ದೇಹ್ರಾಡೂನ್‌ನಲ್ಲಿ ಪ್ರವಾಸಿ ತಾಣದಲ್ಲಿ ಯುವಕರು ಹುಡುಗಿಯರ ಮೇಲೆ ಅಸಭ್ಯವಾಗಿ ವರ್ತಿಸಿದ್ದಕ್ಕೆ ಜಗಳ ನಡೆದು, ಯುವತಿಯರು ಯುವಕರನ್ನು ಬೆಲ್ಟ್‌ನಿಂದ ಹೊಡೆದಿದ್ದಾರೆ. ವೈರಲ್ ವಿಡಿಯೋ ಆಧರಿಸಿ ಪೊಲೀಸರು ಮೂವರು ಯುವಕರನ್ನು ವಶಕ್ಕೆ ಪಡೆದಿದ್ದಾರೆ. ಯುವತಿಯರಿಂದ ದೂರು ಬಂದರೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಈ ಘಟನೆ ಪ್ರವಾಸಿ ತಾಣಗಳಲ್ಲಿ ಭದ್ರತೆಯ ಕೊರತೆಯನ್ನು ಎತ್ತಿ ತೋರಿಸಿದೆ.
ಪ್ರವಾಸಿ ತಾಣದಲ್ಲಿ ಕುಡಿದ ಮತ್ತಿನಲ್ಲಿ ಯುವತಿಯರನ್ನು ಕೆಣಕಿದ್ದು, ನಂತರ ಇಬ್ಬರು ಯುವತಿಯರು ಸೇರಿಕೊಂಡು ಯುವಕರನ್ನು ಅಟ್ಟಾಡಿಸಿಕೊಂಡು ಬೆಲ್ಟ್‌ನಲ್ಲಿ ಹೊಡೆದಿದ್ದಾರೆ. ಯುವತಿಯರ ಹೊಡೆತವನ್ನು ತಾಳಲಾರದೇ ಯುವಕರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದ, 'ಹೆಣ್ಮಕ್ಕಳೇ ಸ್ಟ್ರಾಂಗು ಗುರು' ಎನ್ನುವ ವಾಕ್ಯಕ್ಕೆ ಈಗ ಅರ್ಥ ಬಂತು ಎಂದು ನೆಟ್ಟಿಗರು ಹೇಳಿದ್ದಾರೆ.
ಜಾಗತಿಕ ಮಟ್ಟದಲ್ಲಿ ಪುರುಷರಿಗೆ ಸಮಾನವಾಗಿ ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಭಾರತದಲ್ಲಿ ಇದೀಗ ಮಕ್ಕಳನ್ನು ಬೆಳೆಸುವಾಗಲೂ ಗಂಡು-ಹೆಣ್ಣು ಎಂಬ ಬೇಧ ಭಾವ ಮಾಡುತ್ತಿಲ್ಲ. ಹೀಗಾಗಿ, ಎಲ್ಲ ಕ್ಷೇತ್ರದಲ್ಲಿಯೂ ಮಹಿಳೆ ಮತ್ತು ಪುರುಷರು ಸಮಾನವಾಗಿ ಕಾಣಿಸಿಕೊಳ್ಳುತ್ತಾರೆ. ಶಿಕ್ಷಣ ಕ್ಷೇತ್ರದ ಸಾಧನೆಯನ್ನು ನೋಡಿದರೆ ಮಹಿಳೆಯರೇ ಮೇಲುಗೈ ಆಗಿದ್ದಾರೆ. ಮದುವೆಯ ನಂತರ ಅಥವಾ ಪ್ರೀತಿ ಮಾಡುವಾಗ ಹುಡುಗಿಯರ ಮಾತುಗಳನ್ನು ಕೇಳುವ ಗಂಡಸಿನ ಸ್ಥಿತಿಯನ್ನು ನೋಡಿ, ಪುನೀತ್ ರಾಜ್ ಕುಮಾರ್ ನಟನೆಯ ಜಾಕಿ ಸಿನಿಮಾದ ಹಾಡೊಂದರ ಸಾಲಿನಲ್ಲಿ ಹೆಣ್ಮಕ್ಕಳೇ ಸ್ಟ್ರಾಂಗು ಗುರು ಎಂಬ ವಾಕ್ಯವನ್ನು ಸೇರಿಸಲಾಗಿತ್ತು. ಈ ವಾಕ್ಯವನ್ನು ಆರ್‌ಸಿಬಿ ಮಹಿಳಾ ತಂಡ ಡಬ್ಲ್ಯೂಪಿಎಲ್ ಟ್ರೋಫಿ ಗೆದ್ದಾಗ ಸೇರಿದಂತೆ ಹಲವು ಮಹಿಳಾ ಸಾಧನೆಗಳಿಗೆ ಬಳಕೆ ಮಾಡಲಾಗುತ್ತಿದೆ. ಇದೀಗ ಈ ವೈರಲ್ ವಿಡಿಯೋವೊಂದನ್ನು ನೋಡಿದರೆ ಹೆಣ್ಮಕ್ಕಳೇ ಸ್ಟ್ರಾಂಗು ಎನ್ನುವುದನ್ನು ನೀವೂ ಕೂಡ ಒಪ್ಪಿಕೊಳ್ಳುತ್ತೀರಿ.
ಡೆಹ್ರಾಡೂನ್‌ನ ಪ್ರವಾಸಿ ತಾಣವಾದ ಸಹಸ್ರಧಾರದಲ್ಲಿ ಕುಡಿದ ಮತ್ತಿನಲ್ಲಿದ್ದ ಹುಡುಗರು ಮತ್ತು ಹುಡುಗಿಯರ ನಡುವೆ ಕಳೆದ ಭಾನುವಾರ ಜಗಳ ನಡೆದಿದೆ. ಈ ವೇಳೆ ಯುವಕರು ಮತ್ತು ಯುವತಿಯರ ನಡುವೆ ಕೈಕೈ ಮಿಲಾಯಿಸುವುದು, ಕಲ್ಲುಗಳು ಹಾಗೂ ಬೆಲ್ಟ್‌ಗಳಿಂದ ಹೊಡೆದಾಡಿಕೊಳ್ಳಲಾಗಿದೆ. ಆರಂಭದಲ್ಲಿ ಮೂವರು ಯುವಕರು ಬಾಲಕಿಯೊಬ್ಬಳನ್ನು ಥಳಿಸುತ್ತಿರುವುದನ್ನು ನೀವು ನೋಡಬಹುದು. ನಂತರ, ಇದೇ ವಿಡಿಯೋದಲ್ಲಿ ಇಬ್ಬರು ಯುವತಿಯರು ಸೇರಿಕೊಂಡು ಯುವಕರ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಲು ಮುಂದಾಗಿದ್ದಾರೆ. ಒಬ್ಬ ಯುವತಿ ಸೊಂಟಕ್ಕೆ ಹಾಕಿಕೊಳ್ಳುವ ಬೆಲ್ಟ್‌ನಿಂದ ಹಲ್ಲೆ ಮಾಡಿದ್ದಾಳೆ. ಆಗ ಕೆಲವರು ಕಲ್ಲು ಎತ್ತಿಕೊಂಡು ಎಸೆದಿದ್ದಾರೆ. ಮುಖಕ್ಕೆ ಕೈಯಿಂದ ಗುದ್ದಿ, ಕಾಲಿನಿಂದಲೂ ಒದ್ದಿದ್ದಾರೆ. ಇದಾದ ನಂತರ ಯುವತಿಯರ ಸಹಾಯಕ್ಕೆ ಇಬ್ಬರು ಯುವಕರೂ ಕೂಡ ಬಂದಿದ್ದಾರೆ. ನಂತರ ಅಲ್ಲಿದ್ದರೆ ಜಗಳ ದೊಡ್ಡದಾಗಬಹುದು ಎಂದು ಯುವತಿಯರನ್ನು ಬಿಟ್ಟು ಬೈಕ್ ಏರಿ ಅಲ್ಲಿಂದ ಯುವಕರು ಕಾಲ್ಕಿತ್ತಿದ್ದಾರೆ.
ಇದನ್ನೂ ಓದಿ: ಕೆರೆ ಪೊದೆಯಿಂದ ಎದ್ದು ಬಟ್ಟೆ ಸರಿ ಮಾಡಿಕೊಳ್ಳುತ್ತಾ ಓಡಿದ ಜೋಡಿ; ನಿಮ್ಮೂರಿನಲ್ಲಿ OYO ಇಲ್ವಾ ಎಂದ ನೆಟ್ಟಿಗರು!
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮೂವರು ಯುವಕರು ಬಾಲಕಿಯೊಬ್ಬಳನ್ನು ಥಳಿಸುತ್ತಿರುವ ವೈರಲ್ ವಿಡಿಯೋವನ್ನು ಆಧರಿಸಿ ಪೊಲೀಸರು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ಸ್ಕೂಟರ್ ಸಂಖ್ಯೆಯನ್ನು ಪತ್ತೆಹಚ್ಚಿದ್ದಾರೆ. ನಂತರ, ಜಗಳದಲ್ಲಿ ಭಾಗಿಯಾದ ಯುವಕರಾದ ಪ್ರಮೋದ್ ಸಿಂಗ್, ಆಕಾಶ್ ಸಿಂಗ್ ಮತ್ತು ಗೌರವ್ ರಾವತ್ ಅವರನ್ನು ಝಲ್ಪಾಡಿ, ಶ್ರೀಕೋಟ್, ಪೌರಿ ಗರ್ವಾಲ್ ಗ್ರಾಮದ ಮೂವರು ನಿವಾಸಿಗಳನ್ನು ಪೊಲೀಸ್ ಠಾಣೆಗೆ ಕರೆಸಿ ಅವರ ಸ್ಕೂಟರ್ ಅನ್ನು ವಶಪಡಿಸಿಕೊಂಡಿದ್ದಾರೆ. ಆದರೆ, ಹುಡುಗಿಯರ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಹುಡುಗಿಯರು ಯಾವುದೇ ದೂರು ನೀಡಿದರೆ ಪೊಲೀಸರು ಹುಡುಗರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಐಟಿ ಪಾರ್ಕ್ ಔಟ್‌ಪೋಸ್ಟ್ ಉಸ್ತುವಾರಿ ದೀಪಕ್ ದ್ವಿವೇದಿ ಮಾತನಾಡಿ, ಏಪ್ರಿಲ್ 10 ರಂದು ಯುವಕರು ಮತ್ತು ಯುವತಿಯರು ವಿವಿಧ ಗುಂಪುಗಳಲ್ಲಿ ಪ್ರವಾಸಿ ತಾಣ ಸಹಸ್ರಧಾರಕ್ಕೆ ಭೇಟಿ ನೀಡಲು ಹೋಗಿದ್ದರು. ಈ ಸಮಯದಲ್ಲಿ, ಯುವಕರು ಹುಡುಗಿಯ ಬಗ್ಗೆ ಕೆಲವು ಕಾಮೆಂಟ್‌ಗಳನ್ನು ಮಾಡಿದರು. ನಂತರ ಇಬ್ಬರ ನಡುವೆ ವಾಗ್ವಾದ ನಡೆಯಿತು. ಇದಾದ ನಂತರ, ಯುವಕ ಬಾಲಕಿಗೆ ಕಪಾಳಮೋಕ್ಷ ಮಾಡಿದ್ದಾನೆ. ನಂತರ ಬಾಲಕಿ ಆ ಯುವಕನೊಂದಿಗೆ ಜಗಳವಾಡುತ್ತಿರುವುದು ಕಂಡುಬರುತ್ತದೆ. ಬಾಲಕಿ ಎಲ್ಲಿದ್ದಾಳೆಂದು ಇನ್ನೂ ತಿಳಿದುಬಂದಿಲ್ಲ, ಯಾವುದೇ ದೂರು ನೀಡಿದರೆ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: ಭಾರತೀಯ ರೈಲು ಪ್ರಯಾಣಿಕರಿಗೆ ಮತ್ತೊಂದು ಕೊಡುಗೆ, ಟ್ರೈನ್‌ನಲ್ಲೇ ಎಟಿಎಂ ಸೌಲಭ್ಯ
ಇತ್ತೀಚಿನ ದಿನಗಳಲ್ಲಿ ಸಹಸ್ರಧಾರ ಮತ್ತು ಮಾಲ್ದೇವತಾ ಪ್ರವಾಸಿ ಪ್ರದೇಶಗಳಿಗೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ, ಆದರೆ ಇಲ್ಲಿ ಪೊಲೀಸರು ಯಾವುದೇ ಭದ್ರತಾ ವ್ಯವಸ್ಥೆಗಳನ್ನು ಮಾಡಿಲ್ಲ. ಇಡೀ ಮಾರ್ಗದಲ್ಲಿ ಎಲ್ಲಿಯೂ ಬ್ಯಾರಿಕೇಡಿಂಗ್ ಇಲ್ಲ. ವಾರಾಂತ್ಯದಲ್ಲಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತದೆ. ಇಲ್ಲಿನ ನದಿಯ ದಡದಲ್ಲಿ ಜನರು ಬಹಿರಂಗವಾಗಿ ಮದ್ಯಪಾನ ಮಾಡುತ್ತಾರೆ. ಜೊತೆಗೆ, ಆಗಾಗ್ಗೆ ಮದ್ಯದ ಪ್ರಭಾವದಿಂದ ಜಗಳಗಳು ನಡೆಯುತ್ತವೆ. ಪೊಲೀಸರು ಕೆಲವೊಮ್ಮೆ ಕೇವಲ ಕಾಟಾಚಾಕ್ಕೆ ಚಲನ್ ನೀಡುತ್ತಾರೆ. ವಾರಾಂತ್ಯದಲ್ಲಿ ಈ ಪ್ರವಾಸಿ ಸ್ಥಳಗಳಲ್ಲಿ ಸಂಚಾರ ದಟ್ಟಣೆಯೂ ಕಂಡುಬರುತ್ತದೆ. ಜನರು ತಮ್ಮ ವಾಹನಗಳನ್ನು ರಸ್ತೆಬದಿಯಲ್ಲಿ ಮನಬಂದಂತೆ ನಿಲ್ಲಿಸುತ್ತಾರೆ, ಇದರಿಂದಾಗಿ ಜಾಮ್ ತೆರವುಗೊಳಿಸಲು ಗಂಟೆಗಟ್ಟಲೆ ಬೇಕಾಗುತ್ತದೆ.
