ಮಾಡಿರಲಿ, ಅವರಿಗೆ ತಕ್ಕ ಶಿಕ್ಷೆ ಆಗಲೇಬೇಕು. ಎಲ್ಲ ಸಂತ್ರಸ್ತೆಯರ ಪರ ನಾನಿದ್ದೇನೆ,' ಎಂದು ಹೇಳಿದ್ದಾರೆ.

'ನನ್ನ ಮದುವೆ ಹಾಗು ವಿಚ್ಛೇದನ ಇಲ್ಲಿ ಪ್ರಸ್ತುತವಲ್ಲ. ನಾನು ಮದುವೆಗೂ ಮುಂಚೆಯೂ ಒಂದು ಹೆಣ್ಣಾಗಿದ್ದೆ. ಯಾರೇ ಆಗಿರಲಿ, ಪ್ರತಿಯೊಬ್ಬರೂ ತಮ್ಮ ಘನತೆ, ಗೌರವ ಕಾಪಾಡಿಕೊಳ್ಳುವುದು ಮುಖ್ಯ. ಈ ಘಟನೆಗಳಲ್ಲಿ ಸತ್ಯವೇನೆಂಬುವುದು ಗೊತ್ತಿರದೇ ಹೋದರೂ, ತಪ್ಪಿದಸ್ತರಿಗೆ ತಕ್ಕ ಶಿಕ್ಷೆಯಾಗಬೇಕು,' ಎಂದು ಸರಣಿ ಟ್ವೀಟಿನಲ್ಲಿ ಮಯೂರಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

"

ಗಾಯಕ ರಘು ದೀಕ್ಷಿತ್ ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಇಬ್ಬರು ಅನಾಮಧೇಯ ಮಹಿಳೆಯು ಬರೆದ ಪತ್ರವನ್ನು ಚಿನ್ಮಯಿ ಟ್ವೀಟ್ ಮಾಡಿದ್ದರು. ಆ ಮೂಲಕ ಕನ್ನಡದ ಪ್ರತಿಭೆಗಳೂ #MeToo ಅಭಿಯಾನದಲ್ಲಿ ಸಿಕ್ಕಿ ಹಾಕಿಕೊಳ್ಳುವ ಆತಂಕ ಕಾಡುವಂತಾಗಿದೆ. ಗಾಯಕಿ ಮಾಡಿರುವ ಆರೋಪವನ್ನು ಒಪ್ಪಿಕೊಂಡು ರಘು ದೀಕ್ಷಿತ್, ಟ್ವೀಟ್ ಮಾಡಿದ್ದಾರೆ.