ಪಣಜಿ[ಜ.06]: ‘ಗೋವಾ ಮುಖ್ಯಮಂತ್ರಿ ಹಾಗೂ ಮಾಜಿ ರಕ್ಷಣಾ ಮಂತ್ರಿ ಮನೋಹರ ಪರ್ರಿಕರ್‌ ಅವರ ಮನೆಯ ಶಯನಗೃಹದಲ್ಲಿ ರಫೇಲ್‌ ಯುದ್ಧವಿಮಾನ ಖರೀದಿ ವ್ಯವಹಾರದ ರಹಸ್ಯ ಕಡತಗಳು ಇರಬಹುದಾದ ಹಿನ್ನೆಲೆಯಲ್ಲಿ ಅವರ ಜೀವಕ್ಕೆ ಅಪಾಯವಿದ್ದು, ಅವರಿಗೆ ಭದ್ರತೆ ಹೆಚ್ಚಿಸಬೇಕು’ ಎಮದು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರಿಗೆ ಪ್ರದೇಶ ಗೋವಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಗಿರೀಶ್‌ ಛೋಡಂಕರ್‌ ಪತ್ರ ಬರೆದಿದ್ದಾರೆ.

‘ರಫೇಲ್‌ ಕಡತಗಳನ್ನು ಪರ್ರಿಕರ್‌ ಮನೆಯಿಂದ ಹೊತ್ತೊಯ್ಯಲು ಯತ್ನಗಳು ನಡೆಯುವ ಸಾಧ್ಯತೆ ಇದ್ದು, ಇದರಿಂದ ಪರ್ರಿಕರ್‌ ಅವರ ಜೀವಕ್ಕೆ ಅಪಾಯವಿದೆ. ಭ್ರಷ್ಟಾಚಾರ ಮುಚ್ಚಿಹಾಕಲು ಇಂಥ ಯತ್ನಗಳು ನಡೆಯಬಹುದಾಗಿದೆ’ ಎಂದು ಪತ್ರದಲ್ಲಿ ಛೋಡಂಕರ್‌ ಕಾರಣ ನೀಡಿದ್ದಾರೆ.

ಪರ್ರಿಕರ್‌ ಮನೆಯ ಬೆಡ್ ರೂಂನಲ್ಲಿ ರಹಸ್ಯ

ಇತ್ತೀಚೆಗೆ ಗೋವಾ ಸಚಿವ ವಿಶ್ವಜಿತ್‌ ರಾಣೆ ಅವರ ರೀತಿಯ ಧ್ವನಿಯಿದ್ದ ಆಡಿಯೋ ಟೇಪನ್ನು ಕಾಂಗ್ರೆಸ್‌ ಬಿಡುಗಡೆ ಮಾಡಿತ್ತು. ಅದರಲ್ಲಿ ರಾಣೆ ಅವರು, ‘ತಮ್ಮ ಬೆಡ್‌ರೂಮಲ್ಲಿ ರಫೇಲ್‌ ಕಡತಗಳಿವೆ ಎಂದು ಪರ್ರಿಕರ್‌ ಸಂಪುಟ ಸಭೆಯಲ್ಲಿ ಹೇಳಿದ್ದರು’ ಎಂದು ಪತ್ರಕರ್ತರೊಬ್ಬರೆದುರು ಹೇಳುವ ಅಂಶವಿತ್ತು.