ಕೃಷ್ಣನಂತೆ ವೇಷ ಧರಿಸಿಕೊಂಡು ಕೊಳಲು ಊದಿ ಹಿಂದೊಮ್ಮೆ ಸುದ್ದಿಯಲ್ಲಿದ್ದ ಬಿಹಾರದ ಆರ್‌ಜೆಡಿ ನಾಯಕ ತೇಜ್‌ ಪ್ರತಾಪ್‌ ಯಾದವ್‌ರನ್ನು ಸ್ವತಃ ಅವರ ತಂದೆ ಲಾಲು ಪ್ರಸಾದ್‌ ಯಾದವ್‌ ಅವರೇ ಪಕ್ಷ ಮತ್ತು ಕುಟುಂಬದಿಂದ ಹೊರಹಾಕಿದ್ದಾರೆ. 

ಪಟನಾ (ಮೇ.26): ಕೃಷ್ಣನಂತೆ ವೇಷ ಧರಿಸಿಕೊಂಡು ಕೊಳಲು ಊದಿ ಹಿಂದೊಮ್ಮೆ ಸುದ್ದಿಯಲ್ಲಿದ್ದ ಬಿಹಾರದ ಆರ್‌ಜೆಡಿ ನಾಯಕ ತೇಜ್‌ ಪ್ರತಾಪ್‌ ಯಾದವ್‌ರನ್ನು ಸ್ವತಃ ಅವರ ತಂದೆ ಲಾಲು ಪ್ರಸಾದ್‌ ಯಾದವ್‌ ಅವರೇ ಪಕ್ಷ ಮತ್ತು ಕುಟುಂಬದಿಂದ ಹೊರಹಾಕಿದ್ದಾರೆ.

ಮದುವೆಯಾಗಿದ್ದರೂ ಪರಸ್ತ್ರಿ ಜೊತೆಗಿನ ಅಕ್ರಮ ಸಂಬಂಧದ ವಿಷಯ ದೊಡ್ಡಮಟ್ಟದಲ್ಲಿ ಬೆಳಕಿಗೆ ಬರುತ್ತಲೇ, ಕುಟುಂಬದ ಮಾನ ಉಳಿಸಿಕೊಳ್ಳಲು ಮುಂದಾಗಿರುವ ಲಾಲು ಈ ಶಿಸ್ತು ಕ್ರಮ ಘೋಷಿಸಿದ್ದಾರೆ.

ಅದರನ್ವಯ, ತೇಜ್ ಪ್ರತಾಪ್ ಯಾದವ್ ಅವರನ್ನು ಬೇಜವಾಬ್ದಾರಿ ವರ್ತನೆ ಕಾರಣಕ್ಕೆ ಪಕ್ಷದಿಂದ 6 ವರ್ಷ ಉಚ್ಛಾಟಿಸಲಾಗಿದೆ. ಜೊತೆಗೆ ಪುತ್ರನೊಂದಿಗಿನ ಎಲ್ಲಾ ಸಂಬಂಧವನ್ನು ಕಡಿದುಕೊಂಡಿದ್ದಾಗಿ ಲಾಲು ಘೋಷಿಸಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಲಾಲು, ‘ಹಿರಿಯ ಮಗನ ಚಟುವಟಿಕೆಗಳು, ಸಾರ್ವಜನಿಕ ನಡವಳಿಕೆ, ಬೇಜವಾಬ್ದಾರಿ ವರ್ತನೆ ನಮ್ಮ ಕೌಟುಂಬಿಕ ಮೌಲ್ಯ, ಸಂಪ್ರದಾಯಗಳಿಗೆ ಅನುಗುಣವಾಗಿಲ್ಲ. ಆದ್ದರಿಂದ ಪಕ್ಷ ಮತ್ತು ಕುಟುಂಬದಿಂದ ತೆಗೆದು ಹಾಕುತ್ತೇನೆ. ಇಂದಿನಿಂದ ಪಕ್ಷ ಮತ್ತು ಕುಟುಂಬದಲ್ಲಿ ಯಾವುದೇ ಸ್ಥಾನವಿರುವುದಿಲ್ಲ. 6 ವರ್ಷ ಪಕ್ಷದಿಂದ ಹೊರ ಹಾಕಲಾಗಿದೆ’ ಎಂದಿದ್ದಾರೆ.

ಬಿಹಾರ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿಯಿರುವ ನಡುವೆ ಲಾಲು ಕೈಗೊಂಡಿರುವ ಈ ಕ್ರಮ ಸಾಕಷ್ಟು ಅನುಮಾನಗಳಿಗೂ ಕಾರಣವಾಗಿದೆ. ಎದುರಾಳಿಗಳು ಈ ವಿಷಯವನ್ನು ಚುನಾವಣೆಯಲ್ಲಿ ಬಳಸಿಕೊಳ್ಳುವ ಅವಕಾಶ ತಪ್ಪಿಸಲು ಲಾಲು ಈ ತುರ್ತು ಕ್ರಮ ಘೋಷಿಸಿರಬಹುದು ಎಂದು ವಿಶ್ಲೇಷಿಸಲಾಗಿದೆ. ಈ ನಡುವೆ ಇನ್ನು ಸೋದರನ ವಿರುದ್ಧ ಕ್ರಮಕ್ಕೆ ತೇಜಸ್ವಿ ಯಾದವ್ ಪ್ರತಿಕ್ರಿಯಿಸಿದ್ದು, ‘ನನ್ನ ಅಣ್ಣ ವಯಸ್ಕ. ವೈಯಕ್ತಿಕ ಜೀವನದಲ್ಲಿ ಯಾವುದೇ ಆಯ್ಕೆ ಮಾಡಲು ಸ್ವತಂತ್ರರು. ಆದರೆ ನಾವು ಸಹಿಸಲಾಗದ ಕೆಲವು ವಿಷಯಗಳಿವೆ’ ಎಂದಿದ್ದಾರೆ.

ಯಾಕಾಗಿ ಈ ಕ್ರಮ?

ಶನಿವಾರವಷ್ಟೇ ಅನುಷ್ಕಾ ಯಾದವ್ ಎಂಬಾಕೆಯ ಜತೆಗಿನ 12 ವರ್ಷದ ಪ್ರೇಮ ಸಂಬಂಧವನ್ನು ಘೋಷಿಸುವ ತೇಜ್ ಪ್ರತಾಪ್‌ರ ಫೇಸ್‌ಬುಕ್‌ ಪೋಸ್ಟ್ ವೈರಲ್‌ ಆಗಿತ್ತು. ಆದರೆ ಇದು ವೈರಲ್‌ ಆದ ಬೆನ್ನಲ್ಲೇ ನನ್ನ ಫೇಸ್‌ಬುಕ್‌ ಖಾತೆ ಹ್ಯಾಕ್‌ ಮಾಡಲಾಗಿದೆ ಎಂದು ತೇಜ್‌ಪ್ರತಾಪ್‌ ಸ್ಪಷ್ಟನೆ ನೀಡಿದ್ದರು. ಆದರೆ ಅದರ ಬೆನ್ನಲ್ಲೇ, ಅನುಷ್ಕಾ ಜೊತೆಗಿನ ತೇಜ್‌ಪ್ರತಾಪ್‌ ಮದುವೆ ಮತ್ತು ಇಬ್ಬರು ಕೊಠಡಿಯೊಂದರಲ್ಲಿ ಒಂದಾಗಿ ಇರುವ ವಿಡಿಯೋವೊಂದು ಬಿಡುಗಡೆಯಾಗಿ ಲಾಲು ಪುತ್ರನ ಬಣ್ಣ ಬಯಲು ಮಾಡಿತ್ತು. ಅದರ ಬೆನ್ನಲ್ಲೇ ಅವರ ತಂದೆ ಈ ಶಿಸ್ತು ಕ್ರಮ ಪ್ರಕಟಿಸಿದ್ದಾರೆ.

ತೇಜಸ್ವಿ ಲೀಲೆ

ತೇಜಸ್ವಿಗೆ ಈಗಾಗಲೇ ಐಶ್ವರ್ಯ ಎಂಬಾಕೆ ಜತೆ ಹಿಂದೆಯೇ ಮದುವೆ ಆಗಿತ್ತು. ಆದರೆ ಕೆಲ ದಿನಗಳಲ್ಲೇ ಇಬ್ಬರ ಸಂಬಂಧ ಹಳಸಿ, ಐಶ್ವರ್ಯಾ ಪತಿ ಮನೆ ತೊರೆದಿದ್ದರು. ನ್ಯಾಯಾಲಯದಲ್ಲಿ ಇಬ್ಬರ ಡೈವೋರ್ಸ್ ಅರ್ಜಿ ವಿಚಾರಣೆ ಹಂತದಲ್ಲಿದೆ. ಅದರ ನಡುವೆಯೇ, ಅನುಷ್ಕಾ ಜೊತೆಗಿನ ಅವರ ಸಂಬಂಧ ಬೆಳಕಿಗೆ ಬಂದಿದೆ.