ಟಿಎಂಸಿ ತೊರೆದ ಬೆನ್ನಲ್ಲೇ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಅವರ 14 ವರ್ಷಗಳ ಹಳೆಯ ಭೂ ವಿವಾದ ಸುಖಾಂತ್ಯ ಕಂಡಿದೆ. ವಡೋದರಾದಲ್ಲಿರುವ ಕೋಟ್ಯಂತರ ರೂಪಾಯಿ ಮೌಲ್ಯದ 900 ಚದರ ಮೀಟರ್ಗೂ ಅಧಿಕ ಜಮೀನನ್ನು ಗುಜರಾತ್ ಸರ್ಕಾರ ಅವರಿಗೆ ನೀಡಲು ಮುಂದಾಗಿದೆ.
ಅಹಮದಾಬಾದ್ (ಅ.20): ತೃಣಮೂಲ ಕಾಂಗ್ರೆಸ್ (TMC) ಪಕ್ಷದಿಂದ ಹೊರಬಂದ ಕೆಲವೇ ತಿಂಗಳುಗಳಲ್ಲಿ, ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಲ್ ರೌಂಡರ್ ಹಾಗೂ ಸಂಸದ ಯೂಸುಫ್ ಪಠಾಣ್ (Yusuf Pathan) ಅವರಿಗೆ ಗುಜರಾತ್ ಸರ್ಕಾರದಿಂದ ಬೃಹತ್ ಕೊಡುಗೆ ಸಿಕ್ಕಿದೆ. ವಡೋದರಾದಲ್ಲಿ ಅವರ ನಿವಾಸಕ್ಕೆ ಹೊಂದಿಕೊಂಡಂತಿರುವ ಜಮೀನಿಗೆ ಸಂಬಂಧಿಸಿದಂತೆ ಸುದೀರ್ಘ 14 ವರ್ಷಗಳಿಂದ ನಡೆಯುತ್ತಿದ್ದ ಭೂ ವಿವಾದಕ್ಕೆ ಕೊನೆಗೂ ತೆರೆಬಿದ್ದಿದ್ದು, ಪಠಾಣ್ಗೆ ಬರೋಬ್ಬರಿ 900 ಚದರ ಮೀಟರ್ಗೂ ಹೆಚ್ಚಿನ ಭೂಮಿಯನ್ನು ಬಿಟ್ಟುಕೊಡಲು ಗುಜರಾತ್ ಸರ್ಕಾರ ಸಜ್ಜಾಗಿದೆ.
'ದಿ ಇಂಡಿಯನ್ ಎಕ್ಸ್ಪ್ರೆಸ್' ವರದಿಯ ಪ್ರಕಾರ, ವಡೋದರಾದ ತಾಂಡಲ್ಜಾ (Tandalja) ಪ್ರದೇಶದಲ್ಲಿ ಪಠಾಣ್ ಕುಟುಂಬದ ನಿವಾಸಕ್ಕೆ ತಾಗಿದಂತಿರುವ ವಡೋದರಾ ಮಹಾನಗರ ಪಾಲಿಕೆಗೆ (VMC) ಸೇರಿದ ಪ್ಲಾಟ್ ಇದಾಗಿದೆ. ಪ್ರಸ್ತಾವಿತ ನೂತನ ವ್ಯವಸ್ಥೆಯ ಪ್ರಕಾರ, ಈ ಪ್ಲಾಟ್ ಪೈಕಿ 500 ಚದರ ಮೀಟರ್ ಭೂಮಿಯನ್ನು ಯೂಸುಫ್ ಪಠಾಣ್ಗೆ ಉಚಿತ 'ಉಡುಗೊರೆ'ಯಾಗಿ (Gift) ವಸತಿ ಉದ್ದೇಶಕ್ಕಾಗಿ ನೀಡಲಾಗುತ್ತಿದ್ದು, ಉಳಿದ 478 ಚದರ ಮೀಟರ್ ಭೂಮಿಯನ್ನು ಅದರ ಒಟ್ಟು ಮೌಲ್ಯದ ಶೇಕಡಾ 55 ರಷ್ಟು ಸಬ್ಸಿಡಿ/ರಿಯಾಯಿತಿ ದರದಲ್ಲಿ ಅವರಿಗೆ ಹಸ್ತಾಂತರಿಸಲಾಗುತ್ತಿದೆ.
ರಾಜಕೀಯ ಬದಲಾವಣೆ ಮತ್ತು ಜಮೀನು ಭಾಗ್ಯ
ಯೂಸುಫ್ ಪಠಾಣ್ ಅವರು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಮೂಲಕ ತಮ್ಮ ರಾಜಕೀಯ ರಂಗಪ್ರವೇಶ ಮಾಡಿದ್ದರು. 2024 ರ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ಬಹರಂಪುರ ಲೋಕಸಭಾ ಕ್ಷೇತ್ರದಿಂದ ಟಿಎಂಸಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಭರ್ಜರಿ ಗೆಲುವು ಸಾಧಿಸಿದ್ದರು. ಆದರೆ, ಬಂಗಾಳ ಚುನಾವಣೆಯ ನಂತರ 2026 ರ ಜೂನ್ನಲ್ಲಿ ಟಿಎಂಸಿ ತೊರೆದ ಪಠಾಣ್ ಸೇರಿದಂತೆ ಹಲವು ಸಂಸದರು, ಎನ್ಡಿಎ (NDA) ಮೈತ್ರಿಕೂಟದ ಅಂಗಪಕ್ಷವಾದ 'ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ' (NCPI) ಸೇರ್ಪಡೆಯಾಗಿದ್ದರು. ಈ ರಾಜಕೀಯ ಬೆಳವಣಿಗೆಯ ಬೆನ್ನಲ್ಲೇ, ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಅವರ ಜಮೀನು ವಿವಾದವು ತೀವ್ರ ವೇಗ ಪಡೆದುಕೊಂಡು ಇದೀಗ ಸುಖಾಂತ್ಯ ಕಂಡಿದೆ.
ಏನಿದು 14 ವರ್ಷಗಳ ಹಳೆಯ ಯೂಸುಫ್ ಪಠಾಣ್ ಜಮೀನು ವಿವಾದ?
ಈ ಪ್ರಕರಣದ ಇತಿಹಾಸವನ್ನು ಕೆದಕಿದರೆ, 2012 ರಲ್ಲಿ ಯೂಸುಫ್ ಪಠಾಣ್ ಅವರು ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ಆಟಗಾರನಾಗಿದ್ದಾಗ, ವಡೋದರಾ ಮಹಾನಗರ ಪಾಲಿಕೆಯನ್ನು (VMC) ಸಂಪರ್ಕಿಸಿದ್ದರು. ಅಂತರರಾಷ್ಟ್ರೀಯ ಕ್ರಿಕೆಟಿಗನಾಗಿ ತಮಗೆ ಇರುವ 'ಭದ್ರತಾ ಕಳವಳಗಳನ್ನು' (Security Concerns) ಉಲ್ಲೇಖಿಸಿದ್ದ ಅವರು, ತಮ್ಮ ಕುಟುಂಬದ ಮನೆಗೆ ಹೊಂದಿಕೊಂಡಿರುವ ಈ ಪಾಲಿಕೆಯ ಪ್ಲಾಟ್ ಅನ್ನು ಯಾವುದೇ ಸಾರ್ವಜನಿಕ ಹರಾಜು (Public Auction) ಇಲ್ಲದೆ ತಮಗೆ 99 ವರ್ಷಗಳ ಗುತ್ತಿಗೆಗೆ (Lease) ನೀಡುವಂತೆ ಮನವಿ ಮಾಡಿದ್ದರು. ಆದರೆ, 2014 ರಲ್ಲಿ ಅಂದಿನ ಗುಜರಾತ್ ಸರ್ಕಾರದ ನಗರಾಭಿವೃದ್ಧಿ ಇಲಾಖೆಯು ಈ ಪ್ರಸ್ತಾಪವನ್ನು ಸಂಪೂರ್ಣವಾಗಿ ತಿರಸ್ಕರಿಸಿತ್ತು.
ಇದಾದ ನಂತರ, ಪಠಾಣ್ 2024 ರ ಏಪ್ರಿಲ್ನಲ್ಲಿ ಟಿಎಂಸಿ ಸೇರಿ ಸಂಸದರಾದ ಬೆನ್ನಲ್ಲೇ, ಅಂದರೆ 2024 ರ ಜೂನ್ನಲ್ಲಿ ಈ ವಿವಾದ ಮತ್ತೆ ಸ್ಫೋಟಗೊಂಡಿತ್ತು. ಪಠಾಣ್ ಅವರು ಪಾಲಿಕೆಯ ಜಮೀನನ್ನು ಅಕ್ರಮವಾಗಿ ಒತ್ತುವರಿ (Encroachment) ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ವಡೋದರಾ ಪಾಲಿಕೆಯು ಅವರಿಗೆ ನೋಟಿಸ್ ಜಾರಿ ಮಾಡಿತ್ತು. ಇದನ್ನು ಪ್ರಶ್ನಿಸಿ ಪಠಾಣ್ ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿದ್ದರು. 2026 ರ ಜೂನ್ನಲ್ಲಿ ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್, ಯಾವುದೇ ಅಧಿಕೃತ ಮಂಜೂರಾತಿ ಅಥವಾ ಹಣ ಪಾವತಿ ಇಲ್ಲದೆ ಜಮೀನನ್ನು ಹೇಗೆ ಆಕ್ರಮಿಸಿಕೊಂಡು ಕಾಂಪೌಂಡ್ ಹಾಕಲಾಯಿತು ಎಂದು ಪ್ರಶ್ನಿಸಿತ್ತು. ತದನಂತರ ಈ ಕಾನೂನು ವಿವಾದವು ಕೋರ್ಟ್ ಹೊರಗಿನ ಸಂಧಾನಕ್ಕೆ (Out-of-court settlement) ಹಾದಿಮಾಡಿಕೊಟ್ಟಿತ್ತು.
ಈ ಆಸ್ತಿಯ ಅಸಲಿ ಮೌಲ್ಯವೆಷ್ಟು?
'ದಿ ಇಂಡಿಯನ್ ಎಕ್ಸ್ಪ್ರೆಸ್' ವರದಿಯ ಆಧಾರದಂತೆ, ವಡೋದರಾದ ತಾಂಡಲ್ಜಾದಲ್ಲಿರುವ ಈ 978 ಚದರ ಮೀಟರ್ ವಿಸ್ತೀರ್ಣದ ಪ್ಲಾಟ್ನ ಪ್ರಸ್ತುತ ಮಾರುಕಟ್ಟೆ ಮೌಲ್ಯ ಪ್ರತಿ ಚದರ ಮೀಟರ್ಗೆ ಸುಮಾರು ₹2.10 ಲಕ್ಷ ಆಗಿದೆ. ಇದರ ಪ್ರಕಾರ ಇಡೀ ಜಮೀನಿನ ಅಂದಾಜು ಮಾರುಕಟ್ಟೆ ಮೌಲ್ಯ ಬರೋಬ್ಬರಿ ₹20.5 ಕೋಟಿ ರೂಪಾಯಿಗಳಾಗಿದೆ. ಈಗಿನ ಒಪ್ಪಂದದಂತೆ, ಪಠಾಣ್ಗೆ 500 ಚದರ ಮೀಟರ್ ಉಚಿತವಾಗಿ ಸಿಗಲಿದ್ದು, ಉಳಿದ 478 ಚದರ ಮೀಟರ್ಗೆ ಅವರು ಶೇ. 55 ರಷ್ಟು ರಿಯಾಯಿತಿ ಮೊತ್ತ ತೆರಲಿದ್ದಾರೆ. ಇನ್ನು ಪಾಲಿಕೆಗೆ ಉಂಟಾಗುವ ಆರ್ಥಿಕ ನಷ್ಟಕ್ಕೆ ಪ್ರತಿಯಾಗಿ, ಈ ಜಮೀನಿನ ಸಮಾನ ಮೌಲ್ಯದ ಬೇರೊಂದು ಆಸ್ತಿಯನ್ನು ವಡೋದರಾ ಮಹಾನಗರ ಪಾಲಿಕೆಗೆ ಬಿಟ್ಟುಕೊಡಲು ರಾಜ್ಯ ಕಂದಾಯ ಇಲಾಖೆಯು ನಿರ್ಧರಿಸಿದೆ.


