Asianet Suvarna News Asianet Suvarna News

ಮೆಟ್ರೋದಲ್ಲಿ ಪ್ರತ್ಯಕ್ಷಳಾದ ನಾಗವಲ್ಲಿಯಿಂದ ಪ್ರಯಾಣಿಕರಿಗೆ ಕಿರುಕುಳ : ವಿಡಿಯೋ ವೈರಲ್

ಮೆಟ್ರೋ ಏರಿದ ನಾಗವಲ್ಲಿ ವೇಷಧಾರಿ ಯುವತಿಯೊಬ್ಬಳು ಮೆಟ್ರೋದಲ್ಲಿ ಕುಳಿತು ಸಂಚರಿಸುತ್ತಿದ್ದ ಪ್ರಯಾಣಿಕರನ್ನು ವಿಚಿತ್ರವಾಗಿ ಕಿರುಚಿ ಬೊಬ್ಬೆ ಹಾಕುವ ಮೂಲಕ ಬೆದರಿಸಿದ್ದಾಳೆ.  ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

woman dressed as nagavalli and scared passengers in Metro at Noida watch video which goes viral in social Media akb
Author
First Published Jan 24, 2023, 3:51 PM IST

ಆಪ್ತಮಿತ್ರ ಸಿನಿಮಾದ ನಾಗವಲ್ಲಿ ಯಾರಿಗೆ ಗೊತ್ತಿಲ್ಲ ಹೇಳಿ, ನಾಗವಲ್ಲಿ ಸಿನಿಮಾ ನೋಡಿದ ನಂತರ ಮನೆ ಮಂದಿಯ ಝೆಲ್ ಝೆಲ್ ಗೆಜ್ಜೆ ಸದ್ದಿಗೆ ಹಾಲ್‌ನಿಂದ ಅಡುಗೆ ರೂಮ್‌ಗೆ ಹೋಗಲು ಭಯಪಡುತ್ತಿದ್ದ ಆ ಸಂದರ್ಭವನ್ನು ನೆನಪು ಮಾಡುವಂತಹ ಘಟನೆಯೊಂದು ನಡೆದಿದೆ.  ಅದೂ ನೋಯ್ಡಾದ ಮೆಟ್ರೋದಲ್ಲಿ. ಮೆಟ್ರೋ ಏರಿದ ನಾಗವಲ್ಲಿ ವೇಷಧಾರಿ ಯುವತಿಯೊಬ್ಬಳು ಮೆಟ್ರೋದಲ್ಲಿ ಕುಳಿತು ಸಂಚರಿಸುತ್ತಿದ್ದ ಪ್ರಯಾಣಿಕರನ್ನು ವಿಚಿತ್ರವಾಗಿ ಕಿರುಚಿ ಬೊಬ್ಬೆ ಹಾಕುವ ಮೂಲಕ ಬೆದರಿಸಿದ್ದಾಳೆ.  ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅನೇಕರು ಈ ಯುವತಿಯ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಇತ್ತೀಚೆಗೆ ಸಾರ್ವಜನಿಕ ಸ್ಥಳಗಳಲ್ಲಿ ಸೋಶಿಯಲ್ ಮೀಡಿಯಾ (Social Media Star) ಸ್ಟಾರ್‌ಗಳ ಹಾವಳಿ ಹೆಚ್ಚಾಗಿದ್ದು, ಇದರಿಂದ ಇತರರಿಗೆ ತೊಂದರೆ ಉಂಟಾಗುತ್ತಿದೆ.  ನಿನ್ನೆಯಷ್ಟೇ ಯುವತಿಯೊಬ್ಬಳು ಗಾಜಿಯಾಬಾದ್‌ನಲ್ಲಿ (Ghaziabad) ಹೆದ್ದಾರಿ ಮಧ್ಯೆ ಕಾರು ನಿಲ್ಲಿಸಿ ರೀಲ್ಸ್ ಮಾಡಲು ಶುರು ಮಾಡಿದ್ದಳು. ಇದರಿಂದ ಸಂಚಾರ ದಟ್ಟಣೆಗೆ ಕಾರಣವಾಗಿದ್ದು, ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ಆಕೆಗೆ 17 ಸಾವಿರ ರೂಪಾಯಿ ದಂಡ ವಿಧಿಸಿದ್ದರು. ಈ ಘಟನೆ ಮಾಸುವ ಮೊದಲೇ ಈಗ ನೋಯ್ಡಾದಲ್ಲಿ ಯುವತಿಯೊಬ್ಬಳು ನಾಗವಲ್ಲಿ ರೂಪ ತಾಳಿ ಪ್ರಯಾಣಿಕರನ್ನು ಬೆದರಿಸಿದ್ದಾಳೆ.

ಸ್ನಾನದ ಟವೆಲ್ ಸುತ್ಕೊಂಡು ಮೆಟ್ರೋದಲ್ಲಿ ಬಂದ ಯುವಕ: ಜನರ ರಿಯಾಕ್ಷನ್ ನೋಡಿ

ಹಳದಿ ಹಾಗೂ ಕೆಂಪು ಬಣ್ಣದ  ಭರತನಾಟ್ಯದ (Bharatanatyam costume) ವೇಷಧರಿಸಿದ ಯುವತಿ ಅದಕ್ಕೆ ತಕ್ಕಂತೆ ಉದ್ದ ಜೆಡೆಯನ್ನು ಸೆಟ್ ಮಾಡಿಕೊಂಡಿದ್ದು, ಮೆಟ್ರೋದಲ್ಲಿ ಇದ್ದಕ್ಕಿದ್ದಂತೆ ವಿಚಿತ್ರವಾಗಿ ಆಡಲು ಶುರು ಮಾಡಿದ್ದಾಳೆ.  ತನ್ನ ಕೂದಲನ್ನು ಎಳೆದಾಡಿ ಚೆಲ್ಲು ಚೆಲ್ಲಾಗಿಸಿಕೊಂಡು ಹಾಕಿರುವ ಮೇಕಪ್ ಕೂಡ ಚದುರಿದಂತೆ ಮಾಡಿಕೊಂಡು ಆಕೆ ಕಿರುಚಲು ಶುರು ಮಾಡಿದ್ದಾಳೆ. ಈ ವೇಳೆ ಕೆಲ ಪ್ರಯಾಣಿಕರು ಆಕೆಯ ಅವತಾರಕ್ಕೆ  ಬೆಚ್ಚಿದ್ದಲ್ಲದೇ ಓರ್ವನಂತೂ ಆ ಸ್ಥಳದಿಂದಲೇ ಓಡಿ ಹೋಗಿದ್ದಾನೆ.  ಕಿವಿಗೆ ಇಯರ್ ಫೋನ್ ಹಾಕಿಕೊಂಡು ಮೊಬೈಲ್ ನೋಡುತ್ತಿದ್ದ ಯುವಕನೋರ್ವ ಸೀಟಿನಲ್ಲಿ ಕುಳಿತುಕೊಂಡಿದ್ದು, ಆಕೆಯತ್ತ ಗಮನ ಹರಿಸಿಲ್ಲ. ಕೂಡಲೇ ಅವನತ್ತ ಹೋದ ಆಕೆ  ಆತನನ್ನು ಕೈಯಿಂದ ದೂಡಿ ದೂರ ತಳ್ಳಿದ್ದಾಳೆ. ಈ ವೇಳೆ ಮೊಬೈಲ್‌ನಿಂದ ತಲೆ ಎತ್ತಿ ಆಕೆಯನ್ನು ನೋಡಿದ ಆತ ಕೂಡಲೇ ಅಲ್ಲಿಂದ ಎದ್ದು ದೂರ ಓಡಿದ್ದಾನೆ.  ನಂತರ ಆ ಸ್ಥಳದಲ್ಲಿ ಆಕೆ ಕುಳಿತಿದ್ದು,  ತಲೆಯನ್ನು ಅತ್ತಿತ್ತ ಹೊರಳಿಸುತ್ತ ವಿಚಿತ್ರವಾಗಿ ನೋಡುತ್ತಿರುವುದರೊಂದಿಗೆ ವಿಡಿಯೋ ಕೊನೆಗೊಳ್ಳುತ್ತದೆ. 

ಇದೇ ರೈಲಿನಲ್ಲಿ ಮತ್ತೊರ್ವ ನೆಟ್‌ಫ್ಲಿಕ್ಸ್‌ನ ಮನಿ ಹೇಸ್ಟ್ ಶೋದಿಂದ ಪ್ರಭಾವಿತಗೊಂಡು ಅದರಂತೆ ವೇಷ ಧರಿಸಿ ಮೆಟ್ರೋದ ಮತ್ತೊಂದು ಕಂಪಾರ್ಟ್‌ಮೆಂಟ್‌ನಿಂದ ನಡೆದುಕೊಂಡು ಬರುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತಿದೆ.  ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಅನೇಕರು ಈ ವಿಡಿಯೋವನ್ನು ಪೊಲೀಸ್ ಇಲಾಖೆಗೆ ಟ್ಯಾಗ್ ಮಾಡಿದ್ದಾರೆ. ಅಧಿಕಾರಿಗಳು ಈ ರೀತಿ ಮೆಟ್ರೋದಲ್ಲಿ ಕಪಿಗಳಂತೆ ವರ್ತಿಸಿದವರು ಯಾರು ಎಂಬುದನ್ನು ಪತ್ತೆ ಮಾಡುತ್ತಿದ್ದಾರೆ.  ಅಲ್ಲದೇ ಇವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿಯೂ ಹೇಳಿದ್ದಾರೆ. ಆದಾಗ್ಯೂ ಈ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.  ಕೆಲವರು ಈ ವಿಡಿಯೋವನ್ನು ಹಾನಿ ಮಾಡದ ಖುಷಿ ನೀಡುವ ವಿಡಿಯೋ ಎಂದು ಕಾಮೆಂಟ್ ಮಾಡಿದ್ದಾರೆ.  ಆದರೆ ಮತ್ತೆ ಕೆಲವರು ಇದು  ಪ್ರಯಾಣಿಕರಿಗೆ ಮಕ್ಕಳಿಗೆ ತೊಂದರೆ ಮಾಡಿದೆ ಎಂದು ಯುವತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ರೀಲ್‌ಗಾಗಿ ಹೆದ್ದಾರಿಯಲ್ಲಿ ಕಾರು ನಿಲ್ಲಿಸಿ ಸಂಚಾರಕ್ಕೆ ಅಡ್ಡಿ: ಇನ್ಸ್ಟಾ ಸ್ಟಾರ್‌ಗೆ ದಂಡ

ಬಾತ್ ಟವೆಲ್ ಸುತ್ತಿಕೊಂಡು ಮೆಟ್ರೋದಲ್ಲಿ ಸಂಚರಿಸಿದ ಯುವಕ 

ಸಾಮಾಜಿಕ ಜಾಲತಾಣಗಳಲ್ಲಿ ತಮಾಷೆಯಿಂದ ಕೂಡಿದ ವಿಡಿಯೋಗಳಿಗೆ ಬರವೇ ಇಲ್ಲ. ಬೋರಾಯ್ತು ಅಂತ ಇನ್ಸ್ಟಾಗ್ರಾಮ್ ಒಪನ್ ಮಾಡಿದ್ರೆ ಲಕ್ಷಾಂತರ ತಮಾಷೆಯ ವಿಡಿಯೋಗಳನ್ನು ಅಲ್ಲಿ ನೋಡಬಹುದಾಗಿದೆ. ಡಿಜಿಟಲ್ ಕಂಟೆಂಟ್ ಕ್ರಿಯೇಟರ್‌ಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಒಂದು ಲೈಕ್ಸ್ ಒಂದು ಕಾಮೆಂಟ್, ಶೇರಿಂಗ್‌ಗಾಗಿ ಬಾಯ್ಬಿಡುತ್ತಿರುತ್ತಾರೆ. ವೀಕ್ಷಕರ ಮೆಚ್ಚುಗೆ ಗಳಿಸಲು ಇನ್ನಿಲ್ಲದ ಹರ ಸಾಹಸ ಮಾಡುತ್ತಾರೆ. ಬಹುಶಃ ಇದೇ ಕಾರಣಕ್ಕೆ ಇರಬೇಕು ಏನು ಯುವಕನೋರ್ವ ಬಾತ್ ಟವೆಲ್ ಸುತ್ತಿಕೊಂಡು ಮೆಟ್ರೋ ಏರಿದ್ದಾನೆ. ಈತನನ್ನು ನೋಡಿದ ಜನ ಬಿದ್ದು ಬಿದ್ದು ನಗುತ್ತಿದ್ದಾರೆ. ಕೆಲ ದಿನಗಳ ಹಿಂದೆ ಮೆಟ್ರೋದಲ್ಲಿ ಸೆರೆಯಾದ ಈ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು.

 

Follow Us:
Download App:
  • android
  • ios