Asianet Suvarna News Asianet Suvarna News

ದಾವಣಗೆರೆಯಲ್ಲಿ 21 ಕೇಸ್‌ ಸ್ಫೋಟ: ರಾಜ್ಯದಲ್ಲಿ ಒಂದೇ ದಿನ 34 ಮಂದಿಗೆ ಸೋಂಕು!

ರಾಜ್ಯದಲ್ಲಿ ನಿನ್ನೆ ಒಂದೇ ದಿನ 34 ಜನರಿಗೆ ಕೊರೋನಾ| ಒಟ್ಟು ಪ್ರಕರಣಗಳ ಸಂಖ್ಯೆ 635ಕ್ಕೆ ಏರಿಕೆ| ಬಾಗಲಕೋಟೆಯ ಬಾದಾಮಿಯಲ್ಲಿ ಮೊದಲ ಪ್ರಕರಣ ಪತ್ತೆ

34 New Coronavirus Cases Reported in Karnataka Total Number Raises To 635
Author
Bangalore, First Published May 4, 2020, 7:26 AM IST

ಬೆಂಗಳೂರು(ಮೇ.04): ಬೆಣ್ಣೆನಗರಿ ದಾವಣಗೆರೆಯಲ್ಲಿ ಒಂದೇ ದಿನ 21 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ತೀವ್ರ ಆತಂಕ ಸೃಷ್ಟಿಸಿದೆ. ಜತೆಗೆ ಬೆಂಗಳೂರಿನ ಪಾದರಾಯನಪುರ ವಾರ್ಡ್‌ನಲ್ಲಿ ಮತ್ತೆ ತಬ್ಲೀಘಿ ಜಮಾತ್‌ನವರ ಸಂಪರ್ಕದ ಹಿನ್ನೆಲೆಯ ಮೂವರು ಸೇರಿ ನಾಲ್ಕು ಮಂದಿಗೆ ಸೋಂಕು ದೃಢಪಟ್ಟಿದೆ.

ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 635ಕ್ಕೆ ಏರಿಕೆಯಾಗಿದ್ದು, ಭಾನುವಾರ ಒಂದೇ ದಿನ 34 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಂತಾಗಿದೆ. ಉಳಿದಂತೆ ಕಲಬುರಗಿಯಲ್ಲಿ ಆರು ಪ್ರಕರಣ, ಬಾಗಲಕೋಟೆಯ ಮುಧೋಳದಲ್ಲಿ ಎರಡು ಹಾಗೂ ಬಾದಾಮಿಯಲ್ಲಿ ಒಂದು ಪ್ರಕರಣ ವರದಿಯಾಗಿದೆ.

ಈಗ ಲಾಕ್‌ಡೌನ್ 3.0, ಅನೇಕ ಚಟುವಟಿಕೆ ಪುನಾರಂಭ: ಎಲ್ಲಿ, ಏನಿರುತ್ತೆ?

ದಾವಣಗೆರೆಯಲ್ಲಿ 21 ಮಂದಿಗೆ ಸೋಂಕು ಉಂಟಾಗಿರುವುದಾಗಿ ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಜಿ.ಬೀಳಗಿ ಸ್ಪಷ್ಟಪಡಿಸಿದ್ದಾರೆ. ಆದರೆ, ಆರೋಗ್ಯ ಇಲಾಖೆ ಸಾಂಕ್ರಾಮಿಕ ರೋಗಗಳ ವಿಭಾಗದ ಜಂಟಿ ನಿರ್ದೇಶಕ ಬಿ.ಜಿ. ಪ್ರಕಾಶ್‌ಕುಮಾರ್‌ ಅವರು, 21 ಮಂದಿ ಸೋಂಕನ್ನು ನಾವು ದೃಢಪಡಿಸಿಲ್ಲ. ಈ ಮಾದರಿಗಳನ್ನು ಹೆಚ್ಚುವರಿ ಪರೀಕ್ಷೆಗೆ ಪುಣೆಗೆ ಕಳುಹಿಸಲಾಗಿದೆ. ಪ್ರಾಥಮಿಕ ಪರೀಕ್ಷೆಯಿಂದ ಸೋಂಕು ದೃಢಪಡಿಸಲಾಗುವುದಿಲ್ಲ. ಹೀಗಾಗಿ 21 ಪ್ರಕರಣಗಳಲ್ಲಿ ಸೋಂಕು ತಗುಲಿರುವುದು ಇನ್ನೂ ದೃಢಪಟ್ಟಂತೆ ಅಲ್ಲ ಎಂದು ಹೇಳಿದ್ದಾರೆ.

ಆರೋಗ್ಯ ಇಲಾಖೆ ಬುಲೆಟಿನ್‌ನಲ್ಲಿ ದಾವಣಗೆರೆಯ 21 ಸೋಂಕು ಪ್ರಕರಣಗಳನ್ನು ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ. ಹೀಗಾಗಿ ಆರೋಗ್ಯ ಇಲಾಖೆ ಪ್ರಕಾರ ಭಾನುವಾರ 13 ಪ್ರಕರಣ ವರದಿಯಾಗಿದ್ದು, ರಾಜ್ಯದಲ್ಲಿ ಒಟ್ಟು 614 ಮಂದಿಗೆ ಸೋಂಕು ದೃಢಪಟ್ಟಿದೆ ಎಂದು ಹೇಳಿದೆ.

ಬೆಣ್ಣೆ ನಗರಿಯಲ್ಲಿ ಸೋಂಕು ಬಾಂಬ್‌:

ದಾವಣಗೆರೆಯಲ್ಲಿ ಭಾನುವಾರ 21 ಮಂದಿಗೆ ಸೋಂಕು ದೃಢಪಟ್ಟಿದ್ದು, ಒಟ್ಟು ಜಿಲ್ಲೆಯ ಸೋಂಕಿತರ ಸಂಖ್ಯೆ 28ಕ್ಕೆ ಏರಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಜಿ. ಬೀಳಗಿ ಹೇಳಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಗರದಲ್ಲಿ ಮೂರು ದಿನಗಳಿಂದ 330 ಮಂದಿಯ ಮಾದರಿ ಪರೀಕ್ಷಿಸಿದ್ದು ಈ ಪೈಕಿ ‘ಎ’ ಕೆಟಗರಿಯ 37 ಮಾದರಿಗಳಲ್ಲಿ 21 ಮಂದಿಗೆ ಸೋಂಕು ದೃಢಪಟ್ಟಿದೆ. ಉಳಿದ ಸ್ಯಾಂಪಲ್‌ಗಳ ವರದಿ ನಿರೀಕ್ಷೆಯಲ್ಲಿದ್ದೇವೆ ಎಂದು ತಿಳಿಸಿದರು.

ಹೊಸದಾಗಿ ಸೋಂಕು ದೃಢಪಟ್ಟ21 ಜನರಿಗೆ ಸೋಂಕಿತರ ಸಂಖ್ಯೆ (ಕೋಡ್‌) ನಿಗದಿಯಾಗಿಲ್ಲ. ಹೀಗಾಗಿ ಯಾರ ಸಂಪರ್ಕದಿಂದ ವ್ಯಕ್ತಿಗಳಿಗೆ ಸೋಂಕು ದೃಢವಾಗಿದೆ ಎಂದು ಸಂಪೂರ್ಣ ಮಾಹಿತಿ ಬಂದ ನಂತರವೇ ಗೊತ್ತಾಗಲಿದೆ ಎಂದು ಹೇಳಿದ್ದಾರೆ.

ರೋಣದಲ್ಲಿ ದೃಢಪಟ್ಟ ಮಹಾಮಾರಿ ಕೊರೋನಾ: ಹುಬ್ಬಳ್ಳಿಯಲ್ಲಿ ಆತಂಕ

ಪಾದರಾಯನಪುರದಲ್ಲಿ ಮತ್ತೆ 4 ಪ್ರಕರಣ

ಬೆಂಗಳೂರಿನ ಪಾದರಾಯನಪುರದಲ್ಲಿ ವರದಿಯಾದ 4 ಪ್ರಕರಣದಲ್ಲಿ ಮೂರು ಮಂದಿಗೆ ತಬ್ಲೀಘಿ ಜಮಾತ್‌ ಸಂಪರ್ಕದ 32 ವರ್ಷದ ವ್ಯಕ್ತಿಯಿಂದ ಸೋಂಕು ಹರಡಿದೆ. ಉಳಿದಂತೆ ರಾರ‍ಯಂಡಮ್‌ ಪರೀಕ್ಷೆ ವೇಳೆ ಸ್ಥಳೀಯ 24 ವರ್ಷದ ಯುವಕನಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಪಾದರಾಯನಪುರದಲ್ಲಿ 38 ಮಂದಿಯಲ್ಲಿ ಸೋಂಕು ದೃಢಪಟ್ಟಂತಾಗಿದೆ.

ಇನ್ನು ಬಾಗಲಕೋಟೆ ಮುಧೋಳದ ಮದರಸಾ ಬಳಿ ಕಾರ್ಯನಿರ್ವಹಿಸುತ್ತಿದ್ದಾಗ ಸೋಂಕಿತರಾಗಿದ್ದ ಪೊಲೀಸ್‌ ಒಬ್ಬರ ಎರಡನೇ ಹಂತದ ಸಂಪರ್ಕದಿಂದ ಮುಧೋಳದ ಇಬ್ಬರಿಗೆ ಸೋಂಕು ದೃಢಪಟ್ಟಿದೆ. ಬಾಗಲಕೋಟೆಯ ಬಾದಾಮಿಯಲ್ಲಿ 23 ವರ್ಷದ ‘ಸಾರಿ’ ಹಿನ್ನೆಲೆಯ ಮಹಿಳೆಗೆ ಸೋಂಕು ದೃಢಪಟ್ಟಿದೆ.

22 ಮಂದಿ ಗುಣಮುಖ

ರಾಜ್ಯದ ಸೋಂಕಿತರ ಪೈಕಿ ಮೈಸೂರಿನಲ್ಲಿ 11 ಮಂದಿ, ವಿಜಯಪುರ ಹಾಗೂ ಬಾಗಲಕೋಟೆಯಲ್ಲಿ ತಲಾ 4 ಮಂದಿ, ಚಿಕ್ಕಬಳ್ಳಾಪುರದ ಮೂರು ಮಂದಿ, ಬೆಂಗಳೂರು ಹಾಗೂ ಬಳ್ಳಾರಿಯಲ್ಲಿ ತಲಾ ಒಬ್ಬರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಈ ಮೂಲಕ ಒಟ್ಟಾರೆ ಗುಣಮುಖರಾದ ಒಟ್ಟು ಸಂಖ್ಯೆ 295 ತಲುಪಿದೆ.

Follow Us:
Download App:
  • android
  • ios