ಕೌರಿ[ಜ.15]: ಕಾಶ್ಮೀರ ಕಣಿವೆ ಹಾಗೂ ಭಾರತದ ಇತರೆ ಪ್ರದೇಶವನ್ನು ರೈಲ್ವೇ ಮಾರ್ಗ ಮೂಲಕ ಸಂಪರ್ಕ ಕಲ್ಪಿಸಲು, ಚೆನಾಬ್‌ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಲಾಗುತ್ತಿರುವ ಹೊಸ ರೈಲ್ವೇ ಸೇತುವೆ 40 ಕೆಜಿ ಸುಧಾರಿತ ಟಿಎನ್‌ಟಿ ಸ್ಪೋಟ ಹಾಗೂ 8 ರಿಕ್ಟರ್‌ ಮಾಪಕ ತೀವ್ರತೆಯ ಭೂಕಂಪವನ್ನು ತಡೆದುಕೊಳ್ಳುವ ಶಕ್ತಿ ಹೊಂದಿರಲಿದೆ ಎಂದು ರೈಲ್ವೇ ಎಂಜಿನಿಯರ್‌ ಹೇಳಿದ್ದಾರೆ.

ಸಂಪೂರ್ಣ ಕೇಂದ್ರ ಅನುದಾನದ ಯೋಜನೆ ಇದಾಗಿದ್ದು, ಅತ್ಯಂತ ಕ್ಲಿಷ್ಟಕರವಾದ ಕಟ್ರಾ-ಬನಿಹಾಲ್‌ ಮಾರ್ಗಕ್ಕೆ ಸಂಪರ್ಕ ಕಲ್ಪಿಸಲಿದೆ. ಈಗಾಗಲೇ ಶೇ.85ರಷ್ಟುಕೆಲಸ ಪೂರ್ತಿಯಾಗಿದ್ದು, 2021ರ ವೇಳೆಗೆ ಯೋಜನೆ ಲೋಕಾರ್ಪಣೆಗೊಳ್ಳಲಿದೆ. ಈ ಸೇತುವೆ ನದಿಯಿಂದ 359 ಮೀಟರ್‌ ಎತ್ತರದಲ್ಲಿದ್ದು, ಪ್ರತಿಷ್ಠಿತ ಐಫೆಲ್‌ ಟವರ್‌ಗಿಂತ 35 ಮೀಟರ್‌ ಎತ್ತರವಾಗಿದೆ.

ಈ ಯೋಜನೆ ಪೂರ್ಣಗೊಂಡರೆ ವಿಶ್ವದ ಅತೀ ಎತ್ತರದ ರೈಲ್ವೇ ಸೇತುವೆ ಎನ್ನುವ ಹೆಗ್ಗಳಿಕೆ ಪಾತ್ರವಾಗಲಿದೆ.