ಝೆಪ್ಟೊದಿಂದ ಆಲೂಗಡ್ಡೆ ತರಿಸಿದ ಗ್ರಾಹಕನಿಗೆ ಕಲ್ಲು ಸಿಕ್ಕಿದೆ. ಒಂದು ಕೆಜಿ ಆಲೂಗಡ್ಡೆ ಪ್ಯಾಕೆಟ್‌ನಲ್ಲಿ 96 ಗ್ರಾಂ ತೂಕದ ಕಲ್ಲು ಪತ್ತೆಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆನ್‌ಲೈನ್‌ನಲ್ಲಿ ಆಹಾರ ಪದಾರ್ಥ ಖರೀದಿಸುವಾಗ ಎಚ್ಚರಿಕೆ ಅಗತ್ಯ ಎಂಬ ಚರ್ಚೆಗೆ ಕಾರಣವಾಗಿದೆ. ನೆಟ್ಟಿಗರು ತಮಾಷೆ, ಟೀಕೆ ಮಾಡಿದ್ದಾರೆ.

ಮಾರ್ಕೆಟ್ (Market) ಗೆ ಹೋಗಿ ಒಂದೊಂದೆ ತರಕಾರಿ ನೋಡಿ, ಆಯ್ಕೆ ಮಾಡಿ, ಸಮಯ ಹಾಳು ಮಾಡೋ ಬದಲು ಆನ್ಲೈನ್ ವೆಬ್ಸೈಟ್ (Online website) ಕ್ಲಿಕ್ ಮಾಡಿದ್ರೆ ಕೆಲವೇ ಕ್ಷಣದಲ್ಲಿ ಬೇಕಾದ ಐಟಂ ಮನೆಗೆ ಬರುತ್ತೆ ಅನ್ನೋರೇ ಹೆಚ್ಚು. ಆನ್ಲೈನ್ ಗ್ರೋಸರಿ ಶಾಪ್ ಗಳಿಂದ ಅನುಕೂಲ ಎಷ್ಟಿದ್ಯೋ ಅಷ್ಟೇ ಅನಾನುಕೂಲ ಕೂಡ ಇದೆ. ಆರ್ಡರ್ ಮಾಡಿದ್ದು ಒಂದು, ಡಿಲೆವರಿ ಆಗಿದ್ದು ಇನ್ನೊಂದು ಅನ್ನೋ ಪ್ರಕರಣ ಸಾಕಷ್ಟಿದೆ. ಅದ್ರಲ್ಲೂ ಈ ಆಹಾರ ಪದಾರ್ಥಗಳ ವಿಷ್ಯದಲ್ಲಿ ಆನ್ಲೈನ್ ಗ್ರೋಸರಿ ವೆಬ್ ಸೈಟ್ ಗಳು ಸಾಕಷ್ಟು ಚರ್ಚೆಯಲ್ಲಿರುತ್ವೆ. ಕೊಳೆತ, ಹಾಳಾದ ಆಹಾರ ಪದಾರ್ಥಗಳು ಡಿಲಿವೆರಿ ಆಗುತ್ವೆ. ಅದನ್ನು ವಾಪಸ್ ಮಾಡ್ಬೇಕು ಅಂದ್ರೆ ಮತ್ತೊಂದಿಷ್ಟು ಟೈಂ ಹಾಳು. ಹಾಗಾಗಿ ಅನೇಕರು ಬಂದಿದ್ದನ್ನೇ ಬಳಸಿ, ಹಣ ಹಾಳು ಮಾಡಿಕೊಳ್ತಾರೆ. ಮತ್ತೆ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಇಂಥ ವಿಡಿಯೋ ಹಾಕಿ ಚರ್ಚೆ ಹುಟ್ಟು ಹಾಕ್ತಾರೆ. ಈಗ ಮತ್ತೊಂದು ಇಂಥ ವಿಡಿಯೋ ಪೋಸ್ಟ್ ಆಗಿದೆ. ಈ ವಿಡಿಯೋ ನೋಡಿದ್ಮೇಲೆ ಆನ್ಲೈನ್ ನಲ್ಲಿ ವಸ್ತು ತರಿಸ್ಬೇಕಾ ಎನ್ನುವ ಪ್ರಶ್ನೆ ಒಂದ್ಕಡೆ ಶುರುವಾದ್ರೆ ಮತ್ತೊಂದು ಕಡೆ, ಬಂದ ಆಹಾರ ವಸ್ತುಗಳನ್ನು ದೊಡ್ಡ ಕಣ್ಣು ಬಿಟ್ಟುಕೊಂಡು ನಾಲ್ಕೈದು ಬಾರಿ ಪರಿಶೀಲಿಸ್ಬೇಕು ಅನ್ನೋದು ಖಚಿತವಾಗ್ತಿದೆ. ಅಷ್ಟಕ್ಕೂ ಆನ್ಲೈನ್ ನಲ್ಲಿ ಪೋಸ್ಟ್ ಆದ ವಿಡಿಯೋದಲ್ಲಿ ಏನಿದೆ ಅಂದ್ರಾ? ಬನ್ನಿ ಹೇಳ್ತೇವೆ. 

ವ್ಯಕ್ತಿಯೊಬ್ಬ ಆನ್ಲೈನ್ ನಲ್ಲಿ ಹಂಚಿಕೊಂಡ ವಿಡಿಯೋ ಪ್ರಕಾರ, ಆತ ಝೆಪ್ಟೋ (Zepto )ದಲ್ಲಿ ಆಲೂಗಡ್ಡೆ ತರಿಸಿದ್ದಾನೆ. ಒಂದು ಕೆ.ಜಿ ಆಲೂಗಡ್ಡೆ (potato)ಯನ್ನು ಮನೆಗೆ ಡಿಲಿವರಿ ಮಾಡಲಾಗಿದೆ. ಆಲೂಗಡ್ಡೆ ನೋಡಿದ ವ್ಯಕ್ತಿ ಅಚ್ಚರಿಗೊಳಗಾಗಿದ್ದಾನೆ. ನಾಲ್ಕೈದು ಆಲೂ ಗಡ್ಡೆ ಮಧ್ಯೆ ಕಳ್ಳ ವಸ್ತುವೊಂದಿದೆ. ಥೇಟ್ ಆಲೂಗಡ್ಡೆಯನ್ನೇ ಅದು ಹೋಲ್ತಿದೆ. ನೀವು ಅದನ್ನು ಸರಿಯಾಗಿ ಗಮನಿಸದೆ ಹೋದ್ರೆ ಯಡವಟ್ಟಾಗೋದ್ರಲ್ಲಿ ಅನುಮಾನ ಇಲ್ಲ. ಆಲೂಗಡ್ಡೆ ಹೋಲುವ ಕಲ್ಲನ್ನು ಜೆಪ್ಟೋ ಪಾರ್ಸಲ್ ಮಾಡಿದೆ ಅಂತ ಬಳಕೆದಾರ ಆರೋಪ ಮಾಡಿದ್ದಾನೆ. 

ವ್ಯಕ್ತಿ ತನ್ನ ವಿಡಿಯೋದಲ್ಲಿ ಆಲೂಗಡ್ಡೆಯನ್ನು ಝೆಪ್ಟೋದಲ್ಲಿ ಆರ್ಡರ್ ಮಾಡಿದ್ದೇನೆ ಎಂದು ಬಾರ್ ಕೋಡ್ ತೋರಿಸ್ತಾನೆ. ಅದಾದ್ಮೇಲೆ ಆಲೂಗಡ್ಡೆ ಮಧ್ಯದಲ್ಲಿರುವ ಸಣ್ಣ ಆಲೂಗಡ್ಡೆಯನ್ನು ತೆಗೆಯುತ್ತಾನೆ. ನೀವು ಇದನ್ನು ಆಲೂಗಡ್ಡೆ ಅಂದ್ಕೊಂಡ್ರೆ ಅದು ತಪ್ಪು ಎನ್ನುತ್ತ ಅದನ್ನು ತೂಕದ ಯಂತ್ರಕ್ಕೆ ಟಚ್ ಮಾಡ್ತಾನೆ. ಆಗ ಅದ್ರಿಂದ ಶಬ್ಧ ಬರುತ್ತೆ. ಆಲೂಗಡ್ಡೆಯನ್ನೇ ಹೋಲುವ ಮಕಕಲ್ಲನ್ನು ಪ್ಯಾಕ್ ಮಾಡಲಾಗಿದೆ ನೋಡಿ ಅಂತ ವ್ಯಕ್ತಿ ಹೇಳೋದಲ್ಲದೆ ಇದು 96 ಗ್ರಾಂ ಇದೆ ಅಂತ ತೋರಿಸ್ತಾನೆ. 

ಸುಮಾರು 34 ಸೆಕೆಂಡುಗಳ ಕ್ಲಿಪ್ ನ್ನು @d.a.k.a.a.r.u___vlogs ಹೆಸರಿನ Instagram ಹ್ಯಾಂಡಲ್ ನಲ್ಲಿ ಹಂಚಿಕೊಳ್ಳಲಾಗಿದೆ. ಈ ರೀಲನ್ನು 65 ಸಾವಿರಕ್ಕೂ ಹೆಚ್ಚು ಬಾರಿ ನೋಡಲಾಗಿದೆ. 1200 ಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಅನೇಕರು ವಿಡಿಯೋಕ್ಕೆ ಕಮೆಂಟ್ ಮಾಡಿದ್ದಾರೆ. ಕಲ್ಲು ಗೆದ್ದ ಗ್ರಾಹಕ ಅದೃಷ್ಟಶಾಲಿ ವಿಜೇತ ಎಂದು ತಮಾಷೆ ಮಾಡಿದ್ದಾರೆ. ಆಲೂಗಡ್ಡೆ ಮತ್ತು ಕಲ್ಲಿನ ನಡುವೆ ಕೇವಲ ಶೇಕಡಾ 19-20ರಷ್ಟು ಮಾತ್ರ ವ್ಯತ್ಯಾಸವಿದೆ ಎಂದು ಅನೇಕ ಬಳಕೆದಾರರು ಹೇಳಿದ್ದಾರೆ. ಇದನ್ನು ಕುದಿಸಿ, ಆಗ ಸಂಪೂರ್ಣ ಸತ್ಯ ತಿಳಿಯುತ್ತದೆ ಎಂದು ಇನ್ನೊಬ್ಬರು ತಮಾಷೆ ಮಾಡಿದ್ದಾರೆ. ಇದು ಕಾಶ್ಮೀರಿ ಆಲೂಗಡ್ಡೆ ಅಂತ ಒಬ್ಬರು ಹೇಳಿದ್ರೆ ಇನ್ನೊಬ್ಬರು ಕತ್ತರಿಸಿ ನೋಡಿ ಅಂತ ಸಲಹೆ ನೀಡಿದ್ದಾರೆ. ಒಟ್ಟಿನಲ್ಲಿ ಆಲೂ ಜೊತೆ ಬಂದ ಕಲ್ಲು ಸುದ್ದಿಯಲ್ಲಿದೆ. 

View post on Instagram