ಶೇಖ್ ಹಸೀನಾ ನೊಬೆಲ್ ಪ್ರಶಸ್ತಿ ವಿಜೇತ ಮೊಹಮ್ಮದ್ ಯೂನುಸ್ ಮೇಲೆ ದೇಶವನ್ನು ಅಮೆರಿಕಕ್ಕೆ ಮಾರಿದ್ದಾರೆ ಮತ್ತು ಭಯೋತ್ಪಾದಕರ ಸಹಾಯದಿಂದ ಅಧಿಕಾರ ಪಡೆದಿದ್ದಾರೆ ಎಂದು ಗಂಭೀರ ಆರೋಪ ಹೊರಿಸಿದ್ದಾರೆ.
ನವದೆಹಲಿ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಮತ್ತೊಮ್ಮೆ ದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮತ್ತು ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಮೊಹಮ್ಮದ್ ಯೂನುಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಮೆರಿಕಕ್ಕೆ ದೇಶವನ್ನು ಮಾರಾಟ ಮಾಡಿದ್ದಾರೆ. ಭಯೋತ್ಪಾದಕರ ಸಹಾಯದಿಂದ ಅಧಿಕಾರ ಪಡೆದಿದ್ದಾರೆ ಎಂಬ ಗಂಭೀರ ಆರೋಪವನ್ನು ಶೇಖ್ ಹಸೀನಾ ಮಾಡಿದ್ದಾರೆ.
ಅವಾಮಿ ಲೀಗ್ ಮೇಲೆ ದೇಶದಲ್ಲಿ ನಿಷೇಧ ಹೇರಲಾಗಿದೆ. ಡಿಸೆಂಬರ್ 2025 ರಲ್ಲಿ ಸಾರ್ವತ್ರಿಕ ಚುನಾವಣೆ ನಡೆಸುವಂತೆ ಮಿಲಿಟರಿ ಪಡೆಗಳು ಒತ್ತಾಯಿಸುತ್ತಿರುವ ಸಂದರ್ಭದಲ್ಲಿ ಯೂನುಸ್ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ ಎಂಬ ಮಾತನ್ನು ಉಲ್ಲೇಖಿಸಿದ್ದಾರೆ.
ಸೇಂಟ್ ಮಾರ್ಟಿನ್ಸ್ ದ್ವೀಪಕ್ಕಾಗಿ ನನ್ನ ತಂದೆ ಪ್ರಾಣ ಕೊಟ್ಟರು
ಅವಾಮಿ ಲೀಗ್‌ನ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಬಿಡುಗಡೆಯಾದ ಆಡಿಯೊ ಸಂದೇಶದಲ್ಲಿ ಶೇಖ್ ಹಸೀನಾ ತಮ್ಮ ತಂದೆ ಶೇಖ್ ಮುಜಿಬುರ್ ರೆಹಮಾನ್ ಅಮೆರಿಕದ ಬೇಡಿಕೆಯನ್ನು ತಿರಸ್ಕರಿಸಿ ಸೇಂಟ್ ಮಾರ್ಟಿನ್ಸ್ ದ್ವೀಪವನ್ನು ಬಿಟ್ಟುಕೊಡಲಿಲ್ಲ. ಇದಕ್ಕಾಗಿ ಅವರು ತಮ್ಮ ಪ್ರಾಣವನ್ನೇ ಕಳೆದುಕೊಳ್ಳಬೇಕಾಯಿತು ಎಂದು ನೆನಪಿಸಿಕೊಂಡರು. ನಾನು ಎಂದಿಗೂ ಅಧಿಕಾರಕ್ಕಾಗಿ ದೇಶವನ್ನು ಮಾರಿಲ್ಲ. ದೇಶವನ್ನು ಉಳಿಸಲು ನಾನು ಗಡಿಪಾರು ಹೋಗುವುದು ಅನಿವಾರ್ಯವಾಗಿತ್ತು ಎಂದು ತಾವು ದೇಶ ತೊರೆದಿದ್ದರ ಬಗ್ಗೆಯೂ ಶೇಖ್ ಹಸೀನಾ ಹೇಳಿದ್ದಾರೆ.
ದೇಶದ ಮೇಲೆ ಭಯೋತ್ಪಾದಕರ ಆಳ್ವಿಕೆ, ಜೈಲುಗಳು ಖಾಲಿಯಾಗಿವೆ
ಯೂನುಸ್ ಅಧಿಕಾರಕ್ಕೆ ಬರಲು ತಮ್ಮ ಸರ್ಕಾರ ವರ್ಷಗಳ ಕಾಲ ಹೋರಾಡಿದ ಭಯೋತ್ಪಾದಕ ಸಂಘಟನೆಗಳನ್ನೇ ಬಳಸಿಕೊಂಡಿದ್ದಾರೆ ಎಂದು ಶೇಖ್ ಹಸೀನಾ ಆರೋಪಿಸಿದ್ದಾರೆ. ಭಯೋತ್ಪಾದಕ ದಾಳಿಯ ನಂತರ ನಾವು ಕಠಿಣ ಕ್ರಮ ಕೈಗೊಂಡಿದ್ದೇವೆ. ಹಲವಾರು ಭಯೋತ್ಪಾದಕರನ್ನು ಬಂಧಿಸಲಾಗಿತ್ತು. ಆದರೆ ಈಗ ಜೈಲುಗಳು ಖಾಲಿಯಾಗಿವೆ. ಎಲ್ಲರನ್ನೂ ಬಿಡುಗಡೆ ಮಾಡಲಾಗಿದೆ. ಬಾಂಗ್ಲಾದೇಶ ಈಗ ಭಯೋತ್ಪಾದಕರ ತಾಣವಾಗಿದೆ ಎಂದು ಶೇಖ್ ಹಸೀನಾ ಹೇಳಿದ್ದಾರೆ.
ಅಕ್ರಮ ಅಧಿಕಾರ, ಅಕ್ರಮ ಸಂವಿಧಾನ ತಿದ್ದುಪಡಿ
ಯೂನುಸ್‌ಗೆ ಜನಾದೇಶವಿಲ್ಲ, ಸಂವಿಧಾನದಲ್ಲಿ ಬದಲಾವಣೆ ತರುವ ಅಧಿಕಾರವೂ ಇಲ್ಲ ಎಂದು ಹಸೀನಾ ಹೇಳಿದ್ದಾರೆ. ಅವರು ಇರುವ ಹುದ್ದೆಗೆ ಯಾವುದೇ ಸಾಂವಿಧಾನಿಕ ಆಧಾರವಿಲ್ಲ. ಸಂಸತ್ತಿಲ್ಲದೆ ಸಂವಿಧಾನವನ್ನು ಬದಲಾಯಿಸುವುದು ಕಾನೂನುಬಾಹಿರ. ಅವಾಮಿ ಲೀಗ್ ಮೇಲೆ ನಿಷೇಧ ಹೇರುವುದು ಅಸಾಂವಿಧಾನಿಕ ಮಾತ್ರವಲ್ಲ, ಪ್ರಜಾಪ್ರಭುತ್ವಕ್ಕೆ ದ್ರೋಹ ಮಾಡಿದಂತಾಗಿದೆ ಎಂದಿದ್ದಾರೆ.
ತಮ್ಮ ಭಾಷಣದಲ್ಲಿ ಭಾವುಕರಾದ ಹಸೀನಾ, ಒಂದು ಕಾಲದಲ್ಲಿ ಜಗತ್ತು ಪ್ರೀತಿಸುತ್ತಿದ್ದ ವ್ಯಕ್ತಿ ಅಧಿಕಾರಕ್ಕೆ ಬಂದಾಗ ಭಯೋತ್ಪಾದಕರ ಪೋಷಕನಾದ ಎಂದರು. ಇದು ಬಾಂಗ್ಲಾದೇಶದ ದುರದೃಷ್ಟಕರ ಪರಿಸ್ಥಿತಿ. ಸ್ವಾತಂತ್ರ್ಯ ಹೋರಾಟ ನಡೆಸಿದ ಭೂಮಿ ಇಂದು ಭಯೋತ್ಪಾದಕರ ವಶದಲ್ಲಿದೆ ಎಂದು ಹೇಳಿದ್ದಾರೆ.
