ಯೋಗವು ಕೇವಲ ಆಸನಗಳಲ್ಲ, ಅದು ಭಾವನಾತ್ಮಕ, ಆಧ್ಯಾತ್ಮಿಕ ಒಗ್ಗೂಡುವಿಕೆ. ಮಗುವಿನಂತಹ ಸರಳತೆ, ನವೀನತೆ, ಪೂರ್ವಾಗ್ರಹಗಳಿಲ್ಲದ ಮನಸ್ಸು ಯೋಗಿಯ ಲಕ್ಷಣ. ಯೋಗವು ಕರ್ಮಕುಶಲತೆ, ಶಕ್ತಿ, ಉತ್ಸಾಹವನ್ನು ಹೆಚ್ಚಿಸುತ್ತದೆ.
ಗುರುದೇವ್ ಶ್ರೀ ಶ್ರೀ ರವಿಶಂಕರ್
ಯೋಗದ ಉದ್ದೇಶ ಎಲ್ಲರ ಮುಖದ ಮೇಲೂ ಒಂದು ಮುಗುಳ್ನಗೆಯನ್ನು ತರುವುದು. ನೀವು ಎದುರಿಸುವ ಎಲ್ಲಾ ಒತ್ತಡ, ಉದ್ವೇಗಗಳ ಹೊರತಾಗಿಯೂ, ದಿನನಿತ್ಯದ ಜೀವನದಲ್ಲಿ ನಾವು ಎದುರಿಸುವ ಪರಿಸ್ಥಿತಿಗಳಿಗೆ ಹೊರತಾಗಿಯೂ ಒಂದು ಮುಗುಳ್ನಗೆಯನ್ನು ನಿಮ್ಮ ಮುಖದ ಮೇಲೆ ತರುವುದು. ಯಾವುದೇ ಮಗುವನ್ನು ಗಮನಿಸುತ್ತಿದ್ದರಷ್ಟೇ ಸಾಕು, ನಿಮಗೆ ಯೋಗ ಶಿಕ್ಷಕರ ಅವಶ್ಯಕತೆಯೇ ಇರುವುದಿಲ್ಲ. ಜನಿಸಿದ ಶಿಶುವಿನಿಂದ ಹಿಡಿದು ಮೂರು ವರ್ಷಗಳ ಮಗುವಿನವರೆಗೆ, ಮಕ್ಕಳು ಎಲ್ಲಾ ಯೋಗಾಸನಗಳನ್ನೂ, ಉಸಿರಾಟದ ವ್ಯಾಯಾಮಗಳನ್ನು, ಧ್ಯಾನವನ್ನು, ಎಲ್ಲವನ್ನೂ ಮಾಡಿರುತ್ತಾರೆ. ಆದ್ದರಿಂದ, ಜನ್ಮತಃ ನಾವೆಲ್ಲರೂ ಯೋಗಿಗಳೇ! ನಾವೆಲ್ಲರೂ ಇದನ್ನು ಮಾಡಿದ್ದೇವೆ. ಆದರೆ ಎಲ್ಲೋ ಇದರ ಬಗ್ಗೆ ಮರೆತುಹೋಗಿ, ಅದನ್ನು ಹಾಗೆಯೇ ಬಿಟ್ಟುಬಿಟ್ಟೆವು. ನಾವೆಲ್ಲಿಂದ ಆರಂಭಿಸಿದೆವೋ, ಅಲ್ಲಿಗೇ ಮರಳಿ ಬರುವುದೇ ಈ ಪಯಣ.
ಯೋಗ ಎಂದರೆ ಕೇವಲ ಆಸನಗಳಲ್ಲ. ಅದು ಭಾವನಾತ್ಮಕ ಒಗ್ಗೂಡುವಿಕೆ, ಆಧ್ಯಾತ್ಮಿಕ ಉನ್ನತಿ, ಅಲೌಕಿಕ ಸ್ಪರ್ಶವನ್ನು ಹೊಂದಿರುವಂತದ್ದು. ನಮ್ಮ ಎಲ್ಲಾ ಊಹೆಗಳಿಗಿಂತಲೂ ಮೀರಿರುವಂತದ್ದು. ಯೋಗವು ಒಂದು ಪರಿಪೂರ್ಣ ವಿಜ್ಞಾನ. ಯೋಗವು ಮನಸ್ಸು, ದೇಹ ಮತ್ತು ಆತ್ಮವನ್ನು ಒಗ್ಗೂಡಿಸುತ್ತದೆ. ನಾವೆಲ್ಲರೂ ಬಹಳ ಪರಿತಪಿಸುವಂತಹ ಶಾಂತಿಯನ್ನು, ಆನಂದವನ್ನು ಪ್ರತಿಯೊಬ್ಬರಿಗೂ ನೀಡುತ್ತದೆ. ಒಬ್ಬರ ವರ್ತನಾ ಮಾದರಿಯಲ್ಲಿ, ಧೋರಣೆಯಲ್ಲಿ ಬದಲಾವಣೆಯನ್ನು ತರುತ್ತದೆ. ಇಂದಿನ ದಿನಗಳ ಜೀವನಶೈಲಿಯಿಂದಾಗಿ ಯೋಗವು ಪ್ರತಿಯೊಬ್ಬರಿಗೂ ಅನಿವಾರ್ಯವಾಗಿದೆ.
ಯೋಗ ಕೇವಲ ವ್ಯಾಯಾಮದ ಬಗ್ಗೆಯಲ್ಲ. ಯೋಗ ವ್ಯಾಯಾಮವೂ ಹೌದು. ಯೋಗಾಸನಗಳು ಖಂಡಿತವಾಗಿಯೂ ಯೋಗದ ಭಾಗವೇ. ಒಂದು ಮಗು ಮಾಡುವ ಭಂಗಿಗಳು, ಅದು ಉಸಿರಾಡುವ ರೀತಿ, ಮಗುವಿನ ಧೋರಣೆ, ಮಗುವು ಗ್ರಹಿಸುವ ರೀತಿ, ಮಗುವಿನಲ್ಲಿರುವ ತೀಕ್ಷ್ಣತೆ, ವರ್ತಮಾನದಲ್ಲಿರಬಲ್ಲ ಮಗುವಿನ ಸಾಮರ್ಥ್ಯ. ಒಂದು ಮಗುವು ತೋರಿಸುವ ಎಲ್ಲಾ ಲಕ್ಷಣಗಳೂ ಯೋಗಿಯ ಲಕ್ಷಣಗಳೇ. ಆದ್ದರಿಂದ ಯೋಗ ಎಂದರೆ ಕೆಲಸ ವಲ ವ್ಯಾಯಾಮಗಳು ಎಂದು ಆಪಾರ್ಥ ಮಾಡಿಕೊಳ್ಳಬಾರದು. ಯೋಗ ಎಂದರೆ ಮಾನವ ಜೀವನದ ಸಮಗ್ರ ಬೆಳವಣಿಗೆ ಅಭಿವ್ಯಕ್ತಿ.
ಯೋಗಿಗಳೆಂದರೆ ಉದ್ದನೆಯ ಕೂದಲನ್ನು, ಗಡ್ಡವನ್ನು ಹೊಂದಿರುವವರಲ್ಲ ಅಥವಾ ವಿಚಿತ್ರವಾಗಿರುವವರಲ್ಲ. ಯೋಗಿಯೆಂದರೆ ಕುಶಲರಾಗುತ್ತಿರುವವರು, ಪ್ರಶಾಂತರಾಗಿರುವವರು, ಸಂತೋಷದಿಂದಿರುವವರು, ತೃಪ್ತರಾಗಿರುವವರು, ಮಗುವಿನಂತಿರುವವರು. ಪ್ರತಿಯೊಂದು ಮಗುವೂ ಯೋಗಿಯೇ ಮತ್ತು ಪ್ರತಿಯೊಂದು ಯೋಗಿಯೂ ಮಗುವೇ. ಇಲ್ಲವಾದರೆ ಅವರು ಯೋಗಿಗಳೇ ಅಲ್ಲ. ಇದರ ಅರ್ಥ ಅವರು ಬಾಲಿಶರಾಗಿರುತ್ತಾರೆಂದಲ್ಲ, ಮಗುವಿನಂತಹ ಸರಳತ, ಮಗುವಿನಂತಹ ನವೀನತೆ. ಯಾವ ಪೂರ್ವಾಗ್ರಹಗಳನ್ನೂ ಹೊಂದಿರದಂತಹ ಮನಸ್ಸು, ದುರಹಂಕಾರವನ್ನು ಹೊಂದಿರದಂತಹ ಮನಸ್ಸು. ಇದೇ ಯೋಗಿಯ ಲಕ್ಷಣ. ಪ್ರಾಮಾಣಿಕತೆ, ನಿರ್ಭಿತಿ. ಮಕ್ಕಳಿಗೆ ಭಯವಿರುವುದಿಲ್ಲ. ಏನನ್ನೇ ನೋಡಿದರೂ ಅದನ್ನು ಗಮನಿಸುವ ತೀವ್ರತೆ, ಇವೆಲ್ಲವೂ ಸ್ವಯಂ ಆಗಿಯೇ ಬರುವಂತವು. ಕೈಗಳನ್ನೆತ್ತಿ, ಕಾಲುಗಳನ್ನು ಎತ್ತಿ ನಿಮ್ಮ ಸ್ನಾಯುಗಳನ್ನು, ನಿಮ್ಮ ಕೀಲುಗಳನ್ನು ನೋಯಿಸುವುದಲ್ಲ. ಅರಳಿರುವ ಚೇತನವನ್ನು ಹೊಂದಿರುವವರು
ಈ ಭೂಮಿಯು ಮೇಲಿರುವ ಪ್ರತಿಯೊಬ್ಬರಿಗೂ ಯೋಗ ಸೇರಿರುವಂತದ್ದು. ಈ ಭೂಮಿಯ ಮೇಲಿರುವ ಪ್ರತಿಯೊಬ್ಬರಿಗೂ ಎಲ್ಲಾ ಜ್ಞಾನವೂ ಸೇರಿದೆ. ಯಾವುದೇ ಜ್ಞಾನವನ್ನು ಭೂಮಿಯ ಯಾವುದೋ ಒಂದು ಭೌಗೋಳಿಕ ಮಿತಿಗೆ ಮಾತ್ರ ಸೀಮಿತಗೊಳಿಸಲು ಸಾಧ್ಯವಿಲ್ಲ. ಒಂದು ಭೂಗೋಳಿಕ ಇತಿಮಿತಿಗೆ ಮಾತ್ರ ಒಂದು ಜ್ಞಾನವನ್ನು ಸೀಮಿತವಾಗಿಟ್ಟರೆ, ಅದು ವೈಶ್ವಿಕವಾದ ಜ್ಞಾನವೇ ಅಲ್ಲ. ಅದು ತನ್ನ ಮಹತ್ತತೆಯನ್ನು, ಘನತೆಯನ್ನು ಕಳೆದುಕೊಳ್ಳುತ್ತದೆ. ಪ್ರಾಚೀನವಾದ ಸನಾತನ ಧರ್ಮದಲ್ಲಿ ಯೋಗವನ್ನು ಹೊರತರಲಾಗಿದ್ದರೂ ಸಹ, ಒಂದು ಸೀಮಿತವಾದ ವಿಚಾರಧಾರೆಗೆ ಮಾತ್ರ ಅದು ಸೀಮಿತವಾಗಿಲ್ಲ. ಜಗತ್ತಿನ ಎಲ್ಲಾ ಜನರಿಗೂ ಯೋಗ ತನ್ನ ಬಾಗಿಲನ್ನು ತೆರೆದಿದೆ. ತಂತ್ರಜ್ಞಾನವು ವಯಾವ ಧರ್ಮದ ವಿರುದ್ಧವಾಗಿಯಾದರೂ ಇದೆಯೇ? ಯೋಗ ಒಂದು ತಂತ್ರಜ್ಞಾನ, ಒಂದು ಪ್ರಕ್ರಿಯೆ. ಈ ಪ್ರಕ್ರಿಯೆಯಿಂದ ಎಲ್ಲರೂ ಶಕ್ತಿಯುತರಾಗಿರಬಹುದು, ಹೆಚ್ಚು ಕರುಣಾಮಯಿಗಳಾಗಿರಬಹುದು. ಯಾವ ಧರ್ಮವೂ ತಾನೇ ಈ ಗುಣಗಳಿಗೆ ವಿರುದ್ಧವಾಗಿರುತ್ತದೆ ಹೇಳಿ? ನೀವು ಸಂತೋಷವಾಗಿರಬಾರದು, ಕರುಣಾಮಯಿಗಳಾಗಿರಬಾರದು, ಸ್ನೇಹಶೀಲರಾಗಿರಬಾರದು, ಪ್ರೇಮದಿಂದ ಕೂಡಿದ ವರ್ತನೆಯನ್ನು ಹೊಂದಬಾರದು ಎಂದು ಯಾವ ಧರ್ಮವು ತಾನೇ ಹೇಳುತ್ತದೆ? ಒತ್ತಡವನ್ನು ನಿವಾರಿಸುವಂತಹ, ಕೋಪವನ್ನು, ಲೋಭವನ್ನು, ಇತರ ಎಲ್ಲಾ ನಕಾರಾತ್ಮಕ ಭಾವನೆಗಳನ್ನು ನಿವಾರಿಸುವಂತಹ ಒಂದು ಪ್ರಕ್ರಿಯೆಯೇ ಯೋಗ. ಆದ್ದರಿಂದ, ಯೋಗವು ಯಾವುದೇ ಧರ್ಮಕ್ಕೆ ವಿರುದ್ಧವಾಗಿದೆಯೆಂದು ಭಾವಿಸುವುದಾದರೂ ಏಕೆ? ಯಾರಾದರೂ ಹಾಗೆ ಭಾವಿಸಿದರು, ಅದು ಅವರ ಅಜ್ಞಾನ. ಯೋಗವು ಆಲೋಚಿಸುವ ಸ್ವಾತಂತ್ರ್ಯವನ್ನು ನೀಡುತ್ತದೆ. ಎಲ್ಲಾ ಧರ್ಮಗಳ ಉದ್ದೇಶವೂ ಶಾಂತಿಯನ್ನು, ಸ್ವಾತಂತ್ರ್ಯವನ್ನು, ಇಡೀ ಜಗತ್ತಿನೊಡನೆ ಭಾತೃತ್ವವನ್ನು ತಂದುಕೊಡುವುದೇ ಆಗಿದೆ. ಇವೆಲ್ಲವನ್ನೂ ಸಾಧಿಸುವ ಒಂದು ಪ್ರಕ್ರಿಯೆಯೇ ಯೋಗ.
'ಯೋಗಃ ಕರ್ಮಸು ಕೌಶಲಂ', ಎಂದರೆ, "ಯೋಗದಿಂದ ಕರ್ಮವನ್ನು ಕುಶಲತೆಯಿಂದ ಮಾಡಬಹುದು" . ಕುಶಲತೆಯೆಂದರೆ ನಮ್ಮ ಸ್ಫೂರ್ತಿಯನ್ನು ಉತ್ಥಾಪಿತವಾಗಿ ಇಟ್ಟುಕೊಳ್ಳುವುದು, ಶಕ್ತಿಯು ಕುಂದು ಹೋಗದಂತೆ ನೋಡಿಕೊಳ್ಳುವುದು, ಆದರೂ ಕೆಲಸವನ್ನು ಸಾಧಿಸುವುದು. ಇದೆಲ್ಲವೂ ಯೋಗದಿಂದ ಮಾತ್ರ ಬರಲು ಸಾಧ್ಯ. ಇಲ್ಲವಾದರೆ ಯಾವುದೇ ಕೆಲಸ ಮಾಡಲು ಹೊರಟರೂ ದಣಿಯುತ್ತೀರಿ. ಆಗ ಕರ್ಮದ ಫಲವು ಬಂದರೂ ಅದನ್ನು ಆನಂದಿಸಲೂ ಸಾಧ್ಯವಿಲ್ಲ. ಆದ್ದರಿಂದ ಯೋಗವು ನಿಮ್ಮ ಉತ್ಸಾಹವನ್ನು ಉನ್ನತ ಮಟ್ಟದಲ್ಲಿರಿಸುತ್ತದೆ, ಶಕ್ತಿ ಉನ್ನತ ಮಟ್ಟದಲ್ಲಿರುತ್ತದೆ, ಕೆಲಸವನ್ನೂ ಸಾಧಿಸುತ್ತದೆ. ಧ್ಯಾನವು ಆತ್ಮದಂತೆ. ಉಳಿದೆಲ್ಲವೂ ಅದರ ಅಲಂಕಾರದಂತೆ. ಇದೇ ನಿಜವಾದ ವಿಷಯ. ದೇಹವಿಲ್ಲದೆ ಆತ್ಮವಿರಲು ಸಾಧ್ಯವಿಲ್ಲ ಮತ್ತು ಆತ್ಮವಿಲ್ಲದ ದೇಹವಿರಲು ಸಾಧ್ಯವಿಲ್ಲ. ಧ್ಯಾನ, ಪ್ರಾಣಾಯಾಮ, ಆಸನಗಳು , ಯಮ, ನಿಯಮಗಳು- ಈ ಸ್ಥಿತಿಗಳನ್ನೆಲ್ಲಾ ದಾಟಿದ ನಂತರ, ಎಂದೋ ಒಂದು ದಿನ ಸಮಾಧಿಯನ್ನು ಪಡೆಯುತ್ತೇನೆ ಎಂದಲ್ಲ. ಪತಂಜಲಿಯವರು ಇವುಗಳನ್ನು ಅಂಗಗಳು ಎಂದು ಕರೆದಿರುವ ಕಾರಣ, ಅಂಗಗಳು ಒಂದಾಗಿ ಬೆಳೆಯುತ್ತವೆ. ಅವರು ಯೋಗ ದ ಎಂಟು ಹೆಜ್ಜೆಗಳು ಎನ್ನಲಿಲ್ಲ.
ಮಹರ್ಷಿ ಪತಂಜಲಿಯವರು ಪದಗಳನ್ನು ಬಹಳ ನಿಖರವಾಗಿ ಬಳಸಿದ್ದಾರೆ. ಗರ್ಭದಲ್ಲಿ ಮೊದಲು ಮಗುವಿಗೆ ಕಾಲುಗಳು ಬೆಳೆದ ನಂತರ ಕೈಗಳು ಬೆಳೆಯುವುದಿಲ್ಲ. ಎಲ್ಲಾ ಅಂಗಗಳೂ ಒಮ್ಮೆಲೇ ಬೆಳೆಯುತ್ತವೆ. ಹೆಜ್ಜೆಗಳೆಂದರೆ, ಒಂದು ಹೆಜ್ಜೆಯನ್ನು ಸಾಧಿಸಿದ ನಂತರವೇ ಮತ್ತೊಂದು ಹೆಜ್ಜೆಯನ್ನು ಸಾಧಿಸಲು ಹೊರಡುವುದು. ನೀವು ಯಾವ ಮಟ್ಟದವರೆಗೆ ಸತ್ಯದ ಬಳಿಯಿರುತ್ತೀರೋ, ಎಷ್ಟರಮಟ್ಟಿಗೆ ಅಹಿಂಸೆಯ ಅಭ್ಯಾಸವನ್ನು ಮಾಡುತ್ತೀರೋ, ಅಷ್ಟು ಮಟ್ಟಿಗೆ ಪ್ರಾಣಾಯಾಮದ ಟರಿಣಿತಿಯನ್ನು ಪಡೆಯುತ್ತೀರಿ, ಧ್ಯಾನದಲ್ಲಿ ಅಷ್ಟು ಆಳವಾಗಿ ಹೊಕ್ಕುತ್ತೀರಿ. ಇದರ ವಿರುದ್ಧವಾಗಿಯೂ ಮಾಡಬಹುದು. ಧ್ಯಾನದಿಂದ ಆರಂಭಿಸಬಹುದು. ಆಗ ಸತ್ಯ, ಅಹಿಂಸೆ, ಎಲ್ಲವೂ ನಿಮ್ಮ ಭಾಗವಾಗಿಬಿಡುತ್ತದೆ. ಇದನ್ನು ನಾವು ಪ್ರತ್ಯಕ್ಷವಾಗಿ ನೋಡಿದ್ದೇವೆ. ಅತೀ ಕಠಿಣ ಅಪರಾಧಿಗೆ ಧ್ಯಾನವನ್ನು ಕಲಿಸಿದಾಗ, ಅವರಲ್ಲಿ ಕೋಪ ಮಾಯವಾಗಿರುತ್ತದೆ, ಶಾಂತಿ ಬಂದಿರುತ್ತದೆ, ಅಹಿಂಸೆಯ ಮೌಲ್ಯ ಅವರಿಗೆ ಅರಿವಾಗಿರುತ್ತದೆ., ಅವರ ಸದ್ಗುಣಗಳು ಹೊರಡರುತ್ತವೆ. ಇವೆಲ್ಲವೂ ಒಮ್ಮೆಲೇ ಎದ್ದು ಬರುತ್ತವೆ. ಆದ್ದರಿಂದ, ಇವೆಲ್ಲವೂ ಜೊತೆಜೊತೆಯಾಗಿಯೇ ನಡೆಯುತ್ತವೆ.
'ವಿಸ್ಮಯವು ಯೋಗದ ಭೂಮಿಕೆ- ವಿಸ್ಮಯೋ ಯೋಗಭೂಮಿಕಾಃ
ನಿಮ್ಮನ್ನು, ಪ್ರಕೃತಿಯನ್ನು ಗಮನಿಸಿದಾಗ, ನಿಮ್ಮಲ್ಲಿ ವಾಹ್!" ಎಂಬ ಭಾವನೆಯೇಳುತ್ತದೆ. ನಿಮ್ಮ ಜೀವನದಲ್ಲಿ ಅಲೌಕಿಕತೆ ಏಳುತ್ತದೆ. ಅಲೌಕಿಕವಾದುದರೊಡನೆ, ನಿರಪೇಕ್ಷವಾದರೂ ಅತೀ ಘನವಾದುದರೊಡನೆ ಸಂಬಂಧ ಉಂಟಾಗುತ್ತದೆ, ನಮ್ಮ ಇದು ಜೀನವದಲ್ಲಿ ಏಳುತ್ತದೆ. ನಿಮ್ಮಲ್ಲಿ ವಿಸ್ಮಯ ಉಂಟಾಗದೆ ಇದ್ದಲ್ಲಿ, ನೀವು ಯೋಗಿಯೇ ಅಲ್ಲ. ವಿಸ್ಮಯವನ್ನು ಯಾರು ಎಲ್ಲೇ ಅನುಭವಿಸಿದರೂ ಸಹ, ಅದು ಯೋಗದ ಸ್ಥಿತಿಗೆ ಅವರನ್ನು ಕೊಂಡೊಯ್ಯುತ್ತದೆ.
