ಹರಕಲು-ಮುರುಕು ಸಲೂನ್‌ಗೆ ದೇವರಾಗಿ ಬಂದ ಯುವಕ; ಕಣ್ಣೀರಿಟ್ಟು ಭೂತಾಯಿಗೆ ನಮಸ್ಕರಿಸಿ ಕುಣಿದಾಡಿದ ಕ್ಷೌರಿಕ
ಬೀಳುವ ಸ್ಥಿತಿಯಲ್ಲಿದ್ದ ಸಲೂನ್‌ಗೆ ಯುವಕನೊಬ್ಬ ಆರ್ಥಿಕ ನೆರವು ನೀಡಿದ್ದಾನೆ. ಸಹಾಯ ಪಡೆದ ಕ್ಷೌರಿಕ ಭೂಮಿ ತಾಯಿಗೆ ನಮಸ್ಕರಿಸಿ ಕುಣಿದಾಡಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಡತನ ಎಂಬುವುದು ಮನುಷ್ಯರನ್ನು ಮಾನಸಿಕವಾಗಿ ಕುಂದಿಸುತ್ತದೆ. ಬಡತನದಲ್ಲಿ ಸಿಲುಕಿದ ಜನರು ಆಪ್ತರಿಂದಲೇ ನಿರ್ಲಕ್ಷ್ಯ ಮತ್ತು ಅಪಮಾನಕ್ಕೆ ಒಳಗಾಗುತ್ತಾರೆ. ಬಡತನವಿದ್ದರೂ ಬೇರೆಯವರ ಮುಂದೆ ಎಂದಿಗೂ ಕೈ ಚಾಚುವುದಿಲ್ಲ. ಸ್ವಾಭಿಮಾನದಿಂದ ಜೀವನ ನಡೆಸಬೇಕು ಮತ್ತು ಯಾರ ಮೇಲೆಯೂ ಅವಲಂಬನೆ ಆಗಬಾರದು ಎಂದು ತಿಳುವಳಿಕೆಯನ್ನು ಹೊಂದಿರುತ್ತಾರೆ. ಕೆಲ ಶ್ರೀಮಂತರು ಮಾನವೀಯತೆಯಿಂದ ಬಡವರಿಗೆ ಸಹಾಯ ಮಾಡುತ್ತಾರೆ. ಅಹಂಕಾರ ಮತ್ತು ಮದದಿಂದ ಮಾಡುವ ನೆರವು ದಾನ ಎಂದೆನಿಸಿಕೊಳ್ಳಲ್ಲ. ದಾನ ನೀಡಬೇಕು ಅನ್ನೋದು ಮನದಾಳದಿಂದ ಬಂದಾಗ ಕೊಡುವ ಮತ್ತು ಸ್ವೀಕರಿಸೋ ಇಬ್ಬರ ಗೌರವ ಹೆಚ್ಚಾಗುತ್ತದೆ.
ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗಿದೆ. ಇನ್ನೇನು ಬೀಳುವ ಸ್ಥಿತಿಯಲ್ಲಿರುವ ಅಂಗಡಿಯ ಕ್ಷೌರಿಕನಿಗೆ ಯುವಕನೋರ್ವ ಸಹಾಯ ಮಾಡಿದ್ದಾರೆ. ಸಹಾಯ ಮಾಡಿರುವ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಆರ್ಥಿಕ ನೆರವು ಸಿಕ್ಕ ಖುಷಿಗೆ ಆ ವ್ಯಕ್ತಿ ಭೂಮಿ ತಾಯಿಗೆ ನಮಸ್ಕರಿಸಿ ನಂತರ ಕುಣಿದು ಕುಪ್ಪಳಿಸಿದ್ದಾರೆ.
ಈ ವಿಡಿಯೋವನ್ನು ಇನ್‌ಸ್ಟಾಗ್ರಾಂ ಬಳಕೆದಾರ ಶುಭಮ್ (@helpinghands_byshubham) ಎಂಬವರ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಇನ್‌ಸ್ಟಾಗ್ರಾಂ ಮೂಲಕ ಅವಶ್ಯಕತೆ ಇರೋರಿಗೆ ಆರ್ಥಿಕ ಸಹಾಯ ಮಾಡಲಾಗುತ್ತದೆ. ಇದೀಗ ಕ್ಷೌರಿಕನಿಗೆ ಆತನ ಅಂಗಡಿ ಸರಿ ಮಾಡಿಕೊಳ್ಳಲು ಧನ ಸಹಾಯ ಮಾಡಲಾಗಿದೆ. ಇನ್‌ಸ್ಟಾಗ್ರಾಂನಲ್ಲಿರೋ ಮಾಹಿತಿ ಪ್ರಕಾರ, ಆ ವ್ಯಕ್ತಿಗೆ 20 ಸಾವಿರ ರೂಪಾಯಿ ನೀಡಲಾಗಿದೆ.
ಇದನ್ನೂ ಓದಿ: ದೀಪಾವಳಿಯಂದು ರಾತ್ರಿ 11ರವರೆಗೂ ಕೆಲಸ ಮಾಡಿದ್ದ Zomato ಡೆಲಿವರಿ ಬಾಯ್‌ಗೆ ಸಿಕ್ಕ ಹಣ ಎಷ್ಟು?
ವಿಡಿಯೋದಲ್ಲಿ ಏನಿದೆ?
ವಿಡಿಯೋದಲ್ಲಿ ಮೊದಲಿಗೆ ಆ ಸಲೂನ್ ಹೇಗಿದೆ ಎಂಬುದನ್ನು ತೋರಿಸಲಾಗಿದೆ. ಸಲೂನ್ ಮಾಲೀಕ ಯಾವುದೇ ಗ್ರಾಹಕರಿಲ್ಲದೇ ಹೊರಗೆ ಕುಳಿತಿರೋನ್ನು ನೋಡಬಹುದು. ಈ ಸಮಯದಲ್ಲಿ ಯುವಕನೋರ್ವ ಬಂದು ಕಟ್ಟಿಂಗ್ ಮಾಡುತ್ತೀರಾ ಎಂದು ಕೇಳುತ್ತಾನೆ. ನಂತರ ಯುವಕ ಇನ್ನೇನು ಬೀಳುವ ಸ್ಥಿತಿಯಲ್ಲಿರುವ ಅಂಗಡಿಯೊಳಗೆ ಹೋಗಿ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಾನೆ. ವ್ಯಕ್ತಿ ಸಾಮಾನುಗಳನ್ನು ಎತ್ತಿಕೊಳ್ಳಲು ತಿರುಗಿದಾಗ ಯುವಕ 100 ರೂ. ನೋಟಿನ ಕಂತುಗಳನ್ನಿರಿಸಿ ಹೋಗುತ್ತಾನೆ. ಹಣ ನೋಡಿದ ಕೂಡಲೇ ಕ್ಷೌರಿಕ ಶಾಕ್ ಆಗಿ, ಆ ಯುವಕನನ್ನು ಹುಡುಕುತ್ತಾನೆ. ನಂತರ ಈ ಹಣ ತನ್ನದೇ ಎಂದು ತಿಳಿದು ಸಂತಸದಿಂದ ಕುಣಿದಾಡಿದ್ದಾನೆ.
ಈ ವಿಡಿಯೋಗೆ ಕಮೆಂಟ್ ಮಾಡಿರುವ ನೆಟ್ಟಿಗರು, ಇದೊಂದು ಒಳ್ಳೆಯ ಕೆಲಸ. ಆ ಹಣ ಆತನಿಗೆ ತಲುಪಿದ್ದರೆ ಸಂತೋಷದ ವಿಷಯ. ಕೆಲವರು ಲೈಕ್ಸ್ ಮತ್ತು ಸಬ್‌ಸ್ಕ್ರಿಪ್ಷನ್‌ಗಾಗಿ ಈ ರೀತಿಯ ವಿಡಿಯೋಗಳನ್ನು ಮಾಡುತ್ತಿರುತ್ತಾರೆ ಎಂಬ ಕಮೆಂಟ್‌ಗಳು ಬಂದಿವೆ.
ಇದನ್ನೂ ಓದಿ: ಓ ದೇವ್ರೇ, ಇಂಥಾ ಕಷ್ಟ ಯಾರಿಗೂ ಬೇಡ; ಪಾನಿಪುರಿ ವ್ಯಾಪಾರಿ ಕಷ್ಟಕ್ಕೆ ಮರುಗಿದ ಜನರು