ಕತ್ತು ಕತ್ತರಿಸಿಕೊಳ್ಳುವೆ, ಆದರೆ ಬಿಜೆಪಿಗೆ ತಲೆಬಾಗಲ್ಲ: ಮಮತಾ| ನೇತಾಜಿ ಜನ್ಮ ದಿನದ ಘಟನೆ ಬಗ್ಗೆ ಬಿಜೆಪಿಗೆ ತಿರುಗೇಟು

ಮುಂಬೈ(ಜ.26): ನೇತಾಜಿ ಸುಭಾಷ್‌ಚಂದ್ರ ಬೋಸ್‌ ಜನ್ಮ ದಿನಾಚರಣೆ ಕಾರ್ಯಕ್ರಮದ ವೇಳೆ ಸಭಿಕರು ‘ಜೈ ಶ್ರೀರಾಮ್‌’ ಎಂದು ಘೋಷಣೆ ಕೂಗಿದ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಹರಿಹಾಯ್ದಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ‘ನನ್ನ ಕತ್ತನ್ನು ಕತ್ತರಿಸಿಕೊಳ್ಳುತ್ತೇನೆಯೇ ಹೊರತು ಬಿಜೆಪಿಗೆ ತಲೆ ಬಾಗುವುದಿಲ್ಲ’ ಎಂದು ಗುಡುಗಿದ್ದಾರೆ.

ಹೂಗ್ಲಿಯಲ್ಲಿ ಆಯೋಜಿಸಿದ್ದ ಸಭೆಯೊಂದರ ವೇಳೆ ಮಾತನಾಡಿದ ಮಮತಾ, ‘ವಿಕ್ಟೋರಿಯ ಮೆಮೋರಿಯಲ್‌ನಲ್ಲಿ ಸಭಿಕರು (ಬಿಜೆಪಿಗರು) ಪ್ರಧಾನಿ ಸಮ್ಮುಖದಲ್ಲಿ ನನ್ನನ್ನು ಅಣಕಿಸಿದರು. ನೀವು ಮಾಡಿದ್ದು ಬೋಸ್‌ರನ್ನು ಅವಮಾನಿಸುವ ಕೆಲಸ. ಒಂದು ವೇಳೆ ನೀವು ಸುಭಾಷ್‌ಚಂದ್ರ ಬೋಸ್‌ರನ್ನು ಶ್ಲಾಘಿಸುವಂತಹ ಕೆಲಸ ಮಾಡಿದ್ದೀರಿ ಎಂಬುದನ್ನು ಸಾಬೀತುಪಡಿಸಿದರೆ ನಾನು ನನ್ನ ಕತ್ತನ್ನು ಕತ್ತರಿಸಿಕೊಳ್ಳುತ್ತೇನೆ. ಆದರೆ, ನೀವು ಬಲವಂತದಿಂದ ಹಾಗೂ ಗನ್‌ ತೋರಿಸಿ ಬೆದರಿಸಿದರೆ ಹೇಗೆ ಪ್ರತಿರೋಧ ತೋರಬೇಕು ಎಂಬುದು ನನಗೆ ಗೊತ್ತಿದೆ. ನಾನು ಯಾವುತ್ತೂ ಬಿಜೆಪಿಗೆ ತಲೆ ಬಾಗುವುದಿಲ್ಲ’ ಎಂದು ಹೇಳಿದ್ದಾರೆ.

ಜೈ ಶ್ರೀರಾಂಗೆ ಒತ್ತಡ ಹಾಕಿಲ್ಲ:

ಇದೇ ವೇಳೆ ಕಾರ್ಯಕ್ರಮದಲ್ಲಿ ಜೈ ಶ್ರೀರಾಂ ಎಂದು ಹೇಳುವಂತೆ ಯಾರ ಮೇಲೂ ಒತ್ತಡ ಹಾಕಿಲ್ಲ. ಒಂದು ವೇಳೆ ಸಭಿಕರು ಹೀಗೆ ಘೋಷಣೆಕೂಗಿದ್ದರೂ ಅನ್ಯಥಾ ಭಾವಿಸಬೇಕಾದ ಅಗತ್ಯವಿಲ್ಲ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ. ಈ ಮಧ್ಯೆ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಶಿವಸೇನೆ ಮುಖಂಡ ಸಂಜಯ್‌ ರಾವುತ್‌, ‘ಜೈ ಶ್ರೀರಾಂ ಎಂದು ಘೋಷಣೆ ಕೂತಿದ್ದಕ್ಕೆ ಯಾರೂ ಬೇಸರಪಟ್ಟಿಕೊಳ್ಳಬಾರದು. ಮಮತಾ ಬ್ಯಾನರ್ಜಿ ಅವರು ಕೂಡ ರಾಮನಲ್ಲಿ ನಂಬಿಕೆ ಇಟ್ಟಿದ್ದಾರೆ ಎಂದು ಭಾವಿಸುತ್ತೇನೆ’ ಎಂದು ಹೇಳಿದ್ದಾರೆ.