ಜೆಹಾನಾಬಾದ್‌(ಏ.12): ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬಿಹಾರದ ಜೆಹಾನಾಬಾದ್‌ನಲ್ಲಿರುವ ಸರ್ಕಾರಿ ಆಸ್ಪತ್ರೆಯೊಂದು ಆ್ಯಂಬುಲೆನ್ಸ್‌ ನಿರಾಕರಿಸಿದ ಕಾರಣ ಮಹಿಳೆ ಮತ್ತು ಆಕೆಯ ಪತಿ ಮೂರು ವರ್ಷದ ಮಗುವಿನ ಮೃತ ದೇಹವನ್ನು ಹೊತ್ತು ಅನಿವಾರ್ಯವಾಗಿ 48 ಕಿ.ಮೀ. ನಡೆದ ದಾರುಣ ಘಟನೆ ನಡೆದಿದೆ.

ಮಗುವಿಗೆ ಎರಡು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿತ್ತು. ಗ್ರಾಮದ ಸ್ಥಳೀಯ ಆಸ್ಪತ್ರೆಯಲ್ಲಿ ನೀಡಿದ ಚಿಕಿತ್ಸೆ ಫಲಿಸದ ಕಾರಣ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಕಾಯಿಲೆ ಬಿದ್ದ ಮಗುವನ್ನು ಚಿಕಿತ್ಸೆ ಕೊಡಿಸಲು ತಂದೆ ಮತ್ತು ತಾಯಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಬೇಕಾದ ಸ್ಥಿತಿ ಎದುರಾಯಿತು.

ಸೈಕಲ್‌ನಲ್ಲೇ 2000 ಕಿ.ಮೀ. ದೂರದ ಊರು ತಲುಪಿದ!

ಆ್ಯಂಬುಲೆನ್ಸ್‌ ಸಿಗದೇ ಇದ್ದ ಕಾರಣ ಟೆಂಪೋ ಮಾಡಿಕೊಂಡು ಜೆಹಾನಾಬಾದ್‌ನ ಆಸ್ಪತ್ರೆಯೊಂದಕ್ಕೆ ಮಗುವನ್ನು ದಾಖಲಿಸಲಾಗಿತ್ತು. ಅಲ್ಲಿನ ವೈದ್ಯರು ಮಗುವನ್ನು ಪಟನಾ ಮೆಡಿಕಲ್‌ ಕಾಲೇಜಿಗೆ ಸೇರಿಸುವಂತೆ ಸೂಚಿಸಿದರು. ಆದರೆ, ಆ್ಯಂಬುಲೆನ್ಸ್‌ನ ವ್ಯವಸ್ಥೆ ಮಾಡಿಕೊಡಲಿಲ್ಲ. ಮಗು ದಾರಿ ಮಧ್ಯೆಯೇ ಕಣ್ಣು ಮುಚ್ಚಿತು. ಪೋಷಕರು ಮಗುವಿನ ಮೃತ ದೇಹವನ್ನು ಹೊತ್ತು 48 ಕಿ.ಮೀ. ನಡೆದಿದ್ದಾರೆ. ಬಳಿಕ ಸ್ಥಳೀಯರ ಸಹಾಯದಿಂದ ಮನೆಯನ್ನು ತಲುಪಿದ್ದಾರೆ.