ನವದೆಹಲಿ(ಆ.07): ಗುರುವಾರ ದೇಶಾದ್ಯಂತ ದಾಖಲೆಯ 61,669 ಹೊಸ ಕೊರೋನಾ ಸೋಂಕಿತರು ಪತ್ತೆಯಾಗಿದ್ದಾರೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 2019930ಕ್ಕೆ ತಲುಪಿದೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ 20 ಲಕ್ಷ ಸೋಂಕಿತರನ್ನು ಹೊಂದಿದ 3ನೇ ದೇಶವಾಗಿ ಭಾರತ ಹೊರಹೊಮ್ಮಿದೆ. ಇದೇ ವೇಳೆ ನಿನ್ನೆ 891 ಜನರ ಸಾವನ್ನಪ್ಪಿದ್ದು, ಈವರೆಗೆ ದೇಶದಲ್ಲಿ ವೈರಸ್‌ಗೆ ಬಲಿಯಾದವರ ಪ್ರಮಾಣ 41573ಕ್ಕೆ ಮುಟ್ಟಿದೆ. ಇದರೊಂದಿಗೆ ವಿಶ್ವದಲ್ಲೇ ಸೋಂಕಿಗೆ ಅತಿ ಹೆಚ್ಚು ಬಲಿಯಾದವರ ಪಟ್ಟಿಯಲ್ಲಿ ಭಾರತ 5ನೇ ಸ್ಥಾನ ತಲುಪಿದೆ. ಈ ನಡುವೆ ಗುರುವಾರ 49619 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಈ ಮೂಲಕ ಈವರೆಗೆ ಗುಣಮುಖರಾದವರ ಪ್ರಮಾಣ 1370347ಕ್ಕೆ ತಲುಪಿದೆ.

ಗುರುವಾರ ಮಹಾರಾಷ್ಟ್ರದಲ್ಲಿ ದಾಖಲೆಯಾ 11,514 ಸೋಂಕಿತರು ಪತ್ತೆಯಾಗಿದ್ದು, 316 ಜನ ಸಾವನ್ನಪ್ಪಿದ್ದಾರೆ. ಉಳಿದಂತೆ ಆಂಧ್ರಪ್ರದೇಶದಲ್ಲಿ 10,328 ಸೋಂಕು, 72 ಸಾವು, ಕರ್ನಾಟಕದಲ್ಲಿ 6805 ಸೋಂಕು, 93 ಸಾವು, ತಮಿಳುನಾಡಿನಲ್ಲಿ 5684 ಸೋಂಕು, 110 ಸಾವು, ಉತ್ತರ ಪ್ರದೇಶದಲ್ಲಿ 4586 ಸೋಂಕು, 61 ಸಾವು, ಬಿಹಾರದಲ್ಲಿ 3416 ಸೋಂಕು, 19 ಸಾವು ದಾಖಲಾಗಿದೆ.

190 ದಿನದಲ್ಲಿ 20 ಲಕ್ಷ:

2020ರ ಜ.30ರಂದು ಭಾರತದಲ್ಲಿ ಮೊದಲ ಕೊರೋನಾ ಸೋಂಕು ದೃಢಪಟ್ಟಿತ್ತು. ಅದಾದ 190 ದಿನಗಳಲ್ಲಿ ದೇಶದಲ್ಲಿ ಸೋಂಕಿತರ ಸಂಖ್ಯೆ 20 ಲಕ್ಷದ ಗಡಿ ದಾಟಿದೆ. ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ ಮತ್ತು ದೆಹಲಿ ರಾಜ್ಯಗಳು ದೇಶದಲ್ಲಿ ಅತಿ ಹೆಚ್ಚು ಸೋಂಕಿತರನ್ನು ಒಳಗೊಂಡಿವೆ.

ಗುರುವಾರ 6805 ಕೇಸ್, ಬಿಎಸ್‌ವೈ ಆರೋಗ್ಯ ಈಗ ಹೇಗಿದೆ?

ಚೇತರಿಕೆ ಏರಿಕೆ: ದೇಶದಲ್ಲಿ 20 ಲಕ್ಷ ಸೋಂಕಿತರ ಪೈಕಿ 13 ಲಕ್ಷಕ್ಕೂ ಹೆಚ್ಚು ಜನರು ಚೇತರಿಸಿಕೊಂಡಿದ್ದು, ಸೋಂಕಿತರ ಚೇತರಿಕೆ ಪ್ರಮಾಣ ಶೇ.67.84ಕ್ಕೆ ತಲುಪಿದೆ. ಜೊತೆಗೆ 20 ಲಕ್ಷ ಸೋಂಕಿತರಲ್ಲಿ 41573 ಜನರು ಸಾವನ್ನಪ್ಪುವ ಮೂಲಕ ಸರಾಸರಿ ಸಾವಿನ ಪ್ರಮಾಣ ಶೇ.2.05ರಷ್ಟುದಾಖಲಾಗಿದೆ. ಇನ್ನು ಪ್ರತಿನಿತ್ಯ ಭಾರತದಲ್ಲಿ 6 ಲಕ್ಷ ಸೋಂಕಿತರ ಪತ್ತೆ ಪರೀಕ್ಷೆ ನಡೆಸಲಾಗುತ್ತಿದೆ. ಈ ವರೆಗೆ 2.21 ಕೋಟಿ ಜನರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಅಂದರೆ ಪ್ರತಿ 10 ಲಕ್ಷ ಜನರಿಗೆ 16050 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ಟಾಪ್‌ 5 ಕೊರೋನಾ ಪೀಡಿತ ರಾಜ್ಯಗಳು

ರಾಜ್ಯ ಸೋಂಕಿತರ ಸಂಖ್ಯೆ

ಮಹಾರಾಷ್ಟ್ರ 4,79,779

ತಮಿಳ್ನಾಡು 2,79,144

ಆಂಧ್ರಪ್ರದೇಶ 1,96,789

ಕರ್ನಾಟಕ 1,58,254

ದೆಹಲಿ 1,41,531

ಟಾಪ್‌ 5 ಕೊರೋನಾ ಸಾವು ದಾಖಲಿಸಿದ ರಾಜ್ಯಗಳು

ರಾಜ್ಯ ಸಾವಿನ ಸಂಖ್ಯೆ

ಮಹಾರಾಷ್ಟ್ರ 16,792

ತಮಿಳುನಾಡು 4,571

ದೆಹಲಿ 4,059

ಕರ್ನಾಟಕ 2,897

ಗುಜರಾತ್‌ 2,584

ದೇಶದಲ್ಲಿ ಕೊರೋನಾ ಸಾಗಿಬಂದ ಹಾದಿ

ದಿನ ಸೋಂಕಿತರ ಸಂಖ್ಯೆ ಅವಧಿ

2020ರ ಜ. 30 ಮೊದಲ ವ್ಯಕ್ತಿಗೆ ಸೋಂಕು 00

2020 ಮಾ. 29 1000 58 ದಿನ

2020 ಏ. 14 10000 16 ದಿನ

2020 ಮೇ 19 101,139 35 ದಿನ

2020 ಜೂ. 27 5,08,953 39 ದಿನ

2020 ಜು. 17 1,003,832 20 ದಿನ

2020 ಜು. 29 1,531,669 12 ದಿನ

2020 ಆ. 06 20,09,144 08 ದಿನ