ನೀಟ್‌ ವಿವಾದದ ಕುರಿತು ಜಿರಳೆ ಜನತಾ ಪಕ್ಷದ ಹೋರಾಟದ ನಡುವೆಯೇ, ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ಮೋದಿ ಜೆನ್‌ಝೀ ಯುವಕರ ಸಾಮರ್ಥ್ಯವನ್ನು ಶ್ಲಾಘಿಸಿದ್ದಾರೆ. ಜಗತ್ತಿನ ಸಮಸ್ಯೆಗಳಿಗೆ ಯುವಪೀಳಿಗೆಯ ಬಳಿ ಪರಿಹಾರವಿದ್ದು, ಅವರು ದೊಡ್ಡ ಕನಸು ಕಾಣಬೇಕು ಎಂದು ಕರೆ ನೀಡಿದ್ದಾರೆ. ಅಲ್ಲದೆ, ಸಿಎಂ ವಿಜಯ್ ಅವರೊಂದಿಗೆ ಚೆನ್ನೈ ಮೆಟ್ರೋ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು.

ಚೆನ್ನೈ: ನೀಟ್‌ ಅಕ್ರಮದ ವಿರುದ್ಧ ಹೋರಾಟದ ಬಳಿಕ ಎಸ್‌ಐಆರ್‌ ವಿವಾದ ಮುಂದಿಟ್ಟುಕೊಂಡು ಜೆನ್‌ ಝೀಗಳನ್ನು ಒಳಗೊಂಡ ಸಿಜೆಪಿ ದೇಶವ್ಯಾಪಿ ಹೋರಾಟ ನಡೆಸುತ್ತಿರುವ ಹೊತ್ತಿನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ಜೆನ್‌ ಝೀಗಳ ಗುಣಗಾನ ಮಾಡಿದ್ದಾರೆ. ‘ಜಗತ್ತಿನ ಸಮಸ್ಯೆಗಳಿಗೆ ಬೇಕಾಗಿರುವ ಪರಿಹಾರಗಳು ಜೆನ್‌ ಝೀಗಳ ಬಳಿ ಇದೆ. ಅವರು ಭವಿಷ್ಯವನ್ನು ವಿಶಾಲ ದೃಷ್ಟಿಕೋನದಿಂದ ನೋಡಬೇಕಿದೆ’ ಎಂದು ಸಲಹೆ ನೀಡಿದ್ದಾರೆ.

ಭಾನುವಾರ ವಿವಿಧ ಯೋಜನೆಗಳ ಉದ್ಘಾಟನೆಗಾಗಿ ತಮಿಳುನಾಡಿಗೆ ಆಗಮಿಸಿದ್ದ ಪ್ರಧಾನಿ ಮೋದಿ ನಂದಂಬಾಕಂನ ಚೆನ್ನೈ ಟ್ರೇಡ್ ಸೆಂಟರ್‌ನಲ್ಲಿ ನಡೆದ ಜೈಗೋಪಾಲ್ ಶಾಲೆಯ ಸುವರ್ಣ ಮಹೋತ್ಸವದಲ್ಲಿ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಅವರು ‘ಇಂದು ಜಗತ್ತು ಪರಿಹಾರಗಳನ್ನು ಹುಡುಕುತ್ತಿದೆ ಮತ್ತು ಆ ಪರಿಹಾರಗಳನ್ನು ಒದಗಿಸುವ ಸಾಮರ್ಥ್ಯ ನಿಮ್ಮಲ್ಲಿದೆ. ಪ್ರತಿಯೊಬ್ಬ ಯುವಕನೂ ತನ್ನ ಭವಿಷ್ಯವನ್ನು ಅಷ್ಟೇ ವಿಶಾಲವಾದ ದೃಷ್ಟಿಕೋನದಿಂದ ನೋಡಬೇಕು. ಇದು ನಿಮ್ಮ ಸಮಯ, ನಿಮ್ಮ ಅವಕಾಶ. ಆದ್ದರಿಂದ ನಿರ್ಭೀತರಾಗಿರಿ ಮತ್ತು ನಿಮ್ಮ ಆಲೋಚನೆಗಳನ್ನು ಕಾರ್ಯರೂಪಕ್ಕೆ ತನ್ನಿ. ದೊಡ್ಡದಾಗಿ ಕನಸು ಕಾಣಿ, ವಿಭಿನ್ನವಾಗಿ ಯೋಚಿಸಿ’ ಎಂದು ಮೋದಿ ಕರೆ ನೀಡಿದರು.

ಚೆನ್ನೈ ಮೆಟ್ರೋದ 2ನೇ ಹಂತದ ಉದ್ಘಾಟನೆ

ಇದಕ್ಕೂ ಮೊದಲು ಪ್ರಧಾನಿ ಮೋದಿ, 13 ಸಾವಿರ ಕೋಟಿ ರು. ಮೌಲ್ಯದ ರೈಲ್ವೆ, ರಸ್ತೆ, ಪೆಟ್ರೋಲಿಯಂ ಯೋಜನೆಗಳಿಗೆ ಐಐಟಿ ಮದ್ರಾಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಾಲನೆ ನೀಡಿದರು. ಬಳಿಕ ಚೆನ್ನೈ ಮೆಟ್ರೋದ 2ನೇ ಹಂತವನ್ನು ಉದ್ಘಾಟಿಸಿದರು. ಈ ವೇಳೆ ಅವರು ಸಿಎಂ ವಿಜಯ್‌ ಅವರ ಕೈ ಹಿಡಿದುಕೊಂಡು ಒಟ್ಟಾಗಿ ಉದ್ಘಾಟನೆ ಮಾಡಿದ್ದು ವಿಶೇಷವಾಗಿತ್ತು.

ಬಳಿಕ ಮಾತನಾಡಿದ ಮೋದಿ, ‘ದೇಶದ ಅಭಿವೃದ್ಧಿಯನ್ನೇ ನಾನು ನನ್ನ ಮಂತ್ರವೆಂದು ಪರಿಗಣಿಸಿದ್ದೇನೆ. (ಗುಜರಾತ್‌) ಸಿಎಂ ಆಗಿದ್ದಾಗ ನನಗೆ ಜನರ ನಿರೀಕ್ಷೆಗಳು ಅರ್ಥವಾಗಿದ್ದವು. ಪ್ರಧಾನಿಯಾದ ಬಳಿಕ ಅವುಗಳನ್ನು ಈಡೇರಿಸಲು ಶ್ರಮಿಸುತ್ತಿದ್ದೇನೆ’ ಎಂದರು. ಮುಂದುವರಿದು, ‘ಜನಸೇವೆಯ ಉದ್ದೇಶವನ್ನಿಟ್ಟುಕೊಂಡು ವಿಜಯ್‌ ಅವರೊಂದಿಗೆ ಕೂಡಿ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತೇನೆ’ ಎಂಬ ಭರವಸೆ ನೀಡಿದರು.

ಬಳಿಕ ಮೋದಿಯವರು ವಿಜಯ್‌ ಜತೆ ಪೋರೂರ್ ಬೈಪಾಸ್‌ನಿಂದ ಪೂನಮಲ್ಲಿ ಬೈಪಾಸ್ ನಿಲ್ದಾಣಕ್ಕೆ ಹಾಗೂ ಅಲ್ಲಿಂದ ವಾಪಸ್‌ ಮೆಟ್ರೋದಲ್ಲಿ ಪ್ರಯಾಣಿಸಿದರು.