ತೆಲಂಗಾಣದಲ್ಲಿ ಮಹಿಳೆಯೊಬ್ಬರು ರೈಲ್ವೆ ಹಳಿಯಲ್ಲಿ ಕಾರು ಚಲಾಯಿಸಿ ಆತಂಕ ಸೃಷ್ಟಿಸಿದ್ದಾರೆ. ಹಲವು ರೈಲುಗಳ ಸಂಚಾರಕ್ಕೆ ಅಡಚಣೆಯುಂಟಾಯಿತು. ಮಹಿಳೆಯನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.

ಹೈದರಬಾದ್‌ (ಜೂ.26): ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ, 34 ವರ್ಷದ ಮಹಿಳೆಯೊಬ್ಬರು ತಮ್ಮ ಕಾರ್‌ಅನ್ನು ರೈಲ್ವೆ ಟ್ರ್ಯಾಕ್‌ ಮೇಲೆ ಸಲೀಸಾಗಿ ರೈಡ್‌ ಮಾಡಿದ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿದೆ. ಇದು ರೈಲ್ವೆ ನಿಲ್ದಾಣದಲ್ಲಿದ್ದ ಉದ್ಯೋಗಿಗಳ ಆತಂಕಕ್ಕೆ ಕಾರಣವಾಯಿತು. ಈಕೆ ಮಾಡಿದ ಹುಚ್ಚು ಸಾಹಸದಿಂದಾಗಿ ನಿಲ್ದಾಣಕ್ಕೆ ಬರಬೇಕಿದ್ದ 10-15 ರೈಲುಗಳನ್ನು ರದ್ದು ಮಾಡಲಾಗಿದ್ದು, ಕೆಲವನ್ನು ಬೇರೆ ಮಾರ್ಗಕ್ಕೆ ಬದಲಾಯಿಸಲಾಗಿದೆ.

ಶಂಕರಪಲ್ಲಿ ಬಳಿ ನಡೆದ ಈ ಘಟನೆಯ ಕೆಲವು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. 13 ಸೆಕೆಂಡುಗಳ ವೀಡಿಯೊದಲ್ಲಿ, ಮಹಿಳೆ ಕಿಯಾ ಸೋನೆಟ್ ಕಾರನ್ನು ರೈಲ್ವೆ ಹಳಿಯ ಮೇಲೆ ರೈಡ್‌ ಮಾಡುತ್ತಿರುವುದು ಕಂಡು ಬಂದಿದೆ.

Scroll to load tweet…

ಎರಡನೇ ವೀಡಿಯೊದಲ್ಲಿ, ಸ್ಥಳೀಯರು, ರೈಲ್ವೆ ನೌಕರರು ಮತ್ತು ಪೊಲೀಸರು ಮಹಿಳೆಯನ್ನು ಕಾರಿನಿಂದ ಹೊರಗೆಳೆಯಲು ಪ್ರಯತ್ನಿಸುತ್ತಿರುವುದು ಕಂಡುಬರುತ್ತದೆ. ಗುಂಪೊಂದು ಆಕೆಯನ್ನು ಕಾರಿನಿಂದ ಕೆಳಗಿಳಿಸಿದ ನಂತರ ಆಕೆಯ ಕೈಗಳನ್ನು ಕಟ್ಟಿಹಾಕಿದ್ದು ಕಂಡುಬಂದಿದೆ. ಮಹಿಳೆ ಹೀಗೆ ಮಾಡಲು ಕಾರಣವೇನು, ಆಕೆಯ ಮಾನಸಿಕ ಸ್ಥಿತಿ ಹೇಗಿತ್ತು ಎನ್ನುವುದರ ಕುರಿತು ರೈಲ್ವೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ.

ಮಹಿಳೆಯನ್ನು ಕಾರ್‌ನಿಂದ ಹೊರಗೆಳೆದ 20 ಜನ

ಮೂಲಗಳ ಪ್ರಕಾರ, 'ಹಲವಾರು ರೈಲ್ವೆ ನೌಕರರು ಮತ್ತು ಪೊಲೀಸರು ಕಾರಿನ ಹಿಂದೆ ಸಾಕಷ್ಟು ದೂರ ಓಡಿಸಿದ್ದಾರೆ. ಬಹಳ ಕಷ್ಟಪಟ್ಟು ಅವರು ಕಾರನ್ನು ನಿಲ್ಲಿಸುವಲ್ಲಿ ಯಶಸ್ವಿಯಾದರು. ಮಹಿಳೆಯನ್ನು ಕಾರಿನಿಂದ ಹೊರಗೆಳೆಯಲು ಸುಮಾರು 20 ಜನರ ಸಹಾಯ ಬೇಕಿತ್ತು. ಅವಳು ಸ್ವಲ್ಪವೂ ಸಹಕರಿಸುತ್ತಿರಲಿಲ್ಲ.' ಎಂದು ತಿಳಿಸಿದ್ದಾರೆ. ರೈಲ್ವೆ ಪೊಲೀಸ್ ವರಿಷ್ಠಾಧಿಕಾರಿ ಚಂದನಾ ದೀಪ್ತಿ ಮಾತನಾಡಿ, ಆರಂಭಿಕ ತನಿಖೆಯಲ್ಲಿ ಮಹಿಳೆ ಇತ್ತೀಚಿನವರೆಗೂ ಎಂಎನ್‌ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಅವರು ಉತ್ತರ ಪ್ರದೇಶದ ನಿವಾಸಿ. ಅವರು ತುಂಬಾ ಆಕ್ರಮಣಕಾರಿಯಾಗಿ ವರ್ತಿಸುತ್ತಿದ್ದರು. ಅವರು ಮಾನಸಿಕವಾಗಿ ಅಸ್ಥಿರರಾಗಿದ್ದರು ಎಂದು ತೋರುತ್ತದೆ ಎಂದಿದ್ದಾರೆ.

ಸಾಯುವ ಪ್ರಯತ್ನ ಎಂದು ಪರಿಗಣಿಸಿದ ಪೊಲೀಸರು

ಮಹಿಳೆಯ ಚಾಲನಾ ಪರವಾನಗಿ ಮತ್ತು ಪ್ಯಾನ್ ಕಾರ್ಡ್ ಅನ್ನು ಆಕೆಯ ಕಾರ್‌ಅನ್ನು ವಶಪಡಿಸಿಕೊಂಡಿದ್ದೇವೆ ಎಂದು ಸೂಪರಿಂಟೆಂಡೆಂಟ್ ಚಂದನಾ ದೀಪ್ತಿ ತಿಳಿಸಿದ್ದಾರೆ. ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳಲು ಯೋಜಿಸುತ್ತಿದ್ದಳೇ ಮತ್ತು ಇಡೀ ಘಟನೆಯನ್ನು ಕೊಲೆಯಂತೆ ಬಿಂಬಿಸುವ ಪ್ರಯತ್ನ ನಡೆದಿದೆಯೇ ಎಂದು ಪೊಲೀಸರು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ರೈಲ್ವೆ ಮೂಲಗಳ ಪ್ರಕಾರ, ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರು-ಹೈದರಾಬಾದ್ ರೈಲು ಸೇರಿದಂತೆ ಕನಿಷ್ಠ 10 ರಿಂದ 15 ಪ್ಯಾಸೆಂಜರ್ ರೈಲುಗಳನ್ನು ಬೇರೆಡೆಗೆ ತಿರುಗಿಸಲಾಗಿದೆ. ಪ್ರಸ್ತುತ, ಮಹಿಳೆಯನ್ನು ವಶಕ್ಕೆ ಪಡೆಯಲಾಗಿದೆ. ಈ ವಿಷಯ ತನಿಖೆಯಲ್ಲಿದೆ.