ಟ್ರಕ್‌ನಲ್ಲಿ ರಾಹುಲ್ ಗಾಂಧಿ ಪ್ರಯಾಣ: ಕಾಂಗ್ರೆಸ್ ಸರ್ಕಾರ ಬಂದ್ರೆ ಲಾರಿ ಚಾಲಕರ ಸಮಸ್ಯೆ ಬಗೆಹರಿಸುವ ಭರವಸೆ
ಆರು ಗಂಟೆಗಳ ದೆಹಲಿ-ಚಂಡೀಗಢ ಪ್ರಯಾಣದಲ್ಲಿ ಟ್ರಕ್ ಡ್ರೈವರ್‌ಗಳೊಂದಿಗೆ ಆಸಕ್ತಿದಾಯಕ ಸಂಭಾಷಣೆ ನಡೆಸಿದ್ದೇನೆ ಎಂದು ರಾಹುಲ್ ಗಾಂಧಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
ನವದೆಹಲಿ (ಮೇ 31, 2023): ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ತಾವು ಇತ್ತೀಚೆಗೆ ಟ್ರಕ್‌ನಲ್ಲಿ ದಿಲ್ಲಿಯಿಂದ ಚಂಡೀಗಢಕ್ಕೆ ಪ್ರಯಾಣಿಸಿದ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆ ಹಾಗೂ ಯೂಟ್ಯೂಬ್‌ನಲ್ಲಿ ಶೇರ್ ಮಾಡಿದ್ದಾರೆ. ‘6 ಗಂಟೆಗಳ ಈ ಟ್ರಕ್ ಯಾತ್ರ ಅತ್ಯದ್ಭುತವಾಗಿತ್ತು. ಅಲ್ಲದೆ ಕುತೂಹಲಕರ ಸಂವಾದವು ಟ್ರಕ್ ಚಾಲಕ ಪ್ರೇಮ್ ರಜಪೂತ್ ಹಾಗೂ ಕ್ಲೀನರ್ ರಾಕೇಶ್ ಜತೆ ಈ ವೇಳೆ ನಡೆಯಿತು. ಪ್ರಯಾಣದಲ್ಲಿ 6 ತಾಸು ಕಳೆದಿದ್ದೇ ಗೊತ್ತಾಗಲಿಲ್ಲ’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
“ಆರು ಗಂಟೆಗಳ ದೆಹಲಿ-ಚಂಡೀಗಢ ಪ್ರಯಾಣದಲ್ಲಿ ಟ್ರಕ್ ಡ್ರೈವರ್‌ಗಳೊಂದಿಗೆ ಆಸಕ್ತಿದಾಯಕ ಸಂಭಾಷಣೆ! 24 ಗಂಟೆಗಳ ಕಾಲ ರಸ್ತೆಯಲ್ಲಿ ಕಳೆಯುವ ಅವರು ಭಾರತದ ಮೂಲೆ ಮೂಲೆಯನ್ನು ಒಂದುಗೂಡಿಸುತ್ತಾರೆ’’ ಎಂದೂ ರಾಹುಲ್ ಗಾಂಧಿ ಈ ವೇಳೆ ಹೇಳಿದ್ದಾರೆ.
ಇದನ್ನು ಓದಿ: ಕೊನೆಗೂ ರಾಹುಲ್ ಗಾಂಧಿಗೆ ಸಿಕ್ತು ಸಾಮಾನ್ಯ ಪಾಸ್‌ಪೋರ್ಟ್: ಇಂದು ಅಮೆರಿಕ ಪ್ರವಾಸಕ್ಕೆ 'ಕೈ' ನಾಯಕ
ಇದೇ ವೇಳೆ ಟ್ರಕ್ ಚಾಲಕ, ‘ನಮಗೆ ಕಡಿಮೆ ಸಂಬಳವಿದೆ. ಪೊಲೀಸರ ಕಿರುಕುಳ ಇದೆ. ನಮ್ಮ ಮಕ್ಕಳಂತೂ ಈ ವೃತ್ತಿ ಕೈಗೊಳ್ಳೋದು ಬೇಡ’ ಎಂಬ ಅಳಲನ್ನು ಹಂಚಿಕೊಂಡರು. ಆಗ ರಾಹುಲ್ ಗಾಂಧಿ, ‘ಮುಂದೆ ಕಾಂಗ್ರೆಸ್ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಎಲ್ಲ ಸಮಸ್ಯೆಗಳನ್ನು ಬಗೆಹರಿಸುತ್ತೇವೆ’ ಎಂದು ರಾಹುಲ್ ಗಾಂಧಿ ಭರವಸೆ ನೀಡಿದ್ದು ವಿಡಿಯೋದಲ್ಲಿ ಕಂಡುಬರುತ್ತದೆ.
ದೇಶದಲ್ಲಿ 3 ಕೋಟಿ ಲಾರಿ ಚಾಲಕರಿದ್ದು, ಪ್ರತಿ ವರ್ಷ 9 ಲಕ್ಷ ಹೆಚ್ಚುವರಿ ಚಾಲಕರಿಗೆ ಬೇಡಿಕೆ ಇದೆ. ರಾಹುಲ್ ಗಾಂಧಿ ಇತ್ತೀಚೆಗೆ ಜನಸಾಮಾನ್ಯರ ಜತೆ ಬೆರೆಯುವುದು ಹೆಚ್ಚಿದೆ. ಮೊದಲು ಭಾರತ್ ಜೋಡೋ ಯಾತ್ರೆ, ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಪ್ರಯಾಣ ಹಾಗೂ ಸ್ವಿಗ್ಗಿ ಬೈಕ್ ಚಾಲಕನ ಜತೆ ಹಿಂಬದಿ ಸವಾರನಾಗಿ ಪಯಣ, ದಿಲ್ಲಿ ವಿವಿ ಹಾಸ್ಟೆಲ್‌ಗೆ ಹೋಗಿ ವಿದ್ಯಾರ್ಥಿಗಳ ಜತೆ ಊಟ - ಇವು ರಾಹುಲ್ ಗಾಂಧಿಯವರ ಇತ್ತೀಚಿನ ‘ಜನಸಾಮಾನ್ಯ ಮಂತ್ರ ಪಠಣ’ಗಳಾಗಿವೆ.
ಇದನ್ನೂ ಓದಿ: ರಾಹುಲ್ ಗಾಂಧಿಗೆ ಸಿಕ್ತು ಸಾಮಾನ್ಯ ಪಾಸ್‌ಪೋರ್ಟ್: 10 ವರ್ಷದ ಬದಲು 3 ವರ್ಷಕ್ಕೆ ಮಾತ್ರ ಅನುಮತಿ!