ನವದೆಹಲಿ(ಜೂ.18): ರಾಜಧಾನಿಯಲ್ಲಿ ದಿನೇ ದಿನೇ ಕೊರೋನಾ ಹೆಚ್ಚಳವಾಗುತ್ತಿರುವುದು ಹಾಗೂ ಸೋಂಕಿತರ ಸಂಖ್ಯೆ ಜುಲೈ ಅಂತ್ಯದ ವೇಳೆಗೆ 5.5 ಲಕ್ಷಕ್ಕೇರಬಹುದು ಎಂಬ ವರದಿಗಳ ಬೆನ್ನಲ್ಲೇ, ವಿಶ್ವದ ಅತಿದೊಡ್ಡ ಕೋವಿಡ್‌ ಆಸ್ಪತ್ರೆಯೊಂದು ದೆಹಲಿಯಲ್ಲಿ ಸದ್ದಿಲ್ಲದೆ ನಿರ್ಮಾಣವಾಗುತ್ತಿದೆ.

ಭವಿಷ್ಯದಲ್ಲಿ ಬೆಡ್‌ ಸಮಸ್ಯೆ ಎದುರಾಗಬಹುದಾದ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ, ಇಲ್ಲಿನ ರಾಧಾ ಸೋಮಿ ಆಧ್ಯಾತ್ಮಿಕ ಕೇಂದ್ರವನ್ನೇ ಆಸ್ಪತ್ರೆಯಾಗಿ ಪರಿವರ್ತಿಸುತ್ತಿದೆ. ಸುಮಾರು 22 ಫುಟ್ಬಾಲ್‌ ಮೈದಾನದಷ್ಟುದೊಡ್ಡದಾದ ಜಾಗವಿದ್ದು, ಅಲ್ಲಿ 200 ಹಾಲ್‌ಗಳು ಹಾಗೂ 10 ಸಾವಿರ ಬೆಡ್‌ಗಳಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಇದಕ್ಕಾಗಿ ಪ್ರತ್ಯೇಕ ಟೆಂಟ್‌ಗಳನ್ನು ಅಳವಡಿಸಲಾಗುತ್ತಿದೆ. ಪ್ರತಿ ಹಾಲ್‌ನಲ್ಲೂ ಫ್ಯಾನ್‌, ಕೂಲರ್‌ ವ್ಯವಸ್ಥೆ ಇರಲಿದೆ. ಈ ಜಾಗದಲ್ಲೇ ವೈದ್ಯರಿಗೂ ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸಲಾಗುತ್ತದೆ. ಈ ಆಸ್ಪತ್ರೆ ಜೂನ್‌ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ.

ಸದ್ಯ ದೆಹಲಿಯಲ್ಲಿ 44688 ಸೋಂಕಿತರಿದ್ದು, 1837 ಜನ ಸಾವನ್ನಪ್ಪಿದ್ದಾರೆ. ಆದರೆ ದಿನೇ ದಿನೇ ಭಾರೀ ಪ್ರಮಾಣದಲ್ಲಿ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಪರಿವರ್ತಿತ 500 ರೈಲ್ವೆ ಬೋಗಿಗಳನ್ನು ದೆಹಲಿ ಸರ್ಕಾರ ಪಡೆದುಕೊಂಡಿದೆ. ಇದರಲ್ಲಿಯೂ 8000 ರೋಗಿಗಳಿಗೆ ಚಿಕಿತ್ಸೆ ನೀಡುವ ಅವಕಾಶ ಲಭ್ಯವಾಗಲಿದೆ. ಇದರ ಜೊತೆಗೆ 40 ಪಂಚಾತಾರಾ ಹೋಟೆಲ್‌ಗಳು ಮತ್ತು 77 ಬ್ಯಾಂಕ್ವೆಟ್‌ ಹಾಲ್‌ಗಳನ್ನೂ ತುರ್ತು ಆಸ್ಪತ್ರೆಯಾಗಿ ಪರಿವರ್ತಿಸುವ ಮೂಲಕ ಅಲ್ಲಿಯೂ ಹೆಚ್ಚುವರಿ 15800 ರೋಗಿಗಳಿಗೆ ಚಿಕಿತ್ಸೆಯ ಸೌಲಭ್ಯವನ್ನು ಅಣಿ ಮಾಡುತ್ತಿದೆ.

#NewsIn100Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"