ನವದೆಹಲಿ(ಮೇ.04): ಭಾರತದಲ್ಲಿ ಮಹಾಮಾರಿ ಕೊರೋನಾ ಸೋಂಕಿತರ ಸಂಖ್ಯೆ ಭರ್ಜರಿ ಏರಿಕೆ ಕಂಡಿದೆ. ಭಾನುವಾರ ಒಂದೇ ದಿನ 2530 ಹೊಸ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 41779ಕ್ಕೆ ತಲುಪಿದೆ. ಇದು ಈವರೆಗಿನ ಒಂದು ದಿನದ ಗರಿಷ್ಠ ಸೋಂಕು ಖಚಿತಪಟ್ಟ ಪ್ರಮಾಣವಾಗಿದೆ. ಇದೇ ವೇಳೆ ಭಾನುವಾರ 98 ಜನ ಸಾವನ್ನಪ್ಪಿದ್ದು, ಮೃತಪಟ್ಟವರ ಒಟ್ಟು ಸಂಖ್ಯೆ 1391ಕ್ಕೆ ತಲುಪಿದೆ. ಇದು ಕೂಡಾ ಗರಿಷ್ಠ ಸಾವಿನ ದಾಖಲೆಯಾಗಿದೆ.

ಇನ್ನು ಒಟ್ಟು ಸೋಂಕಿತರ ಪೈಕಿ ಈವರೆಗೂ 11,204 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಸೋಂಕಿನಿಂದ ಬಳಲುತ್ತಿರುವ 29 ಸಾವಿರಕ್ಕೂ ಹೆಚ್ಚು ಮಂದಿ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ ಭಾನುವಾರ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ದಾವಣಗೆರೆಯಲ್ಲಿ 21 ಕೇಸ್‌ ಸ್ಫೋಟ: ರಾಜ್ಯದಲ್ಲಿ ಒಂದೇ ದಿನ 34 ಮಂದಿಗೆ ಸೋಂಕು!

ಭಾರೀ ಏರಿಕೆ: ದೇಶದಲ್ಲಿ ಅತಿಹೆಚ್ಚು ಸೋಂಕಿತರನ್ನು ಒಳಗೊಂಡ ಮಹಾರಾಷ್ಟ್ರದಲ್ಲಿ ಮತ್ತೆ 678 ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ಇಲ್ಲಿ ಕೊರೋನಾ ಪೀಡಿತರ ಸಂಖ್ಯೆ 12974 ಆಗಿದ್ದು, ಬಲಿಯಾದವರ ಸಂಖ್ಯೆ 548ಕ್ಕೆ ಏರಿಕೆ ಕಂಡಿದೆ. ದೆಹಲಿಯಲ್ಲಿ ಭಾನುವಾರ 427, ಗುಜರಾತ್‌ನಲ್ಲಿ 374, ತಮಿಳುನಾಡಲ್ಲಿ 266 ಹೊಸ ಪ್ರಕರಣಗಳು ಪತ್ತೆಯಾಗಿವೆ.