ವಿಶ್ವದಲ್ಲಿ ಅತೀ ಹೆಚ್ಚು ಜನರು ದ್ವೇಷಿಸುವ ರಾಷ್ಟ್ರ ಯಾವುದು? ವರ್ಲ್ಡ್ ಪಾಪ್ಯುಲೇಶನ್ ರಿವ್ಯೂವ್ ನಡೆಸಿದ ಅಧ್ಯಯನದಲ್ಲಿ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಅತೀ ಹೆಚ್ಚು ಜನರು ದ್ವೇಷಿರುವ ದೇಶಗಳ ಪೈಕಿ ಮೊದಲ ಸ್ಥಾನ ಯಾರಿಗೆ? ಈ ಪಟ್ಟಿಯಲ್ಲಿ ಟಾಪ್ 10 ಸ್ಥಾನದಲ್ಲಿದೆ ಭಾರತ.
ನವದೆಹಲಿ(ಜೂ.07) ಕಳೆದ ಕೆಲ ವರ್ಷಗಳಿಂದ ವಿಶ್ವದ ಹಲವು ರಾಷ್ಟ್ರಗಳಲ್ಲಿ ಯುದ್ಧ ಸಂಘರ್ಷ, ಉಗ್ರರ ದಾಳಿ, ಆತಂಕ ಸೇರಿದಂತೆ ಹಲವು ಜಾಗತಿಕ ಸಮಸ್ಯೆಗಳು ಹೆಚ್ಚಾಗುತ್ತಿದೆ. ಇದರ ಜೊತೆಗೆ ಜನಸಂಖ್ಯಾ ಅಸಮತೋಲನ ಸೇರಿದಂತೆ ಹಲವು ಕಾರಣಗಳು ಹಲವು ದೇಶಗಳ ನೆಮ್ಮದಿ ಕೆಡಿಸಿದೆ. ಗಡಿ ಸಮಸ್ಯೆ, ವಿದೇಶಾಂಗ ನೀತಿ, ತೆರಿಗೆ ನೀತಿಗಳು ಹಲವು ದೇಶಗಳು ಪರಸ್ಪರ ಬಡಿದಾಡಿಕೊಳ್ಳುವಂತೆ ಮಾಡಿದೆ. ಇದರ ನಡುವೆ ವರ್ಲ್ಡ್ ಪಾಪ್ಯುಲೇಶನ್ ರಿವ್ಯೂವ್ ಸಂಸ್ಥೆ ನಡೆಸಿದ ಅಧ್ಯಯನ ವರದಿಯಲ್ಲಿ ಕೆಲ ಕುತೂಹಲ ಮಾಹಿತಿ ಬಹರಂಗವಾಗಿದೆ. ವಿಶ್ವದಲ್ಲಿ ಅತೀ ಹೆಚ್ಚು ಜನರು ದ್ವೇಷಿಸುವ ರಾಷ್ಟ್ರ ಯಾವುದು? ಈ ಕುರಿತು ವರ್ಲ್ಡ್ ಪಾಪ್ಯುಲೇಶನ್ ರಿವ್ಯೂವ್ ಸಮೀಕ್ಷಾ ವರದಿ ಪ್ರಕಟಿಸಿದೆ. ಈ ವರದಿಯಲ್ಲಿ ಅತೀ ಹೆಚ್ಚು ಜನ ದ್ವೇಷಿಸು ರಾಷ್ಟ್ರಗಳ ಪೈಕಿ ಮೊದಲ ಸ್ಥಾನ ಚೀನಾ ಪಡೆದುಕೊಂಡಿದೆ.
ಅಂತಾರಾಷ್ಟ್ರೀಯ ವರದಿ, ಸಾರ್ವಜನಿಕ ಅಭಿಪ್ರಾಯ, ವಿದೇಶಾಂಗ ನೀತಿ, ನೆರೆ ಹೊರೆ ದೇಶಗಳ ಜೊತೆಗಿನ ಸಂಬಂಧ, ವಿಶ್ವದ ಇತರ ರಾಷ್ಟ್ರಗಳೊಂದಿಗಿನ ಸಂಬಂಧ ಹಾಗೂ ಸಂಘರ್ಷ ಸೇರಿದಂತೆ ಹಲವು ಮಾನದಂಡಗಳನ್ನು ಆಧರಿಸಿ ಈ ವರದಿ ತಯಾರಿಸಲಾಗಿದೆ.
ಅತೀ ಹೆಚ್ಚು ಜನ ದ್ವೇಷಿಸುವ ಪಟ್ಟಿಯಲ್ಲಿದೆ ಭಾರತ-ಪಾಕಿಸ್ತಾನ
ವಿಶ್ವದ ಅತೀ ಹೆಚ್ಚು ಜನರು ದ್ವೇಷಿಸುವ ದೇಶಗಳ ಪಟ್ಟಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ಸ್ಥಾನ ಪಡೆದಿದೆ. ಚೀನಾ ಮೊದಲ ಸ್ಥಾನ ಪಡೆದರೆ, ಭಾರತ ಹಾಗೂ ಪಾಕಿಸ್ತಾನ ಟಾಪ್ 10 ಪಟ್ಟಿಯಲ್ಲಿದೆ. ಭಾರತಕ್ಕಿಂತ ಪಾಕಿಸ್ತಾನವನ್ನು ಅತೀ ಹೆಚ್ಚು ಜನರು ದ್ವೇಷಿಸುತ್ತಾರೆ. ಕಾರಣ ಈ ಪಟ್ಟಿಯಲ್ಲಿ ಪಾಕಿಸ್ತಾನ 6ನೇ ಸ್ಥಾನದಲ್ಲಿದೆ. ಇತ್ತ ಭಾರತ 10ನೇ ಸ್ಥಾನದಲ್ಲಿದೆ. ಪಾಕಿಸ್ತಾನವನ್ನು ಭಾರತ ಮಾತ್ರವಲ್ಲ ಹಲವು ದೇಶಗಳು ದ್ವೇಷಿಸುತ್ತಿದೆ ಅನ್ನೋದು ಈ ಸಮೀಕ್ಷೆಯಿಂದ ಸ್ಪಷ್ಟವಾಗಿದೆ. ಪಾಕಿಸ್ತಾನದಲ್ಲಿನ ಭಯೋತ್ಪಾದಕತೆ, ಭಾರತ, ಆಫ್ಘಾನಿಸ್ತಾನದ ನಡುವಿನ ಸಂಬಂಧ, ಬಲೂಚಿಸ್ತಾನದಲ್ಲಿನ ಪಾಕಿಸ್ತಾನ ನಡೆಸುತ್ತಿರುವ ದಬ್ಬಾಳಿಕೆ, ಇತರ ರಾಷ್ಟ್ರಗಳಿಗೆ ಇಸ್ಲಾಮಿಕ್ ಮೂಲಭೂತವಾದ ಬಲವಾಗಿ ಹೇರಲು ಉಗ್ರರ ಬಳಕೆ ಸೇರಿದಂತೆ ಪಾಕಿಸ್ತಾನವನ್ನು ವಿಶ್ವದ ಜನರು ದ್ವೇಷಿಸಲು ಹಲವು ಕಾರಣಗಳನ್ನು ಈ ಅಧ್ಯಯನ ವರದಿ ಪಟ್ಟಿ ಮಾಡಿದೆ.
ಚೀನಾ ವಿರುದ್ದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ದ್ವೇಷವಿದೆ. ಚೀನಾ ನೀತಿಗಳು, ಚೀನಾ ಕುತುಂತ್ರ ಬುದ್ಧಿ, ಹಾಂಕಾಂಗ್, ತೈವಾನ್ ಹಾಗೂ ಮಕಾವೋ ದೇಶಗಳನ್ನು ತನ್ನ ಅಧೀನದಲ್ಲಿಟ್ಟುಕೊಂಡಿರುವುದು, ಸ್ವಾತಂತ್ರ್ಯ ನೀಡದೇ ಅಧಿಕಾರ ಚಲಾಯಿಸುತ್ತಿರುವುದು, ಉಯಿಗರ್ ಮುಸ್ಲಿಮರ ಮೇಲೆ ಚೀನಾದ ದಬ್ಬಾಳಿಕೆ, ಜಾಗತಿಕ ಮಟ್ಟದಲ್ಲಿ ಚೀನಾ ತಳೆಯುತ್ತಿರುವ ನಿಲುವು ಸೇರಿದಂತೆ ಹಲವು ಕಾರಣಗಳಿಂದ ಚೀನಾ ಮೇಲೆ ಹಲವರು ದ್ವೇಷ ಕಾರುತ್ತಾರೆ.
ವಿಶ್ವದ ಅತೀ ಹೆಚ್ಚು ಜನ ದ್ವೇಷಿಸುವ ಟಾಪ್ 10
1) ಚೀನಾ
2) ಅಮೆರಿಕ
3) ರಷ್ಯಾ
4) ಉತ್ತರ ಕೊರಿಯ
5) ಇಸ್ರೇಲ್
6) ಪಾಕಿಸ್ತಾನ
7) ಇರಾನ್
8) ಇರಾಕ್
9) ಸಿರಿಯಾ
10) ಭಾರತ
ಹೆಸರಿಗೆ ಅಮೆರಿಕ ವಿಶ್ವದ ದೊಡ್ಡಣ್ಣನಾದರೂ ಅತೀ ಹೆಚ್ಚು ಜನರು ದ್ವೇಷಿಸುತ್ತಾರೆ ಅನ್ನೋದು ಅಧ್ಯಯನ ವರದಿಯಲ್ಲಿ ಬಹಿರಂಗವಾಗಿದೆ. ಅತೀ ಹೆಚ್ಚು ದ್ವೇಷಿಸುವ ರಾಷ್ಟ್ರಗಳ ಪೈಕಿ 2ನೇ ಸ್ಥಾನದಲ್ಲಿದೆ. ಅಮೆರಿಕ ವಿದೇಶಾಂಗ ನೀತಿಗಳು, ಇತರ ದೇಶದ ಮೇಲೆ ತೋರುತ್ತಿರುವ ದರ್ಪ, ತಮಗೆ ಬೇಕಾದಂತೆ ನೀತಿಗಳ ಬದಲಾವಣೆ ಸೇರಿದಂತೆ ಹಲವು ಕಾರಣಗಳಿಂದ ಅಮೆರಿಕ ದ್ವೇಷದ ಪಟ್ಟಿಯಲ್ಲಿದೆ. ಇನ್ನು ಉಕ್ರೇನ್ ಮೇಲೆ ಯುದ್ಧ, ಉಕ್ರೇನ್ ಸರ್ವನಾಶ ಮಾಡಲು ಹೊರಟಿರುವ ರಷ್ಯಾ ಈ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದೆ. ಉತ್ತರ ಕೊರಿಯಾದಲ್ಲಿರುವ ಸರ್ವಾಧಿಕಾರ, ಕೆಲ ದೇಶಗಳಿಗೆ ನ್ಯೂಕ್ಲಿಯರ್ ಬೆದರಿಕೆ ಸೇರಿದಂತೆ ದೇಶದ ವಿದೇಶಾಂಗ ನೀತಿಗಳು, ಅಲ್ಲಿಯ ಜನರ ಸ್ವಾತಂತ್ರ್ಯ ಹಾಗೂ ಮೂಲಭೂತ ಹಕ್ಕಿಗೆ ಧಕ್ಕೆ ತಂದಿರುವ ಕಾರಣ ನಾರ್ತ್ ಕೊರಿಯಾ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.
ಪ್ಯಾಲೆಸ್ತಿನ್ ಮೇಲಿನ ದಾಳಿ, ಗಾಜಾ ಪಟ್ಟಿಯಲ್ಲಿ ನಡೆಸುತ್ತಿರುವ ಸೇನೆಯ ದಾಳಿಗಳಿಂದ ಹಲವು ಮುಸ್ಲಿಮ್ ರಾಷ್ಟ್ರಗಳು ಇಸ್ರೇಲ್‌ನ್ನು ದ್ವೇಷಿಸುತ್ತಿದೆ. ಹೀಗಾಗಿ ಇಸ್ರೇಲ್ 5ನೇ ಸ್ಥಾನ ಪಡೆದಿದೆ. ಸಿವಿಲ್ ವಾರ್, ಸಂಘರ್ಷ, ಆಂತರಿಕ ಸಮಸ್ಯೆ, ಅಸ್ಥಿರ ಸರ್ಕಾರ, ಜನರ ಮೂಲಭೂತ ಹಕ್ಕುಗಳ ಉಲ್ಲಂಘನೆ, ಮಾನವ ಹಕ್ಕುಗಳ ಉಲ್ಲಂಘನೆ ಸೇರಿದಂತೆ ಇತರ ಕಾರಣಗಳಿಂದ ಇರಾನ್, ಇರಾಖ್ ಹಾಗೂ ಸಿರಿಯಾ ಈ ಪಟ್ಟಿಯಲ್ಲಿ ಕ್ರಮವಾಗಿ 7, 8 ಹಾಗೂ 9ನೇ ಸ್ಥಾನ ಪಡೆದಿದೆ.
