ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಯಾಸಿನ್‌ ಮಲಿಕ್‌ನನ್ನು ಕೋರ್ಟ್ ಅನುಮತಿ ಇಲ್ಲದೇ ವಿಚಾರಣೆಗೆ ಕರೆತಂದಿದ್ದಕ್ಕೆ ಸುಪ್ರೀಂ ಗರಂ ಆಗಿದ್ದು, 4 ಮಂದಿ ಅಧಿಕಾರಿಗಳನ್ನು ವಜಾಗೊಳಿಸಲಾಗಿದೆ.

ನವದೆಹಲಿ (ಜು.22): ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ, ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ (ಜೆಕೆಎಲ್‌ಎಫ್) ಮುಖ್ಯಸ್ಥ ಯಾಸಿನ್‌ ಮಲಿಕ್‌ನನ್ನು ಕೋರ್ಟ್ ಅನುಮತಿ ಇಲ್ಲದೇ ವಿಚಾರಣೆಗೆ ಕರೆತಂದಿದ್ದಕ್ಕೆ ಸುಪ್ರೀಂಕೋರ್ಟ್ ನ್ಯಾಯಾಧೀಶರು ಆಶ್ಚರ್ಯಗೊಂಡಿದ್ದಾರೆ. ಅಲ್ಲದೇ ಹೀಗೆ ನಡೆದುಕೊಂಡರೆ ಕ್ರಮ ಕೈಗೊಳ್ಳುವುದಾಗಿ ಜೈಲು ಅಧಿಕಾರಿಗಳಿಗೆ ಶುಕ್ರವಾರ ಎಚ್ಚರಿಕೆ ನೀಡಿದ್ದಾರೆ. ಇದಾಗಿ ಒಂದು ದಿನದ ನಂತರ ತಿಹಾರ್ ಜೈಲಿನ 4 ಮಂದಿ ಅಧಿಕಾರಿಗಳನ್ನು ಕೆಲಸದಿಂದ ತೆಗೆದು ಹಾಕಲಾಗಿದೆ.

 ಪ್ರಾಥಮಿಕ ವಿಚಾರಣೆಯ ನಂತರ ಬೇಜವಾಬ್ದಾರಿ ತೋರಿದ ಕಾರಣ ಕಾರಾಗೃಹ ಇಲಾಖೆಯು ಉಪ ಅಧೀಕ್ಷಕರು, ಇಬ್ಬರು ಸಹಾಯಕ ಅಧೀಕ್ಷಕರು ಮತ್ತು ಮುಖ್ಯ ವಾರ್ಡರ್ ಅನ್ನು ಅಮಾನತುಗೊಳಿಸಲಾಗಿದೆ ಎಂದು ಜೈಲುಗಳ ಮಹಾನಿರ್ದೇಶಕ ಸಂಜಯ್ ಬೇನಿವಾಲ್ ಹೇಳಿದ್ದಾರೆ. ಗಂಭೀರ ಲೋಪಕ್ಕೆ ಕಾರಣವಾಗಿರುವ ಇತರ ಅಧಿಕಾರಿಗಳನ್ನು ಗುರುತಿಸಲು ಡಿಐಜಿ ತಿಹಾರ್ ಅವರು ವಿವರವಾದ ವಿಚಾರಣೆ ನಡೆಸುತ್ತಿದ್ದಾರೆ ಎಂದು ಜೈಲು ಅಧಿಕಾರಿ ತಿಳಿಸಿದ್ದಾರೆ.

ಹೆಚ್ಚಿದ ಪ್ರಯಾಣಿಕರ ಬೇಡಿಕೆ, ಯಶವಂತಪುರ-ಮುರ್ಡೇಶ್ವರ ವಿಶೇಷ ರೈಲು ಅವಧಿ ವಿಸ್ತರಣೆ

ಮಲಿಕ್ ಅವರನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಾಗಿತ್ತು ಮತ್ತು ಈ ಬಗ್ಗೆ ದೈಹಿಕವಾಗಿ ಎಂದು ಯಾವುದೇ ಆದೇಶವನ್ನು ನಿರ್ದಿಷ್ಟವಾಗಿ ಹೊರಡಿಸಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಲಿಕ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಜೈಲು ಸಿಬ್ಬಂದಿ ನಡುವೆ ಸಮನ್ವಯದ ಕೊರತೆ ಮತ್ತು ದಾಖಲೆಗಳನ್ನು ತಪ್ಪಾಗಿ ಓದುವ ಮೂಲಕ ಸಮಸ್ಯೆ ಉದ್ಭವಿಸಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಉಗ್ರರಿಗೆ ಹಣ ಪೂರೈಕೆ ಮಾಡಿದ ಪ್ರಕರಣದಲ್ಲಿ ಈಗಾಗಲೇ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಯಾಸಿನ್‌ ಮಲಿಕ್‌ನ ಮತ್ತೊಂದು ಪ್ರಕರಣದ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿತ್ತು. ಈ ವೇಳೆ ವಿಚಾರಣೆಗೆ ಯಾಸಿನ್‌ ಹಾಜರಿರಬೇಕು ಎಂದು ಸುಪ್ರೀಂಕೋರ್ಟ್ ಹೇಳದಿದ್ದರೂ ಸಹ ಜೈಲಿನ ಅಧಿಕಾರಿಗಳು ಯಾಸಿನ್‌ನನ್ನು ಕರೆತಂದಿದ್ದರು. ಇದನ್ನು ಗಮನಿಸಿ ಕೋರ್ಟ್ ಕಿಡಿಕಾರಿತು.

ಇವರೇ ನೋಡಿ ಭಾರತದ ಅತ್ಯಂತ ಶ್ರೀಮಂತ ಶಾಸಕರು, ಟಾಪ್‌ 10ರಲ್ಲಿ ಕರ್ನಾಟಕದವರೇ ಹೆಚ್ಚು, ಡಿಕೆಶಿ

ಇದೇ ವೇಳೆ ಮಾತನಾಡಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ಇದೊಂದು ಭದ್ರತಾ ಲೋಪವಾಗಿದ್ದು, ರಕ್ಷಣೆ ಇಲ್ಲದೇ ಈ ಕರೆತರುವುದು ಆತನ ಹತ್ಯೆಗೂ ಕಾರಣವಾಗಬಹುದು ಎಂದು ಹೇಳಿದರು. ಅಲ್ಲದೇ ಇನ್ನು ಮುಂದೆ ಈ ರೀತಿ ಭದ್ರತಾ ಲೋಪಗಳಾಗದಂತೆ ಎಚ್ಚರಿಕೆ ವಹಿಸುವುದಾಗಿ ಸುಪ್ರೀಂಕೋರ್ಟ್ ಗೆ ಭರವಸೆ ನೀಡಿದರು.

ನಾಲ್ವರು ಐಎಎಫ್‌ ಅಧಿಕಾರಿಗಳ ಹತ್ಯೆ, ಮುಫ್ತಿ ಮೊಹಮ್ಮದ್‌ ಸಯೀದ್‌ ಅವರ ಪುತ್ರಿ ರುಬಯಾ ಸಯೀದ್‌ ಅವರ ಅಪಹರಣದಲ್ಲಿ ಯಾಸಿನ್‌ ಪಾತ್ರ ಕುರಿತಾದ ಪ್ರಕರಣವನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿದೆ.