ವಿಶ್ವದ ಅತ್ಯಂತ ಮಾಲಿನ್ಯ ನಗರ ಪಟ್ಟಿ ಬಿಡುಗಡೆ, 50ರ ಪೈಕಿ 39 ಸಿಟಿ ಭಾರತದಲ್ಲೇ ಇದೆ!
ಭಾರತ ಸೇರಿದಂತೆ ಜಾಗತಿಕವಾಗಿ ಅನೇಕ ನಗರಗಳು ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆ ವಾಯು ಮಾಲಿನ್ಯ. ಇತರ ಅಭಿವೃದ್ಧಿ ಹೊಂದಿದೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಮಾಲಿನ್ಯದ ಪ್ರಮಾಣ ತುಸು ಜಾಸ್ತಿ ಇದೆ. ಇದೀಗ ವಿಶ್ವದ ಅತ್ಯಂತ ಮಾಲಿನ್ಯಗೊಂಡಿರುವ 50 ನಗರಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ಇದರಲ್ಲಿ 39 ನಗರಗಳು ಭಾರತದಲ್ಲೇ ಇವೆ.
ನವದೆಹಲಿ(ಮಾ.14): ವಾಯು ಮಾಲಿನ್ಯ ಸಮಸ್ಯೆ ಭಾರತದ ಪ್ರಮುಖ ನಗರದಲ್ಲಿ ಹೆಚ್ಚಾಗಿದೆ. ಇದರಿಂದ ಆಗುತ್ತಿರುವ ಆರೋಗ್ಯ ಸಮಸ್ಯೆಯೂ ಗಂಭೀರವಾಗುತ್ತಿದೆ. ದೆಹಲಿ, ಮುಂಬೈ, ಕೋಲ್ಕತಾ, ಬೆಂಗಳೂರು, ಹೈದರಾಬಾದ್ ಸೇರಿದಂತೆ ಹಲವು ನಗರಳಲ್ಲಿ ಮಾಲಿನ್ಯ ಪ್ರಮಾಣ ಹೆಚ್ಚಾಗಿದೆ. ಇದೀಗ ವಿಶ್ವದ ಅತ್ಯಂತ ಮಾಲಿನ್ಯ ನಗರ ಪಟ್ಟಿ ಬಿಡುಗಡೆ ಮಾಡಲಾಗಿದೆ.ವಿಶ್ವದ 50 ಅತ್ಯಂತ ಮಾಲಿನ್ಯ ನಗರಗಳನ್ನು ಹೆಸರಿಸಲಾಗಿದೆ. ಇದರಲ್ಲಿ 39 ನಗರ ಭಾರತದಲ್ಲೇ ಇದೆ. ಭಾರತೀಯರು ಕೊಂಚ ನೆಮ್ಮದಿ ಸಿಗುವ ವಿಚಾರವೊಂದಿದೆ. ವಿಶ್ವದ ಮಾಲಿನ್ಯ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ 8ನೇ ಸ್ಥಾನ. ಮೊದಲ ಸ್ಥಾನ ಮಧ್ಯ ಆಫ್ರಿಕಾದಲ್ಲಿರುವ ಚಾದ್ ದೇಶಕ್ಕೆ ಸಂದಿದೆ.
ವಿಶ್ವದ ಅತೀ ಹೆಚ್ಚು ಮಾಲಿನ್ಯ ನಗರಗಳ ಪೈಕಿ ಮೊದಲ ಸ್ಥಾನ ಚಾದ್ ದೇಶದ ಎನ್ ಜಮೇನಾ ನಗರ ಗುರಿಯಾಗಿದೆ. ಇದುವರೆಗೆ ಮೊದಲ ಸ್ಥಾನದಲ್ಲಿದ್ದ ಭಾರತದ ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ನವದೆಹಲಿ ಟಾಪ್ 10 ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಆದರೆ ನವ ದೆಹಲಿ 2ನೇ ಮಾಲಿನ್ಯ ನಗರಗಳ ಪೈಕಿ 2ನೇ ಸ್ಥಾನದಲ್ಲಿದೆ. ಭಾರತದ ಅತ್ಯಂತ ಮಾಲಿನ್ಯ ನಗರದಳಲ್ಲಿ ನವದೆಹಲಿ ಮೊದಲ ಸ್ಥಾನದಲ್ಲಿದ್ದರೆ, ಕೋಲ್ಕತಾ ಎರಡನೇ ಸ್ಥಾನದಲ್ಲಿದೆ. ಇನ್ನು ಚೆನ್ನೈ ಮಾಲಿನ್ಯ ನಗರ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ. ಚೆನ್ನೈನಲ್ಲಿ ಮಾಲಿನ್ಯ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ ಎಂದು ವರದಿ ಹೇಳಿದೆ.
100 ಅತಿಯಾದ ಮಾಲಿನ್ಯ ಸ್ಥಳಗಳ ಪಟ್ಟಿಯಲ್ಲಿ ಭಾರತದಲ್ಲೇ 63 ಪ್ರದೇಶ!
2017ರ ಬಳಿಕ ಮಾಲಿನ್ಯ ಮಟ್ಟ ಏರಿಕೆಯಾಗುತ್ತಾ ಸಾಗುತ್ತಿರುವ ನಗರಗಳ ಪೈಕಿ ಬೆಂಗಳೂರು ಹಾಗೂ ಹೈದರಾಬಾದ್ ಗುರುತಿಸಿಕೊಂಡಿದೆ. ಈ ಮೂಲಕ ಈ ಎರಡು ನಗರಗಳು ಎಚ್ಚರಿಕೆ ಕರೆಗಂಟೆ ನೀಡಿದೆ. ಮತ್ತೊಂದು ದೆಹಲಿ ಆಗುವ ಮುನ್ನ ಆಗಲೇ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ರಾಜಸ್ಥಾದನ ಭಿವಾಡಿ, ಪುಣೆ, ಮುಂಬೈ ಸೇರಿದಂತೆ ಹಲವು ನಗರಳು ಮಾಲಿನ್ಯ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಏಷ್ಯಾ ಉಪಖಂಡಗಳ ಪೈಕಿ ಪಾಕಿಸ್ತಾನದ ಲಾಹೋರ್ ನಗರ ಅತ್ಯಂತ ಮಾಲಿನ್ಯ ಹೊಂದಿದ ನಗರ ಅನ್ನೋ ಕುಖ್ಯಾತಿಗೆ ಗುರಿಯಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಭಾರತದಲ್ಲಿ ಒಟ್ಟಾರೆ ಮಾಲಿನ್ಯ ಪ್ರಮಾಣ ತಗ್ಗಿದೆ. ವಿಶ್ವದ ಟಾಪ್ 10 ಅತೀ ಮಾಲಿನ್ಯ ದೇಶಗಳ ಪಟ್ಟಿಯಲ್ಲಿ ಭಾರತ 8ನೇ ಸ್ಥಾನದಲ್ಲಿದೆ. ಈ ಮೂಲಕ ಭಾರತದಲ್ಲಿ ಮಾಲಿನ್ಯ ಅಪಾಯ ತಗ್ಗಿದೆ. ಹಾಗಂತೆ ಸಂಪೂರ್ಣ ಕಡಿಮೆಯಾಗಿಲ್ಲ.
Air Pollution| ದೆಹಲಿ ಮಾಲಿನ್ಯ ನಿಯಂತ್ರಿಸಲು ಸರ್ಕಾರಗಳಿಗೆ ಸುಪ್ರೀಂ ಗಡುವು!
ವಿಶ್ವದ ಅತ್ಯಂತ ಮಾಲಿನ್ಯ ದೇಶಗಳ ಪಟ್ಟಿ
1) ಚಾದ್
2) ಇರಾಕ್
3) ಪಾಕಿಸ್ತಾನ
4) ಬಹ್ರೈನ್
5) ಬಾಂಗ್ಲಾದೇಶ
6) ಬರ್ಕಿನಾ ಫಾಸೊ
7) ಕುವೈಟ್
8) ಭಾರತ
9) ಈಜಿಪ್ಟ್
10) ತಜಕಿಸ್ತಾನ
ಆಸ್ಟ್ರೇಲಿಯಾ, ಎಸ್ಟೊನಿಯಾ, ಫಿನ್‌ಲ್ಯಾಂಡ್, ಗ್ರೆನೆಡಾ, ಐಸ್‌ಲೆಂಡ್ ಹಾಗೂ ನ್ಯೂಜಿಲೆಂಡ್ ಅತೀ ಕಡಿಮೆ ಮಾಲಿನ್ಯ ಹೊಂದಿದ ದೇಶಗಳಾಗಿವೆ. ಇಲ್ಲಿನ ಬಹುತೇಕ ಸ್ಥಳಗಳು ಶೂನ್ಯ ಮಾಲಿನ್ಯ ಪ್ರಮಾಣ ಹೊಂದಿದೆ. ಈ ಮೂಲಕ ವಾಸಕ್ಕೆ ಅತ್ಯಂತ ಯೋಗ್ಯ ನಗರ ಎಂದು ಗುರುತಿಸಿಕೊಂಡಿದೆ.