ಹೈದರಾಬಾದ್‌ನ ಚಾರ್ಮಿನಾರ್ ಬಳಿ ಇರುವ ಗುಲ್ಜಾರ್ ಹೌಸ್‌ನಲ್ಲಿ ನಡೆದ ಭೀಕರ ಅಗ್ನಿ ದುರಂತದಲ್ಲಿ 17 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ತಾಯಿ ಮಗುವಿನ ದೃಶ್ಯ ಮನಕಲುಕುತ್ತಿದೆ. ಮಗುವನ್ನು ಬೆಂಕಿಯ ಕೆನ್ನಾಲಗೆಯಿಂದ ರಕ್ಷಿಸಲು ತಾಯಿ ತಬ್ಬಿಕೊಂಡಿದ್ದಾರೆ. ಆದರೆ ಇಬ್ಬರೂ ಸುಟ್ಟು ಕರಕಲಾಗಿದ್ದಾರೆ. 

ಹೈದರಾಬಾದ್(ಮೇ.18) ಹೈದರಾಬಾದ್ ಬೆಂಕಿ ಅವಘಡದ ಒಂದೊಂದು ಚಿತ್ರಣ ಭೀಕರತೆಯನ್ನು ಸಾರಿ ಹೇಳುತ್ತಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಸಂಭವಿಸಿದ ಬೆಂಕಿ ಅವಘಡದಲ್ಲಿ 17 ಮಂದಿ ಬೆಂದು ಸುಟ್ಟು ಕರಕಲಾಗಿದ್ದಾರೆ. ಹೈದರಾಬಾದ್‌ನ ಚಾರ್ಮಿನಾರ್ ಬಳಿ ಇರುವ ಗುಲ್ಜಾರ್ ಹೌಸ್‌ನಲ್ಲಿ ನಡೆದ ಈ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿದೆ. ಈ ಘಟನೆಯಲ್ಲಿ ತಾಯಿ ಹಾಗೂ ಮಗುವಿನ ಸುಟ್ಟು ಕರಕಲಾದ ಮೃತದೇಹವನ್ನು ಹೊರಕ್ಕೆ ತೆಗೆಯಲಾಗಿದೆ. ಬೆಂಕಿಯಿಂದ ಮಗುವನ್ನು ರಕ್ಷಿಸಲು ತಾಯಿ ಹರಹಾಸ ಪಟ್ಟಿದ್ದಾಳೆ. ಕೊನೆಗೆ ಬೆಂಕಿಯ ಕೆನ್ನಾಲಗೆ ಮಗುವಿಗೆ ತಾಗದಿರಲಿ ಎಂದು ಮಗುವಿನ್ನು ಅಪ್ಪಿಕೊಂಡಿದ್ದಾಳೆ. ಆದರೆ ಅಗ್ನಿ ಅವಘಡದಲ್ಲಿ ಹೊರಗೆ ಬರಲು ಆಗದೇ, ಇರಲು ಆಗದೆ ಇಬ್ಬರು ಸುಟ್ಟು ಕರಕಲಾಗಿದ್ದಾರೆ. 

ಬೆಂಕಿಯ ಕೆನ್ನಾಲಗೆ ನಡುವೆ ರಕ್ಷಣಾ ಕಾರ್ಯ
ಗುಲ್ಜಾರ್ ಹೌಸ್‌ನಲ್ಲಿ ಅಗ್ನಿಅವಘಡವಾಗುತ್ತಿದ್ದಂತೆ ಸ್ಥಳೀಯರ ನೆರವಿಗೆ ಧಾವಿಸಿದ್ದರೆ. ಆದರೆ ಬೆಂಕಿ ಕೆನ್ನಾಲಗೆಯಿಂದ ತಕ್ಷಣವೇ ರಕ್ಷಣೆ ಸಾಧ್ಯವಾಗಲಿಲ್ಲ. ಅಗ್ನಿಶಾಮಕ ದಳ ಬೆಂಕಿ ಸಂಪೂರ್ಣವಾಗಿ ಆರಿಸುವ ಮೊದಲೇ ರಕ್ಷಣಾ ಕಾರ್ಯ ನಡೆದಿತ್ತು. ಈ ವೇಳೆ ರಕ್ಷಣೆಗೆ ಧಾವಿಸಿದ್ದ ಸ್ಛಳೀಯ ವ್ಯಕ್ತಿ ಜಹೀರ್ ಕಂಡ ದೃಶ್ಯವನ್ನು ನೋವಿನಿಂದ ವಿವರಿಸಿದ್ದಾರೆ. 

ಅಪ್ಪಿಕೊಂಡಿದ್ದ ತಾಯಿ ಮಗು ಮೃತದೇಹ
ಬೆಂಕಿ ವ್ಯಾಪಿಸುತ್ತಿದ್ದಂತೆ ಒಂದಷ್ಟು ಮಂದಿ ರಕ್ಷಣೆಗೆ ತೆರಳಿದ್ದೆವು. ನಾವು ಬೆಂಕಿಯಲ್ಲಿ ಸಿಲುಕಿರುವ ಮಂದಿಯನ್ನು ರಕ್ಷಿಸಲು ಮುಂದಾಗಿದ್ದೇವೆ. ಒಂದು ಬಂದಿಯಿಂದ ರಕ್ಷಣಾ ಕಾರ್ಯ ನಡೆಯುತ್ತಿತ್ತು. ನಾನು ಒಂದು ಮನೆಯೊಳಗೆ ಪ್ರವೇಶಿಸುವಾಗ ಕಂಡ ದೃಶ್ಯ ನನ್ನ ಆತ್ಮವಿಶ್ವಾಸವನ್ನೇ ಕುಗ್ಗಿಸಿತ್ತು. ತಾಯಿ ತನ್ನ ಮಗುವನ್ನು ಬೆಂಕಿಯಿಂದ ರಕ್ಷಿಸಲು ಎಲ್ಲಾ ಪ್ರಯತ್ನ ಮಾಡಿದ್ದಳು. ಮಗುವಿಗೆ ಬೆಂಕಿ ಸೋಕದಂತೆ ಕೊನೆಗೆ ಅಪ್ಪಿಕೊಂಡು ಹೊರಬರುವ ಪ್ರಯತ್ನ ಮಾಡಿದ್ದಾಳೆ. ಆದರೆ ಬೆಂಕಿಯ ತೀವ್ರತೆಗೆ ಇಬ್ಬರು ಸುಟ್ಟು ಕರಕಲಾಗಿದ್ದಾರೆ. ಅಪ್ಪಿಕೊಂಡಿರುವ ತಾಯಿ ಮಗುವಿನ ಮೃತದೇಹ ತೀವ್ರ ನೋವು ತರಿಸಿತ್ತು ಎಂದು ಜಹೀರ್ ಹೇಳಿದ್ದಾರೆ.

ಬೆಳಿಗ್ಗೆ 6.16ಕ್ಕೆ ಅಗ್ನಿ ಅವಘಡದ ಬಗ್ಗೆ ಮಾಹಿತಿ ಬಂದ ಕೂಡಲೇ 6.17ಕ್ಕೆ ಮೊಘಲ್‌ಪುರದಿಂದ ಅಗ್ನಿಶಾಮಕ ದಳ ಧಾವಿಸಿ 6.20ಕ್ಕೆ ಸ್ಥಳಕ್ಕೆ ತಲುಪಿತು. 11 ಅಗ್ನಿಶಾಮಕ ವಾಹನಗಳು ಮತ್ತು ಒಂದು ರೋಬೋಟ್ ಸಹಾಯದಿಂದ 70 ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದರು. ಶಾರ್ಟ್ ಸರ್ಕ್ಯೂಟ್‌ನಿಂದ ಅವಘಡ ಸಂಭವಿಸಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.

ಚಾರ್ಮಿನಾರ್ ಗುಲ್ಜಾರ್ ಹೌಸ್ ಅಗ್ನಿ ಅವಘಡಕ್ಕೆ ಪ್ರಧಾನಿ ಮೋದಿ ಸಂತಾಪ
ಹೈದರಾಬಾದ್‌ನ ಚಾರ್ಮಿನಾರ್‌ನಲ್ಲಿರುವ ಗುಲ್ಜಾರ್ ಹೌಸ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಗಾಯಾಳುಗಳಿಗೆ ತಲಾ 50,000 ರೂ. ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.