ಸೂಪರ್‌ಸಾನಿಕ್‌ ಕ್ಷಿಪಣಿ ಯೋಜನೆ ಕುರಿತಾದ ಮಾಹಿತಿಯನ್ನು ತನ್ನ ಹಿರಿಯ ಸಹೋದ್ಯೋಗಿಗಳ ಕಂಪ್ಯೂಟರ್‌ನಿಂದ ರಹಸ್ಯವಾಗಿ ಕಾಪಿ ಮಾಡಿಕೊಂಡಿದ್ದೆ ಎಂದು ವಿಜ್ಞಾನಿ, ಮಾಹಿತಿ ಕದ್ದ ಆರೋಪದಡಿ ಬಂಧಿತರಾಗಿರುವ ನಿಶಾಂತ್ ಒಪ್ಪಿಕೊಂಡಿದ್ದಾರೆ.

ನಾಗ್ಪುರ: ಭಾರತ ಮತ್ತು ರಷ್ಯಾ ಸಹಭಾಗಿತ್ವದ ಬ್ರಹ್ಮೋಸ್‌ ಸೂಪರ್‌ಸಾನಿಕ್‌ ಕ್ಷಿಪಣಿಗೆ ಸಂಬಂಧಿಸಿದ ರಹಸ್ಯ ಮಾಹಿತಿಗಳಿಗಾಗಿ ಪಾಕಿಸ್ತಾನದ ಏಜೆಂಟ್‌ಗಳು, ತನಗೆ ಅಮೆರಿಕದಲ್ಲಿ ಭಾರೀ ಸಂಬಳದ ನೌಕರಿ ಆಮಿಷ ಒಡ್ಡಿದ್ದರು ಎಂದು ಬ್ರಹ್ಮೋಸ್‌ ಇಂಜಿನಿಯರ್‌ ನಿಶಾಂತ್‌ ಅಗರ್‌ವಾಲ್‌ ಹೇಳಿದ್ದರು.

ವಿಜ್ಞಾನಿಗಳನ್ನು ಸೆಳೆಯಲು ಹನಿಟ್ರ್ಯಾಪ್

ಇದರ ಬೆನ್ನಲ್ಲೇ, ಸೂಪರ್‌ಸಾನಿಕ್‌ ಕ್ಷಿಪಣಿ ಯೋಜನೆ ಕುರಿತಾದ ಮಾಹಿತಿಯನ್ನು ತನ್ನ ಹಿರಿಯ ಸಹೋದ್ಯೋಗಿಗಳ ಕಂಪ್ಯೂಟರ್‌ನಿಂದ ರಹಸ್ಯವಾಗಿ ಕಾಪಿ ಮಾಡಿಕೊಂಡಿದ್ದೆ ಎಂದು ಆರೋಪಿ ನಿಶಾಂತ್‌ ಎದುರು ಒಪ್ಪಿಕೊಂಡಿದ್ದಾನೆ. ನಿಶಾಂತ್‌ ತಪ್ಪೊಪ್ಪಿಗೆ ಹೇಳಿಕೆ ಕುರಿತಾದ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ತಂಡ(ಎಟಿಎಸ್‌) ದಾಖಲಿಸಿದ ಎಫ್‌ಐಆರ್‌ ಪ್ರತಿ ತನಗೆ ಲಭ್ಯವಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ರಕ್ಷಣಾ ಮಾಹಿತಿಯನ್ನು ಪಾಕ್‌ಗೆ ನೀಡಿದ ಯುವ ವಿಜ್ಞಾನಿ

ಅಲ್ಲದೆ, ತಾನು ಹೈದರಾಬಾದ್‌ನ ಬ್ರಹ್ಮೋಸ್‌ ಘಟಕದಲ್ಲಿ ವಿಜ್ಞಾನಿಯಾಗಿ ಸೇವೆಗೆ ನಿಯೋಜನೆಯಾದ ಬಳಿಕ 4 ವರ್ಷಗಳ ಹಿಂದೆಯೇ, ತನ್ನ ಹಿರಿಯ ಸಹೋದ್ಯೋಗಿಗಳಿಗೆ ತಿಳಿಯದಂತೆ, ಅವರ ಕಂಪ್ಯೂಟರ್‌ಗಳಿಂದ ರಹಸ್ಯ ಮಾಹಿತಿಯನ್ನು ಕದ್ದಿರುವುದಾಗಿ ನಿಶಾಂತ್‌ ಎಟಿಎಸ್‌ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.