ರಾಯ್‌ಪುರದಲ್ಲಿ ನಡೆದ ಪಕ್ಷದ ಮಹಾಧಿವೇಶನದ ವೇಳೆ ಸಿಡಬ್ಲ್ಯುಸಿ ಪುನಾರಚನೆಗೆ ನಿರ್ಧರಿಸಲಾಗಿತ್ತು. 35 ಸದಸ್ಯರ ಈ ಸಮಿತಿಯಲ್ಲಿ ಎಸ್ಸಿ-ಎಸ್ಟಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಮಹಿಳೆಯರು 50 ವರ್ಷ ಕೆಳಗಿನ ಯುವಕರಿಗೆ ಶೇ.50ರಷ್ಟು ಮೀಸಲು ನೀಡಲು ನಿರ್ಧರಿಸಲಾಗಿತ್ತು. ಆದರೆ ಕರ್ನಾಟಕ ಚುನಾವಣೆಯಲ್ಲಿ ವರಿಷ್ಠರು ವ್ಯಸ್ತರಾದ ಕಾರಣ ಪುನಾರಚನೆ ವಿಳಂಬವಾಗಿತ್ತು.
ನವದೆಹಲಿ (ಮೇ 15, 2023): ಕಾಂಗ್ರೆಸ್ ಪಕ್ಷದ ನೀತಿ ನಿರೂಪಣೆಯ ನಿರ್ಣಾಯಕ ಸಮಿತಿಯಾದ ‘ಕಾಂಗ್ರೆಸ್ ಕಾರ್ಯಕಾರಿ ಸಮಿತಿ’ (ಸಿಡಬ್ಲ್ಯುಸಿ) ಶೀಘ್ರ ಪುನಾರಚನೆ ಆಗುವ ಸಾಧ್ಯತೆ ಇದೆ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಗೆದ್ದ ಕಾರಣ ನಾಯಕರಲ್ಲಿ ಹುಮ್ಮಸ್ಸು ಮೂಡಿದ್ದು, ಇದೇ ಅವಕಾಶ ಬಳಸಿಕೊಂಡು ಸಿಡಬ್ಲ್ಯುಸಿಯಲ್ಲೂ ಹೊಸ ನೀರು ಹರಿಸುವ ಬಗ್ಗೆ ಪಕ್ಷದ ಹೈಕಮಾಂಡ್ ಚಿಂತಿಸುತ್ತಿದೆ ಎಂದು ಮೂಲಗಳು ಹೇಳಿವೆ.
ಈ ವರ್ಷ ಫೆಬ್ರವರಿಯಲ್ಲಿ ರಾಯ್‌ಪುರದಲ್ಲಿ ನಡೆದ ಪಕ್ಷದ ಮಹಾಧಿವೇಶನದ ವೇಳೆ ಸಿಡಬ್ಲ್ಯುಸಿ ಪುನಾರಚನೆಗೆ ನಿರ್ಧರಿಸಲಾಗಿತ್ತು. 35 ಸದಸ್ಯರ ಈ ಸಮಿತಿಯಲ್ಲಿ ಎಸ್ಸಿ-ಎಸ್ಟಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಮಹಿಳೆಯರು 50 ವರ್ಷ ಕೆಳಗಿನ ಯುವಕರಿಗೆ ಶೇ.50ರಷ್ಟು ಮೀಸಲು ನೀಡಲು ನಿರ್ಧರಿಸಲಾಗಿತ್ತು. ಆದರೆ ಕರ್ನಾಟಕ ಚುನಾವಣೆಯಲ್ಲಿ ವರಿಷ್ಠರು ವ್ಯಸ್ತರಾದ ಕಾರಣ ಪುನಾರಚನೆ ವಿಳಂಬವಾಗಿತ್ತು.
ಇದನ್ನು ಓದಿ: ಕಾಂಗ್ರೆಸ್ ಸದಸ್ಯರಿಗೆ ಡ್ರಗ್ಸ್ ನಿರ್ಬಂಧ: ಸಿಡಬ್ಲ್ಯುಸಿಯಲ್ಲಿ ಶೇ. 50 ರಷ್ಟು ಮೀಸಲಿಗೆ ಅಸ್ತು
ಈಗ ಚುನಾವಣೆ ಮುಗಿದ ಬೆನ್ನಲ್ಲೇ ಪುನಾರಚನೆ ಕೂಗು ಎದ್ದಿದೆ. ಸಮಿತಿಯಲ್ಲಿ ಕಾಂಗ್ರೆಸ್ಸಿನ 3 ಹಾಲಿ ಮುಖ್ಯಮಂತ್ರಿಗಳ ಜತೆ ಹಳಬರು ಹಾಗೂ ಹೊಸಬರು ಸ್ಥಾನ ಪಡೆಯುವ ನಿರೀಕ್ಷೆಯಿದೆ. ಕರ್ನಾಟಕದ ಕಾಂಗ್ರೆಸ್ ಮುಖಂಡ ಎಚ್.ಕೆ. ಪಾಟೀಲ್, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರ ಹೆಸರೂ ಕೇಳಿಬರುತ್ತಿದೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲ್ಲಿಸಿದ ಸುನೀಲ್‌ಗೆ ಮಧ್ಯ ಪ್ರದೇಶ ಹೊಣೆ?
ಕರ್ನಾಟಕ ವಿಧಾನಸಭೆ ಚುನಾವಣೆಗೆ ರಣನೀತಿ ಹೆಣೆಯಲು ಕಾಂಗ್ರೆಸ್ ಪಕ್ಷವು ಖ್ಯಾತ ಚುನಾವಣಾ ತಂತ್ರಗಾರ ಸುನೀಲ್ ಕನುಗೋಲು ಅವರನ್ನು ನೇಮಿಸಿ ಯಶ ಕಂಡಿದೆ. ಸುನೀಲ್ ರೂಪಿಸಿದ ನಾನಾ ತಂತ್ರಗಳು ಯಶಸ್ವಿಯಾಗಿದ್ದು, ಅವು ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತರಲು ಕಾರಣೀಭೂತವಾಗಿವೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಪಕ್ಷ ಮುಂಬರುವ ಮಧ್ಯಪ್ರದೇಶ ಚುಣಾವಣೆಯಲ್ಲಿ ಕನುಗೋಲು ಅವರನ್ನು ಪಕ್ಷದ ಪರವಾಗಿ ತಂತ್ರ ರೂಪಿಸಲು ನೇಮಕ ಮಾಡಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಸಿಡಬ್ಲ್ಯುಸಿಗೆ ಸದಸ್ಯರ ನೇಮಕದ ಪರಮಾಧಿಕಾರ ಖರ್ಗೆ ಹೆಗಲಿಗೆ: ಸೋನಿಯಾ, ರಾಹುಲ್‌ಗೆ ಕಾಯಂ ಸದಸ್ಯತ್ವ
ಕನುಗೋಲು 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಪರ ರಣನೀತಿ ರೂಪಿಸಿದ ಪ್ರಶಾಂತ ಕಿಶೋರ್ ತಂಡದಲ್ಲಿದ್ದರು. ನಂತರ ಪ್ರತ್ಯೇಕಗೊಂಡು 2017ರಲ್ಲಿ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಪರ ರಣನೀತಿ ರೂಪಿಸಿದ್ದರು. ಈಗ 2023ರಲ್ಲಿ ಅವರು ಕರ್ನಾಟಕ ಕಾಂಗ್ರೆಸ್ ಪರ ರಣನೀತಿ ರೂಪಿಸಿ ಯಶಸ್ಸು ಕಂಡಿದ್ದಾರೆ. ಕರ್ನಾಟಕ ಚುನಾವಣೆಯಲ್ಲಿ ಪೇಸಿಎಂ ಅಭಿಯಾನ, ಕ್ರೈ ಸಿಎಂ ಆಭಿಯಾನ ಹಾಗೂ ಚುನಾವಣೆಯ ಕೊನೆಗೆ ಕಾಂಗ್ರೆಸ್ ಪ್ರಕಟಿಸಿದ ‘ಬಿಜೆಪಿ ಭ್ರಷ್ಟಾಚಾರ ರೇಟ್ ಕಾರ್ಡ್’ ಹಿಂದಿನ ಪ್ರೇರಣೆಯೇ ಕನುಗೋಲು ಎಂದು ಮೂಲಗಳು ಹೇಳಿವೆ.
ಹೀಗಾಗಿ ಈ ಯಶಸ್ಸಿನಿಂದ ಉತ್ತೇಜಿತವಾಗಿರುವ ಕಾಂಗ್ರೆಸ್, ನವೆಂಬರ್‌ನಲ್ಲಿ ನಡೆಯಲಿರುವ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಗೆ ರಣನೀತಿ ರೂಪಿಸುವ ಹೊಣೆಯನ್ನು ಕನುಗೋಲು ಅವರಿಗೆ ವಹಿಸಿದೆ. ಕರ್ನಾಟಕ ಮಾದರಿಯಲ್ಲೇ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ವಿರುದ್ಧ ಆಡಳಿತ ವಿರೋಧಿ ಅಲೆ ಏಳುವ ಸಾಧ್ಯತೆ ಇದೆ. ಅಲ್ಲದೆ, ಮಧ್ಯಪ್ರದೇಶ ಬಿಜೆಪಿಯಲ್ಲಿ ಹಲವು ಬಣಗಳಿವೆ. ಬಿಜೆಪಿಯ ಈ ಒಡಕನ್ನು ಸಮರ್ಥವಾಗಿ ಬಳಸಿಕೊಳ್ಳುವುದು ಹಾಗೂ ಮಧ್ಯಪ್ರದೇಶ ಕಾಂಗ್ರೆಸ್‌ನ ದಿಗ್ವಿಜಯ ಸಿಂಗ್ ಹಾಗೂ ಕಮಲ್‌ನಾಥ್ ಜೋಡಿಯನ್ನು ಒಟ್ಟುಗೂಡಿಸಿ ರಣನೀತಿ ರೂಪಿಸುವುದು, ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿರುವ ಜ್ಯೋತಿರಾದಿತ್ಯ ಸಿಂಧಿಯಾರನ್ನು ಕಟ್ಟಿಹಾಕುವ ತಂತ್ರ ರೂಪಿಸುವುದು - ಇತ್ಯಾದಿ ಹೊಣೆಯನ್ನು ಕನುಗೋಲು ಅವರಿಗೆ ವಹಿಸಲಾಗಿದೆ ಎಂದು ಮೂಲಗಳು ಹೇಳಿವೆ.
