ರಾಪಿಡೋ ಚಾಲಕನ ದೇಹದಾಕಾರವನ್ನು ನೋಡಿ ಮಹಿಳೆಯೊಬ್ಬರು ಟ್ರಿಪ್ ರದ್ದುಗೊಳಿಸಿ, ವೀಡಿಯೊ ಮಾಡಿ ಅಣಕಿಸಿದ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಒಬ್ಬೊಬ್ಬರ ದೇಹ ಪ್ರಕೃತಿ ಒಂದೊಂದು ರೀತಿ ಇರುತ್ತದೆ. ಕೆಲವರು ಸಣ್ಣಗಿರುತ್ತಾರೆ ಮತ್ತೆ ಕೆಲವರು ದಪ್ಪಗಿರುತ್ತಾರೆ. ಕಪ್ಪಗಿರುತ್ತಾರೆ ಕುಳ್ಳಗಿರುತ್ತಾರೆ ಆದರೆ ದೇವರ ಪಾಲಿಗೆ ಎಲ್ಲರೂ ಒಂದೇ ಆತನ ಸೃಷ್ಟಿಯಲ್ಲಿ ಹುಳುಕು ಎಂಬುದಿಲ್ಲ, ಆದರೆ ಕೆಲ ಜನರ ಮನಸ್ಸಿನಲ್ಲಿರುವ ಹುಳುಕು ಕೆಡುಕುಗಳಿಗೆ ಅಂತ್ಯವೆಂಬುದೇ ಇಲ್ಲ, ಅದಕ್ಕೊಂದು ಉತ್ತಮ ಉದಾಹರಣೆ ಈ ಘಟನೆ. ಇಲ್ಲೊಬ್ಬರು ಮಹಿಳೆ ರಾಪಿಡೋ ಬೈಕ್ ಬುಕ್ ಮಾಡಿದ್ದಾಳೆ. ರಾಪಿಡೋ ಚಾಲಕ ಆಕೆಯನ್ನು ಪಿಕ್ ಮಾಡಲು ಬಂದಿದ್ದಾನೆ. ಆದರೆ ಆತನನ್ನು ಮನೆಯ ಕಿಟಕಿಯಿಂದಲೇ ನೋಡಿದ ಆಕೆ ಆತ ದಪ್ಪ ಇರುವುದನ್ನು ನೋಡಿ , ನಾನು ಕುಳಿತುಕೊಳ್ಳುವುದು ಎಲ್ಲಿ ಎಂದು ಹೇಳಿ ಟ್ರಿಪ್ ಕ್ಯಾನ್ಸಲ್ ಮಾಡಿದ್ದು, ಜೊತೆಗೆ ಆತನ ವೀಡಿಯೋ ಮಾಡಿ ಅಣಕವಾಡುವ ಪೋಸ್ಟನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ಈ ವೀಡಿಯೋಗೆ ಈಗ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಮಹಿಳೆಯ ವರ್ತನೆಗೆ ನೆಟ್ಟಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸವಾರ ದಪ್ಪ ಇದ್ದಾನೆ ಅಂತ ಬುಕ್ಕಿಂಗ್ ಕ್ಯಾನ್ಸಲ್:
ರಾಪಿಡೋ ಸವಾರ ಎಲ್ಲಾ ಜಾಗವನ್ನು ಆಕ್ರಮಿಸಿಕೊಂಡಿದ್ದರಿಂದ ಮತ್ತು ತನಗಾಗಿ ಜಾಗವಿಲ್ಲದ ಕಾರಣ ತನ್ನ ರಾಪಿಡೋ ಸವಾರಿಯನ್ನು ರದ್ದುಗೊಳಿಸಬೇಕಾಯಿತು ಎಂದು ಆ ಮಹಿಳೆ ಹೇಳಿಕೊಂಡಿದ್ದಾಳೆ. ಆದರೆ ಮಹಿಳೆ ಮರ್ಯಾದೆಯಿಂದ ಟ್ರಿಪ್ ಕ್ಯಾನ್ಸಲ್ ಮಾಡಿ ಸುಮ್ಮನಿರಬಹುದಿತ್ತು. ಆತನನ್ನು ಆತನಿಗೆ ತಿಳಿಯದಂತೆ ಚಿತ್ರೀಕರಿಸಿ ಸೋಶಿಯಲ್ ಮೀಡಿಯಾದಲ್ಲಿ ಹಾಕಿ ಅವಮಾನಿಸುವ ಅಗತ್ಯವೆನಿತ್ತು ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.
ಮಹಿಳೆಯ ವರ್ತನೆಗೆ ನೆಟ್ಟಿಗರ ತೀವ್ರ ಆಕ್ರೋಶ:
'ಮೇ ರಾಪಿಡೋ ವಾಲಾ ಬುಲಾಯಾ, ರಾಪಿಡೋ ವಾಲಾ ದೇಖ್ ರಹೇ ಹೋ? ಮೈನ್ ಚುಪ್ಕೆ ವಿಡಿಯೋ ಬನಾ ರಹೀ ಹೂಂ, ಜ್ಯಾದಾ ಅಫೆಂಡ್ ನಾ ಹೋ ಜಾಯೆ, ಆದರೆ ಮೈನ್ ಕಹಾ ಬೈತುಂಗೀ? ಕೋಯಿ ಮುಝೆ ಬತಾಯೇಗಾ' ಎಂದು ಆಕೆ ಹಿಂದಿಯಲ್ಲಿ ಹೇಳುತ್ತಾ ವೀಡಿಯೋ ಮಾಡಿದ್ದಾಳೆ. ಇದಕ್ಕೆ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆತ ಆತನ ಪಾಡಿಗೆ ಕಷ್ಟಪಟ್ಟು ದುಡಿಯುತ್ತಿದ್ದಾನೆ. ಆಕೆಗೆ ಸಮಸ್ಯೆಯಾಗಿದ್ದರೆ ಕೇವಲ ಬುಕ್ಕಿಂಗ್ ಕ್ಯಾನ್ಸಲ್ ಮಾಡಿ ಸುಮ್ಮನಿರಬಹುದಿತ್ತು. ಈ ರೀತಿ ಅವಮಾನಿಸುವ ಅಗತ್ಯ ಏನಿತ್ತು ಎಂದು ಪ್ರಶ್ನೆ ಮಾಡಿದ್ದಾರೆ. ಆತನನ್ನು ಆತನಿಗೆ ಗೊತ್ತಿಲ್ಲದೇ ರೆಕಾರ್ಡ್ ಮಾಡಿ ಲಕ್ಷಾಂತರ ಜನರ ಮುಂದೆ ಸಾರ್ವಜನಿಕವಾಗಿ ಅವಮಾನಿಸಲು ಆಕೆಗೆ ಯಾವ ಹಕ್ಕು ಇಲ್ಲಆಕೆಯ ಇಂತಹ ವರ್ತನೆ ಆತನಿಗಿಂತ ಆಕೆಯ ಗುಣವನ್ನು ಹೇಳುತ್ತಿದೆ. ನಾವು ಒಬ್ಬ ವ್ಯಕ್ತಿಯ ಶ್ರಮ ಹಾಗೂ ಪ್ರಮಾಣಿಕತೆಯನ್ನು ಮೇಲೇತ್ತಬೇಕು ಅವಮಾನವನ್ನು ಅಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇದೊಂದು ನಾಚಿಕೆಗೇಡಿನ ಕೃತ್ಯ, ನಾನು ಆ ರಾಪಿಡೋ ಚಾಲಕನನ್ನು ಬೆಂಬಲಿಸುತ್ತೇನೆ. ಈ ವಿಚಾರವನ್ನು ಕೂಡಲೇ ರಾಪಿಡೊ ಆಪ್‌ನ ಗಮನಕ್ಕೆ ತನ್ನಿ ಅವರು ಈ ಗ್ರಾಹಕನನ್ನು ಕಪ್ಪು ಪಟ್ಟಿಗೆ ಸೇರಿಸುತ್ತಾರೆ. ಆಕೆ ಮುಂದೆಂದು ರಾಪಿಡೋದಲ್ಲಿ ಪ್ರಯಾಣಿಸದಂತೆ ಮಾಡುತ್ತಾರೆ. ಆಕೆಗೆ ಟ್ರಿಪ್ ಕ್ಯಾನ್ಸಲ್ ಮಾಡುವ ಹಕ್ಕಿದೆ ಆದರೆ ಮತ್ತೊಬ್ಬರನ್ನು ಅವಮಾನಿಸುವ ಹಕ್ಕಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಆತ ಕಷ್ಟಪಟ್ಟು ತನ್ನ ಕೆಲಸ ಮಾಡುತ್ತಿದ್ದಾನೆ. ಆದರೆ ಈ ಮಹಿಳೆ ಯಾವುದೇ ಕಾರಣವಿಲ್ಲದೇ ಆ ವ್ಯಕ್ತಿಯನ್ನು ಅವಮಾನಿಸುತ್ತಿದ್ದಾಳೆ. ಆಕೆಗೆ ಆರಾಮವೆನಿಸದಿದ್ದರೆ ಆಕೆ ಟ್ರಿಪ್ ಕ್ಯಾನ್ಸಲ್ ಮಾಡಲಿ ಆದರೆ ಆಕೆ ಇಂಟರ್‌ನೆಟ್‌ನಲ್ಲಿ ಆತನ ವೀಡಿಯೋ ಹಾಕುವ ಮೂಲಕ ಆತನನ್ನು ಅವಮಾನಿಸಿದ್ದಾಳೆ ಎಂದು ಮತ್ತೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅನೇಕರು ಈ ವೀಡಿಯೋವನ್ನು ರಾಪಿಡೋ ಸಾಮಾಜಿಕ ಜಾಲತಾಣ ಖಾತೆಗೆ ಟ್ಯಾಗ್ ಮಾಡುವ ಮೂಲಕ ಆ ಗ್ರಾಹಕಿಯನ್ನು ಬ್ಲಾಕ್ ಮಾಡುವಂತೆ ಆಗ್ರಹಿಸಿದ್ದಾರೆ.
ಒಟ್ಟಿನಲ್ಲಿ ಯಾರನ್ನು ಅವಮಾನಿಸುವುದಕ್ಕೆ ಯಾರಿಗೂ ಹಕಿಲ್ಲ ಹೀಗಾಗಿ ಮಹಿಳೆಯ ಈ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಘಟನೆ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ.
