ಮಹಾತ್ಮ ಗಾಂಧೀಜಿಯ ಕುರಿತು ಪ್ರಪಂಚಕ್ಕೆ ತಿಳಿಸುವ ಕಾರ್ಯವನ್ನು ಭಾರತೀಯರು ಮಾಡಬೇಕಿತ್ತು. ಆದರೆ ಆ ಕೆಲಸವನ್ನು ರಿಚರ್ಡ್‌ ಅಟೆನ್‌ಬರೋ ಗಾಂಧಿ ಚಿತ್ರದ ಮೂಲಕ 1982ರಲ್ಲಿ ನೆರವೇರಿಸಿದ ಬಳಿಕ ಜಗತ್ತಿಗೆ ಗಾಂಧೀಜಿಯ ಸಾಧನೆ ತಿಳಿಯಿತು: ಪ್ರಧಾನಿ ನರೇಂದ್ರ ಮೋದಿ 

ನವದೆಹಲಿ(ಮೇ.30): 1982ರಲ್ಲಿ ಮಹಾತ್ಮ ಗಾಂಧೀಜಿಯವರ ಕುರಿತು ಚಲನಚಿತ್ರ ಬರುವವರೆಗೂ ಅವರು ಯಾರೆಂದು ಪ್ರಪಂಚಕ್ಕೆ ಗೊತ್ತಿರಲಿಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯೊಂದು ಭಾರೀ ವಿವಾದಕ್ಕೆ ಕಾರಣವಾಗಿದೆ. ಇಂಥ ಹೇಳಿಕೆ ಮೂಲಕ ರಾಷ್ಟ್ರಪಿತ ಗಾಂಧೀಜಿಯ ಪರಂಪರೆಗೆ ಮೋದಿ ಮಸಿ ಬಳಿದಿದ್ದಾರೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ ಕಿಡಿ ಕಾರಿದ್ದಾರೆ.

ಚುನಾವಣೆ ಹಿನ್ನೆಲೆಯಲ್ಲಿ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಪ್ರಧಾನಿ ಮೋದಿ, ‘ಮಹಾತ್ಮ ಗಾಂಧೀಜಿಯ ಕುರಿತು ಪ್ರಪಂಚಕ್ಕೆ ತಿಳಿಸುವ ಕಾರ್ಯವನ್ನು ಭಾರತೀಯರು ಮಾಡಬೇಕಿತ್ತು. ಆದರೆ ಆ ಕೆಲಸವನ್ನು ರಿಚರ್ಡ್‌ ಅಟೆನ್‌ಬರೋ ಗಾಂಧಿ ಚಿತ್ರದ ಮೂಲಕ 1982ರಲ್ಲಿ ನೆರವೇರಿಸಿದ ಬಳಿಕ ಜಗತ್ತಿಗೆ ಗಾಂಧೀಜಿಯ ಸಾಧನೆ ತಿಳಿಯಿತು’ ಎಂದು ಹೇಳಿದ್ದರು.

3ನೇ ಮಗು ಹುಟ್ಟಿದ್ದಕ್ಕೆ ಇಬ್ಬರು ಬಿಜೆಪಿ ಕಾರ್ಪರೇಟರ್‌ಗಳು ಅನರ್ಹ: ಮೋದಿ ರೂಪಿಸಿದ್ದ ಕಾನೂನು..!

ಜೊತೆಗೆ ‘ಜಗತ್ತಿಗೆ ಮಾರ್ಟಿನ್‌ ಲೂಥರ್ ಕಿಂಗ್, ನೆಲ್ಸನ್ ಮಂಡೇಲಾ ಅವರಂಥ ನಾಯಕರು ಗೊತ್ತಿದ್ದಾರೆ ಎಂದಾದಲ್ಲಿ ಗಾಂಧೀಜಿ ಕೂಡಾ ಅವರಿಗಿಂತ ಏನೂ ಕಡಿಮೆ ಇಲ್ಲ. ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ನಮ್ಮ ದೇಶವನ್ನು ಗಾಂಧೀಜಿ ಮತ್ತು ಅವರ ತತ್ವಗಳ ಮೂಲಕ ಗುರುತಿಸುವಂತೆ ಆಗಬೇಕು’ ಎಂದು ಮೋದಿ ಹೇಳಿದ್ದಾರೆ.

ಮೋದಿ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಜೈರಾಂ, ‘ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧೀಜಿ ಬಗ್ಗೆ ಚಲನಚಿತ್ರ ಬರುವವರೆಗೂ ಆತನ ಬಗ್ಗೆ ಗೊತ್ತೇ ಇರಲಿಲ್ಲ ಎಂದು ಹೇಳುವ ಮೂಲಕ ಅವರ ಸಾಧನೆಗಳಿಗೆ ಅವಮಾನಿಸಿದ್ದಾರೆ. ಆರ್‌ಎಸ್‌ಎಸ್‌ನವರಿಗೆ ಗಾಂಧಿಯನ್ನು ಕೊಂದ ನಾಥೂರಾಮ್‌ ಗೋಡ್ಸೆಯ ಕುರಿತು ತಿಳಿದಿದೆಯೇ ಹೊರತು ಗಾಂಧೀಜಿಯ ರಾಷ್ಟ್ರೀಯತಾ ತತ್ವದ ಕುರಿತು ತಿಳಿದಿಲ್ಲ. ಇದು ಗಾಂಧೀಜಿ ಹಾಗೂ ಗೋಡ್ಸೆ ಬೆಂಬಲಿಗರ ನಡುವಿನ ಚುನಾವಣೆಯಾಗಿದೆ’ ಎಂದು ತಿಳಿಸಿದರು.