ಕೇಂದ್ರ ಸರ್ಕಾರವು ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲು ನೀಡುವ ಮತ್ತು ಲೋಕಸಭಾ ಕ್ಷೇತ್ರಗಳನ್ನು 850ಕ್ಕೆ ಹೆಚ್ಚಿಸುವ ಮಸೂದೆ ಮಂಡಿಸಲು ಸಿದ್ಧತೆ ನಡೆಸಿದೆ. ದಕ್ಷಿಣ ರಾಜ್ಯಗಳ ಆಕ್ಷೇಪದ ಹಿನ್ನೆಲೆಯಲ್ಲಿ, ಕ್ಷೇತ್ರಗಳ ಹೆಚ್ಚಳವನ್ನು ಸಮಾನುಪಾತದಡಿ ಮಾಡಲು ನಿರ್ಧರಿಸಲಾಗಿದೆ.

ನವದೆಹಲಿ (ಏ.15): ಲೋಕಸಭೆ ಮತ್ತು ರಾಜ್ಯ ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲು ಜಾರಿ ಮತ್ತು ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು 543ರಿಂದ ಗರಿಷ್ಠ 850ಕ್ಕೇರಿಸಲು ಅನುವು ಮಾಡಿಕೊಡುವ ವಿಧೇಯಕಗಳನ್ನು ಸಂಸತ್ತಿನಲ್ಲಿ ಮಂಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಏ.16ರಿಂದ ಆರಂಭವಾಗುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಂಡಿಸಿ, ಅಂಗೀಕಾರ ಪಡೆಯುವ ಉದ್ದೇಶ ಹೊಂದಿರುವ ಈ ವಿಧೇಯಕಗಳ ಕರಡು ಪ್ರತಿಯನ್ನು ಕೇಂದ್ರ ಸರ್ಕಾರ ಮಂಗಳವಾರ ಸಂಸದರೊಂದಿಗೆ ಹಂಚಿಕೊಂಡಿದೆ.

ಮಹತ್ವದ ವಿಚಾರದಲ್ಲಿ ಲೋಕಸಭೆ ಸ್ಥಾನಗಳ ಸಂಖ್ಯೆಯನ್ನು ಆಯಾ ರಾಜ್ಯಗಳ ಹಾಲಿ ಕ್ಷೇತ್ರಗಳ ಶೇ.50ರಷ್ಟು ಏರಿಸುವ ಪ್ರಸ್ತಾಪ ಇತ್ತು. ಆದರೆ ಇದರಿಂದ ದಕ್ಷಿಣ ರಾಜ್ಯಗಳಿಗೆ ನಷ್ಟವಾಗಿ ಉತ್ತರ ಭಾರತದ ರಾಜ್ಯಗಳ ಲೋಕಸಭೆ ಕ್ಷೇತ್ರ ಸಂಖ್ಯೆ ಹೆಚ್ಚು ಪ್ರಮಾಣದಲ್ಲಿ ಏರಲಿದೆ ಎಂದು ಕರ್ನಾಟಕ ಸೇರಿ ಹಲವು ರಾಜ್ಯಗಳು ಆಕ್ಷೇಪಿಸಿದ್ದವು. ಹೀಗಾಗಿ ಇದೀಗ ಪ್ರಕಟವಾಗಿರುವ ಮಸೂದೆಯ ಅಂಶಗಳಲ್ಲಿ ಶೇ.50ರಷ್ಟು ಏರಿಸುವ ಪ್ರಸ್ತಾಪವಿಲ್ಲ. ಅದರ ಬದಲಾಗಿ ಸಮಾನುಪಾತದಡಿ ಸೀಟು ಹಂಚಿಕೆ ಮಾಡಲಾಗುವುದು ಎನ್ನಲಾಗಿದೆ. ಹೀಗಾಗಿ ದಕ್ಷಿಣ ರಾಜ್ಯಗಳ ವಿರೋಧಕ್ಕೆ ಕೇಂದ್ರ ಮಣಿಯಿತೇ ಎಂದು ವಿಶ್ಲೇಷಿಸಲಾಗುತ್ತಿದೆ.

ಏರಿಕೆ ಪ್ರಸ್ತಾಪ ಇಲ್ಲ:

ಕೇಂದ್ರ ಸರ್ಕಾರದ ಪ್ರಸ್ತಾವಿತ ಕರಡು ವರದಿ ಅನ್ವಯ, 2011ರ ಜನಗಣತಿ ಅಂಕಿ ಅಂಶ ಆಧರಿಸಿ ವಿವಿಧ ರಾಜ್ಯಗಳಲ್ಲಿನ ಲೋಕಸಭಾ ಸ್ಥಾನ ಗರಿಷ್ಠ 815 ಮತ್ತು ಕೇಂದ್ರಾಡಳಿತ ಪ್ರದೇಶಗಳ ಬಲ ಗರಿಷ್ಠ 35ಕ್ಕೆ ಏರಿಸಲಾಗುವುದು. ಈ ಮೂಲಕ ಒಟ್ಟಾರೆ ಸ್ಥಾನ ಬಲವನ್ನು ಗರಿಷ್ಠ 850 ದಾಟದಂತೆ ನೋಡಿಕೊಳ್ಳಲಾಗುವುದು.

ಈ ಏರಿಕೆಗೆ ಅನುವು ಮಾಡಿಕೊಡಲು ಕೇಂದ್ರ ಸರ್ಕಾರ ಸಂವಿಧಾನಕ್ಕೆ 131ನೇ ತಿದ್ದುಪಡಿ ತರಲು ನಿರ್ಧರಿಸಿದೆ. ಜೊತೆಗೆ ಮುಂದಿನ ಜನಗಣತಿ ಅಂಕಿ ಅಂಶಗಳ ಅನ್ವಯವೇ ಕ್ಷೇತ್ರ ಮರುವಿಂಗಡನೆಗೆ ಆಗಬೇಕು ಎಂದು ಸೂಚಿಸುವ ಸಂವಿಧಾನದ 82ನೇ ವಿಧಿಗೂ ಸರ್ಕಾರ ತಿದ್ದುಪಡಿ ತರಲು ನಿರ್ಧರಿಸಿದೆ. ಈ ಮೂಲಕ 2026ಕ್ಕೆ ಮುನ್ನಾ ಇರುವ ಅಂಕಿ ಅಂಶಗಳನ್ನು ಆಧರಿಸಿ (2011)ಯೇ ಕ್ಷೇತ್ರ ಮರುವಿಂಗಡನೆಯ ಅವಕಾಶ ಪಡೆದುಕೊಳ್ಳಲು ಮುಂದಾಗಿದೆ. ಜೊತೆಗೆ ಈ ತಿದ್ದುಪಡಿ ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆಗೆ ಇದ್ದು ನಂಟನ್ನೂ ಕಡಿಯಲಿದ್ದು, ಸರ್ಕಾರಕ್ಕೆ ತ್ವರಿತವಾಗಿ ಮಹಿಳಾ ಮೀಸಲು ಜಾರಿಗೆ ಅವಕಾಶ ಮಾಡಿಕೊಡಲಿದೆ.

ಸಮಾನುಪಾತದಡಿ ಹಂಚಿಕೆ:

ಕರಡು ವಿಧೇಯಕದಲ್ಲಿ, ಸ್ಥಾನಗಳ ಏರಿಕೆ ಬಳಿಕ ಲೋಕಸಭೆಯ ನಿರ್ದಿಷ್ಟ ಸ್ಥಾನಬಲದ ಬಗ್ಗೆಯಾಗಲೀ ಅಥವಾ ಬಹಳದಿನಗಳಿಂದ ಚರ್ಚೆಯಲ್ಲಿದ್ದ ಹಾಲಿ ಸ್ಥಾನದ ಬಲದ ಶೇ.50ರಷ್ಟು ಏರಿಕೆಯ ಬಗ್ಗೆ ಯಾವುದೇ ಪ್ರಸ್ತಾಪ ಮಾಡಲಾಗಿಲ್ಲ. ಅದರ ಬದಲಾಗಿ ಸಮಾನುಪಾತದಡಿ ಸೀಟು ಹಂಚಿಕೆ ಮಾಡಲಾಗುವುದು ಎನ್ನಲಾಗಿದೆ. ಈ ಲೆಕ್ಕಾಚಾರದಲ್ಲಿ ಜನಸಂಖ್ಯೆ ಕಡಿತ, ಹೆಚ್ಚಿನ ಆರ್ಥಿಕ ಪ್ರಗತಿ, ಜಿಡಿಪಿಗೆ ಪ್ರಗತಿ ಮೊದಲಾದ ಅಂಶಗಳನ್ನೂ ಪರಿಗಣಿಸಿ ಸ್ಥಾನಗಳ ಸಂಖ್ಯೆ ಹೆಚ್ಚಳ ಮಾಡಬೇಕೆಂದು ಬೇಡಿಕೆ ಇಟ್ಟಿದ್ದ ದಕ್ಷಿಣದ ರಾಜ್ಯಗಳಿಗೆ ಹೆಚ್ಚಿನ ಲಾಭವಾಗಬಹುದು ಎಂದು ವಿಶ್ಲೇಷಿಸಲಾಗಿದೆ.

ಈ ಬದಲಾವಣೆ ಕ್ಷೇತ್ರ ಮರುವಿಂಗಡನೆ ಕುರಿತು ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳು ದೊಡ್ಡಮಟ್ಟದ ಎತ್ತಿದ್ದ ಧ್ವನಿಗೆ ಕೇಂದ್ರ ಸರ್ಕಾರ ಸ್ಪಂದಿಸಿದೆ ಎಂದು ಹೇಳಲಾಗಿದೆ.

ಮಹಿಳಾ ಮೀಸಲು:

ಕ್ಷೇತ್ರ ಮರುವಿಂಗಡನೆ ಬಳಿಕ ವಿವಿಧ ರಾಜ್ಯಗಳಿಂದ ಲೋಕಸಭೆಯನ್ನು ಪ್ರತಿನಿಧಿಸುವ 815 ಜನರ ಪೈಕಿ ಮಹಿಳೆಯರಿಗೆ 273 ಸ್ಥಾನಗಳು ಲಭ್ಯವಾಗಲಿವೆ. ಮಹಿಳಾ ಮೀಸಲು ಸ್ಥಾನಗಳನ್ನು ಪ್ರತಿ 15 ವರ್ಷಕ್ಕೊಮ್ಮೆ ಮರುಹಂಚಿಕೆ (ರೋಸ್ಟರ್‌) ಮಾಡಲಾಗುವುದು. ಸದ್ಯ ಜಾರಿಗೊಳ್ಳಲಿರುವ ಮಹಿಳಾ ಮೀಸಲು ಕ್ಷೇತ್ರಗಳು 2033ರವರೆಗೆ ಅಥವಾ ಈ ಸಂಬಂಧ ಕೇಂದ್ರ ಸರ್ಕಾರ ಮುಂದೆ ಹೊರಡಿಸಲಿಸಲಿರುವ ಆದೇಶಗಳಿಗೆ ಒಳಪಟ್ಟಿರಲಿದೆ ಎಂದು ಕರಡು ವಿಧೇಯಕ ಹೇಳಿದೆ.

ಮರುವಿಂಗಡಣೆಗೆ ಆಯೋಗ:

ಕರಡು ವಿಧೇಯಕದ ಅನ್ವಯ, ಸುಪ್ರೀಂ ಕೋರ್ಟ್‌ನ ಹಾಲಿ ಅಥವಾ ನಿವೃತ್ತ ಜಡ್ಜ್‌ ನೇತೃತ್ವದಲ್ಲಿ ಕ್ಷೇತ್ರ ಮರುವಿಂಗಡಣೆ ಆಯೋಗ ರಚನೆಯಾಗಲಿದೆ. ರಾಜ್ಯಗಳ ಮುಖ್ಯ ಚುನಾವಣಾ ಆಯುಕ್ತರು/ ನಾಮನಿರ್ದೇಶಿತ ಚುನಾವಣಾ ಆಯುಕ್ತರು ಮತ್ತು ಸಂಬಂಧಪಟ್ಟ ರಾಜ್ಯದ ಚುನಾವಣಾ ಆಯುಕ್ತರು ಇದರ ಸದಸ್ಯರಾಗಿರುತ್ತಾರೆ.

ಅತ್ತ ಪ್ರತಿ ರಾಜ್ಯದಲ್ಲಿ ರಚಿಸಲಾಗುವ ಸಮಿತಿಯಲ್ಲಿ 10 (ಸ್ಪೀಕರ್‌ಗಳಿಂದ ನಾಮನಿರ್ದೇಶನಗೊಂಡ 5 ಸಂಸತ್ ಸದಸ್ಯರು ಮತ್ತು ವಿಧಾನಸಭೆಯ 5 ಸದಸ್ಯರ) ಜನರಿರಲಿದ್ದಾರೆ. ಆದರೆ ಇವರಿಗೆ ಆಯೋಗದ ನಿರ್ಧಾರಗಳಿಗೆ ಸಹಿ ಹಾಕುವ ಅಥವಾ ಮತದಾನದ ಹಕ್ಕು ಇರುವುದಿಲ್ಲ. ಈ ಸಮಿತಿಗಳು ಭೌಗೋಳಿಕ ಸಾಂದ್ರತೆ, ಆಡಳಿತಾತ್ಮಕ ಗಡಿ, ಸಂವಹನ ಸೌಲಭ್ಯ, ಸಾರ್ವಜನಿಕ ಅನುಕೂಲತೆಯ ಆಧಾರದಲ್ಲಿ ಮರುವಿಂಗಡಣೆ ಕೆಲಸ ಮಾಡಲಿದೆ.

ಆಯೋಗದ ಕರ್ತವ್ಯವೇನು?:

-2011ರ ಜನಗಣತಿಯ ಆಧಾರದಲ್ಲಿ ಲೋಕಸಭೆ, ವಿಧಾನಸಭೆಗಳಲ್ಲಿ ಸ್ಥಾನ ಮರುಹಂಚಿಕೆ ಮಾಡುವುದು.

-ಲೋಕಸಭೆಯಲ್ಲಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಸಿಗಬೇಕಾದ ಸ್ಥಾನಗಳ ಸಂಖ್ಯೆ ನಿರ್ಧಾರ

-ವಿಧಾನಸಭೆಯಲ್ಲಿ ಒಟ್ಟು ಎಷ್ಟು ಸ್ಥಾನಗಳು ಇರಬೇಕೆಂದು ನಿರ್ದೇಶನ

-ಅದರಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಎಷ್ಟು ಸೀಟುಗಳು ಸಿಗಬೇಕೆಂಬ ಲೆಕ್ಕಾಚಾರ

-ಸಂಸದೀಯ ಮತ್ತು ವಿಧಾನಸಭಾ ಕ್ಷೇತ್ರಗಳ ಮಿತಿ ವಿಂಗಡಣೆ

-ಉಭಯ ಸದನಗಳಲ್ಲಿ ಮಹಿಳೆಯರಿಗೆ 3ನೇ 1ರಷ್ಟು ಪ್ರಾತಿನಿಧ್ಯ ಖಚಿತಪಡಿಸುವುದು

ಮಸೂದೆಯಲ್ಲೇನಿದೆ?

- 2011ರ ಜನಗಣತಿ ಅಂಕಿ ಅಂಶ ಆಧರಿಸಿ ವಿವಿಧ ರಾಜ್ಯಗಳಲ್ಲಿನ ಲೋಕಸಭಾ ಸ್ಥಾನ ಗರಿಷ್ಠ 815ಕ್ಕೆ

- ಮತ್ತು ಕೇಂದ್ರಾಡಳಿತ ಪ್ರದೇಶಗಳ ಬಲ ಗರಿಷ್ಠ 35ಕ್ಕೆ ಏರಿಕೆ. ಹೀಗಾಗಿ ಒಟ್ಟು ಸ್ಥಾನ 850ಕ್ಕೆ ಏರಿಕೆ

- ಈ ಏರಿಕೆಗೆ ಅನುವು ಮಾಡಿಕೊಡಲು ಸಂವಿಧಾನಕ್ಕೆ 131ನೇ ತಿದ್ದುಪಡಿ ತರಲು ನಿರ್ಧಾರ

- ಈ ಏರಿಕೆಯ ಅನುಗುಣವಾಗಿ ಒಟ್ಟಾರೆ ಲೋಕಸಭೆ ಕ್ಷೇತ್ರಗಳಲ್ಲಿ ಶೇ.33ರಷ್ಟು ಮಹಿಳಾ ಮೀಸಲು

ದಕ್ಷಿಣದ ವಿರೋಧಕ್ಕೆ ಮಣೆ?

- ಈ ಮುನ್ನ ಆಯಾ ರಾಜ್ಯಗಳ ಒಟ್ಟು ಕ್ಷೇತ್ರಗಳ ಸಂಖ್ಯೆಯ ಶೇ.50ರಷ್ಟು ಹೆಚ್ಚಿಸುವ ನಿರ್ಧಾರ ಆಗಿತ್ತು

- ಇದರಿಂದ ಉತ್ತರ ಪ್ರದೇಶದಂಥ ದೊಡ್ಡ ರಾಜ್ಯಗಳ ಲೋಕಸಭೆ ಕ್ಷೇತ್ರ ಸಂಖ್ಯೆ ಭಾರಿ ಹೆಚ್ಚಳ ಆಗುತ್ತಿತ್ತು

- ಇದಕ್ಕೆ ಹೋಲಿಸಿದರೆ ಕರ್ನಾಟಕದಂಥ ದಕ್ಷಿಣ ರಾಜ್ಯಗಳ ಕ್ಷೇತ್ರಗಳ ಸಂಖ್ಯೆ ಹೆಚ್ಚಳ ಕಮ್ಮಿ ಆಗುತ್ತಿತ್ತು

- ಹೀಗಾಗಿ ಉತ್ತರಕ್ಕೆ ಹೋಲಿಸಿದರೆ ದಕ್ಷಿಣ ರಾಜ್ಯಗಳ ಪ್ರಾತಿನಿಧ್ಯ ಕುಸಿಯಲಿದೆ ಎಂದಿದ್ದ ದಕ್ಷಿಣ ರಾಜ್ಯಗಳು

- ಇದೀಗ ಶೇ.50ರಷ್ಟು ಸೀಟು ಹೆಚ್ಚಳ ಪ್ರಸ್ತಾಪ ಮಸೂದೆಯಲ್ಲಿಲ್ಲ. ಸಮಾನುಪಾತ ಆಧರಿಸಿ ಸೀಟು ಏರಿಕೆ

- ಆದ್ದರಿಂದ, ಕರ್ನಾಟಕ ಸೇರಿದಂತೆ ದಕ್ಷಿಣ ರಾಜ್ಯಗಳ ವಿರೋಧಕ್ಕೆ ಕೇಂದ್ರ ಮಣಿಯಿತೆ ಎಂಬ ವಿಶ್ಲೇಷಣೆ