ರಾಹುಲ್ ಗಾಂಧಿಗೆ ಸಿಕ್ತು ಸಾಮಾನ್ಯ ಪಾಸ್‌ಪೋರ್ಟ್: 10 ವರ್ಷದ ಬದಲು 3 ವರ್ಷಕ್ಕೆ ಮಾತ್ರ ಅನುಮತಿ!
ರಾಹುಲ್ ಗಾಂಧಿ ಮೇಲೆ ಗಂಭೀರ ಆರೋಪವಿದೆ. ಹೀಗಾಗಿ ಅವರಿಗೆ ಸಾಮಾನ್ಯವಾಗಿ ಎಲ್ಲರಿಗೂ ನೀಡುವ 10 ವರ್ಷದ ಪಾಸ್‌ಪೋರ್ಟ್ ಬದಲು 1 ವರ್ಷದ ಪಾಸ್‌ಪೋರ್ಟ್ ನೀಡಬೇಕು. ಪ್ರತಿ ವರ್ಷ ಅದರ ನವೀಕರಣ ಮಾಡಬೇಕು’ ಎಂದು ಸುಬ್ರಮಣಿಯನ್ ಸ್ವಾಮಿ ಕೋರಿದ್ದರು..
ನವದೆಹಲಿ (ಮೇ 27, 2023): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸಾಮಾನ್ಯ ಪಾಸ್‌ಪೋರ್ಟ್ ನೀಡಲು ದಿಲ್ಲಿ ಕೋರ್ಟ್ ಗುರುವಾರ ಅನುಮತಿಸಿದೆ. ಆದರೆ 10 ವರ್ಷದ ಬದಲು 3 ವರ್ಷದ ಪಾಸ್‌ಪೋರ್ಟ್‌ಗೆ ಮಾತ್ರ ಸಮ್ಮತಿಸಿದೆ.
ರಾಹುಲ್ ಗಾಂಧಿ ಇತ್ತೀಚೆಗೆ ಸಂಸತ್ ಸದಸ್ಯತ್ವದಿಂದ ಅನರ್ಹಗೊಂಡಿದ್ದರು. ಹಾಗೂ ಅವರು ರಾಜತಾಂತ್ರಿಕ ಪಾಸ್‌ಪೋರ್ಟ್ ಸವಲತ್ತು ಕಳೆದುಕೊಂಡಿದ್ದರು. ಹೀಗಾಗಿ ಅವರು ಸಾಮಾನ್ಯ ಪಾಸ್‌ಪೋರ್ಟ್‌ಗೆ ಹೆಚ್ಚುವರಿ ಮೆಟ್ರೋಪಾಲಿಟನ್ ಮ್ಯಾಜಿಸ್ಪ್ರೇಟ್ ಕೋರ್ಟ್‌ನಿಂದ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಬಯಸಿದ್ದರು. ಇನ್ನೇನು ಅವರು ಅಮೆರಿಕ ಪ್ರವಾಸ ಕೈಗೊಳ್ಳಬೇಕಿದ್ದು ಪಾಸ್‌ಪೋರ್ಟ್ ಅವಶ್ಯವಾಗಿತ್ತು.
ಇದನ್ನು ಓದಿ: ಸಂಸತ್ ಸ್ಥಾನ ಕಳ್ಕೊಂಡ ರಾಹುಲ್ ಗಾಂಧಿಗೆ ಈಗ ಹೊಸ ಪಾಸ್‌ಪೋರ್ಟ್ ಪಡೆಯಲೂ ಸಂಕಷ್ಟ!
ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಹೂಡಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣ ಹಾಗೂ ನ್ಯಾಷನಲ್ ಹೆರಾಲ್ಡ್ ಅಕ್ರಮ ಪರಭಾರೆ ಪ್ರಕರಣಗಳ ವಿಚಾರಣೆ ಇನ್ನೂ ಮುಕ್ತಾಯವಾಗದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿಗೆ ಸಾಮಾನ್ಯ ಪಾಸ್‌ಪೋರ್ಟ್ ಗಿಟ್ಟಿಸಲು ಎನ್‌ಒಸಿ ಅಗತ್ಯವಿತ್ತು. ‘ಆದರೆ ರಾಹುಲ್ ಗಾಂಧಿ ಮೇಲೆ ಗಂಭೀರ ಆರೋಪವಿದೆ. ಹೀಗಾಗಿ ಅವರಿಗೆ ಸಾಮಾನ್ಯವಾಗಿ ಎಲ್ಲರಿಗೂ ನೀಡುವ 10 ವರ್ಷದ ಪಾಸ್‌ಪೋರ್ಟ್ ಬದಲು 1 ವರ್ಷದ ಪಾಸ್‌ಪೋರ್ಟ್ ನೀಡಬೇಕು. ಪ್ರತಿ ವರ್ಷ ಅದರ ನವೀಕರಣ ಮಾಡಬೇಕು’ ಎಂದು ಸುಬ್ರಮಣಿಯನ್ ಸ್ವಾಮಿ ಕೋರಿದರು.
ಇದಕ್ಕೆ ಆಕ್ಷೇಪಿಸಿದ ರಾಹುಲ್ ಗಾಂಧಿ ಪರ ವಕೀಲರು, ‘ಗಂಭೀರ ದೋಷಾರೋಪಕ್ಕೆ ಒಳಗಾದವರ ಪಾಸ್‌ಪೋರ್ಟ್ ಅವಧಿ ಕಡಿತ ಮಾಡಲಾಗುತ್ತದೆ. ರಾಹುಲ್ ಗಾಂಧಿ ಅವರ ಮೇಲೆ ಇನ್ನೂ ಹೆರಾಲ್ಡ್ ಕೇಸಲ್ಲಿ ದೋಷಾರೋಪ ಹೊರಿಸಿಲ್ಲ’ ಎಂದು ವಾದಿಸಿದರು. ಕೊನೆಗೆ ಕೋರ್ಟು, 10 ವರ್ಷದ ಬದಲು 3 ವರ್ಷದ ಪಾಸ್‌ಪೋರ್ಟ್‌ಗೆ ಸಮ್ಮತಿಸಿತು.